
ಹೊನ್ನಾಳಿ: ಪಟ್ಟಣದಲ್ಲಿ ನಡೆಯುತ್ತಿರುವ ಗದಗದಿಂದ ಹೊನ್ನಾಳಿ ಚತುಷ್ಪಥ ರಾಜ್ಯ ಹೆದ್ದಾರಿ ವಿಸ್ತರಣೆ ಮತ್ತು ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.
ಶನಿವಾರ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತುಮ್ಮಿನಕಟ್ಟೆ ರಸ್ತೆಯುದ್ದಕ್ಕೂ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಚತುಷ್ಪಥ ರಸ್ತೆಯ ಎರಡೂ ಬದಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಗೆ ಸರಿಯಾದ ಪ್ರಮಾಣದಲ್ಲಿ ಸಿಮೆಂಟ್ ಬಳಸದೇ ಕಾಮಗಾರಿ ಮಾಡಲಾಗಿದೆ. ಚರಂಡಿಗಳಿಗೆ ನೀರಿನ ಕ್ಯೂರಿಂಗ್ ಕೂಡ ಮಾಡಿಲ್ಲ. ಇದರಿಂದ ಬಹುಬೇಗ ಚರಂಡಿ ಕುಸಿದು ಬೀಳುವ ಅಪಾಯವಿದೆ. ತಕ್ಷಣ ಕಾಮಗಾರಿ ಸರಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದರು.
2016ರಲ್ಲಿ ಗದಗ– ಹೊನ್ನಾಳಿ ಚತುಷ್ಪಥ ರಸ್ತೆ ಕಾಮಗಾರಿಗೆ ₹ 902 ಕೋಟಿ ಅನುದಾನವನ್ನು ನಾವೆಲ್ಲರೂ ಹೋರಾಟ ಮಾಡಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಬಿಡುಗಡೆ ಮಾಡಿಸಿದ್ದೆವು. ಈಗ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕುಂಬಾರ ಬೀದಿವರೆಗೆ ನಡೆಯುತ್ತಿರುವ ಚರಂಡಿ ಕಾಮಗಾರಿ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ’ ಎಂದು ಕಿಡಿಕಾರಿದರು.
ಚತುಷ್ಪಥ ರಸ್ತೆ ಕಾಮಗಾರಿಯ ಯೋಜನೆ ಪ್ರಕಾರ ರಸ್ತೆ ಮಧ್ಯದಿಂದ 11.5 ಮೀ.ನಂತೆ ಎರಡು ಬದಿ ಸೇರಿ ಒಟ್ಟು 23 ಮೀಟರ್ ವಿಸ್ತರಣೆ ಆಗಬೇಕು. ಆದರೆ ರಾಜಕೀಯ ಒಳನುಸುಳುವಿಕೆಯಿಂದ ತಾರತಮ್ಯ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ರಸ್ತೆ ಮಧ್ಯದಿಂದ 11.5 ಮೀಟರ್ ಬದಲಾಗಿ 8.5 ಮೀ, 9 ಮೀ. ಅಳತೆ ಕಂಡುಬಂದಿದೆ. ಹೀಗೆ ತಮಗೆ ಬೇಕಾದ ರೀತಿಯಲ್ಲಿ ರಸ್ತೆ ವಿಸ್ತರಣೆ ಮಾಡಿ ಸಿಮೆಂಟ್ ಒರೆಸುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.
ಅಧಿಕಾರಿಗಳಿಗೆ ತರಾಟೆ: ಸ್ಥಳದಲ್ಲಿದ್ದ ಕೆ– ಶಿಪ್ ಅಧಿಕಾರಿಗಳಿಗೆ ರೇಣುಕಾಚಾರ್ಯ ತರಾಟೆ ತೆದುಕೊಂಡರು. ‘ಸ್ಥಳಕ್ಕೆ ಮೇಲಧಿಕಾರಿಗಳನ್ನು ಕರೆಯಿರಿ, ನಿಮ್ಮ ಎಸ್ಟಿಮೇಟ್ ಕಾಪಿ ಕೊಡಿ’ ಎಂದು ಕೇಳಿದರು. ಅಧಿಕಾರಿಗಳ ಬಳಿ ಎಸ್ಟಿಮೇಟ್ ಕಾಪಿ ಇರಲಿಲ್ಲ. ಇದಕ್ಕೆ ಮತ್ತಷ್ಟೂ ಗರಂ ಆದ ಅವರು, ‘ಎಸ್ಟಿಮೇಟ್ ಕಾಪಿ ಇಲ್ಲದೇ ಹೇಗೆ ಕೆಲಸ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.
ಮುಖಂಡರಾದ ಜೆ.ಕೆ.ಸುರೇಶ್, ಕೆ.ವಿ. ಶ್ರೀಧರ, ಬಾಬು ಹೋಬಳದಾರ, ರಂಗಪ್ಪ, ಎಸ್.ಎಸ್. ಬೀರಪ್ಪ, ಎಂ.ಎಸ್. ಫಾಲಾಕ್ಷಪ್ಪ ಸೇರಿ ನೂರಾರು ಜನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.