ಮಾಯಕೊಂಡ: ‘ಕ್ಷೇತ್ರ ವ್ಯಾಪ್ತಿಯ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತಾಸಕ್ತಿ ಕಾಯುವುದು ನನ್ನ ಜವಾಬ್ದಾರಿ. ಈ ಸಂಬಂಧ ಈಗಾಗಲೇ ಅಧಿವೇಶನದಲ್ಲಿ ಚರ್ಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲುವೆ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹ 40 ಕೋಟಿ ಅನುದಾನ ನೀಡಲು ಒಪ್ಪಿದ್ದು, ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ’ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.
ಸಮೀಪದ ಬಾಡಾ ಗ್ರಾಮದ ಮರುಳಸಿದ್ದೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾ ಡ್ಯಾಂ ನಿರ್ಮಾಣ ಆದಾಗಿನಿಂದ ಕಾಲುವೆ ದುರಸ್ತಿ ಆಗಿಲ್ಲ, ಈಗ ಹೂಳು ಎತ್ತುವ ಕೆಲಸಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾಲುವೆ, ಸೇತುವೆಗಳನ್ನ ಖುದ್ದು ನಾನೇ ವೀಕ್ಷಿಸಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಶೀಘ್ರವೇ ಭದ್ರಾ ಗೇಟ್ ತೆರೆದು ಕೆರೆಗಳನ್ನ ತುಂಬಿಸುವುದು ನಮ್ಮ ಆದ್ಯತೆಯಾಗಿದೆ. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ನೀರಿನ ಸಮರ್ಪಕ ನಿರ್ವಹಣೆ ಮೂಲಕ ಬೇಸಿಗೆ ಹಂಗಾಮಿನ ಬೆಳೆಗಳಿಗೂ ನೀರು ಒದಗಿಸುವ ಕೆಲಸ ವೈಜ್ಞಾನಿಕವಾಗಿ ಆಗಬೇಕು. ನೀರು ಬಳಕೆದಾರರ ಸಂಘಗಳು ಉತ್ತಮವಾಗಿ ಕೆಲಸ ನಿರ್ವಹಿಸಬೇಕು’ ಎಂದರು.
ಅತ್ತಿಗೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಭದ್ರಾ ನೀರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೋಲಾಗಿದೆ. ಈಗ ಇರುವ ನೀರನ್ನ ಸಮಯೋಚಿತವಾಗಿ ಬಳಸಿಕೊಳ್ಳಬೇಕು. ನೀರನ್ನ ಉಳಿಸಿ ಬೇಸಿಗೆ ಹಂಗಾಮಿನ ಬೆಳೆಗೆ ಕೊಡುವಂತಾಗಬೇಕು ಎಂದರು.
ಮುರಿಗೇಂದ್ರಪ್ಪ, ರಾಮಗೊಂಡನಹಳ್ಳಿ ಶರಣಪ್ಪ, ಮಹೇಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುಭಾಶ್ ಚಂದ್ರ ಮಾತನಾಡಿದರು.
ಬಾಡಾ ಸುರೇಶ್, ಅಣಬೇರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬುಡೇನ್ ಸಾಬ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮುರಿಗೇಶ್, ರಾಜಣ್ಣ, ಮುಖಂಡರಾದ ರವಿಕುಮಾರ್ ಅತ್ತಿಗೆರೆ, ಶರಣಪ್ಪ ರಾಮಗೊಂಡನಹಳ್ಳಿ, ರಾಜಣ್ಣ, ಸಿದ್ದೇಶಣ್ಣ, ಮಲ್ಲನಗೌಡ, ಪ್ರಭಣ್ಣ, ಕೋಟ್ಯಾಳ್ ರಾಜಣ್ಣ, ಎಸ್.ಎಸ್. ರವಿ, ಬಸವರಾಜಪ್ಪ, ಎಸ್.ವೆಂಕಟೇಶ್, ಎಂ.ಎಸ್. ಮಂಜಪ್ಪ, ಮಹೇಂದ್ರ, ಧರ್ಮಣ್ಣ, ಉಮಾಪತಿ, ಅತ್ತಿಗೆರೆ, ಬಾಡಾ, ಮಳಲ್ಕೆರೆ, ಲೋಕಿಕೆರೆ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.