ADVERTISEMENT

ದಾವಣಗೆರೆ | ಕೊರೊನಾಗಿಂತ ವದಂತಿಗಳದ್ದೇ ನೋವು, ಅಳಲು ತೋಡಿಕೊಂಡ ಸ್ಟಾಫ್‌ ನರ್ಸ್‌

ಬಾಲಕೃಷ್ಣ ಪಿ.ಎಚ್‌
Published 23 ಮೇ 2020, 19:45 IST
Last Updated 23 ಮೇ 2020, 19:45 IST
ಸ್ಟಾಫ್‌ ನರ್ಸ್‌
ಸ್ಟಾಫ್‌ ನರ್ಸ್‌   

ದಾವಣಗೆರೆ: ‘ಕಣ್ಣಿಗೆ ಕಾಣದ ಕೊರೊನಾ ವೈರಸ್‌ ನೀಡಿದ ನೋವಿಗಿಂತ ನನ್ನ ಬಗ್ಗೆ ಹಬ್ಬಿಸಿದ ವದಂತಿಗಳು ನೀಡಿದ ನೋವೇ ಹೆಚ್ಚು’.

ಜಿಲ್ಲೆಯು ಹಸಿರು ವಲಯಕ್ಕೆ ಹೋದ ಮೇಲೆ ಕೊರೊನಾ ಪತ್ತೆಯಾದ ಮೊದಲ ವ್ಯಕ್ತಿಯಾದ ಬಾಷಾನಗರದ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ (ಪಿ–533) ತೋಡಿಕೊಂಡ ಅಳಲು ಇದು. 27 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಶುಕ್ರವಾರ ಬಿಡುಗಡೆಯಾಗಿರುವ ಅವರು ತನ್ನ ಅನುಭವವನ್ನು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡರು.

‘ಕೊರೊನಾ ವೈರಸ್‌ ಎಲ್ಲಿಂದ ನನಗೆ ಬಂತು ಎಂಬುದು ಗೊತ್ತಿಲ್ಲ. ಜನರ ಮಧ್ಯೆ ಇದ್ದು ಕೆಲಸ ಮಾಡುವ ವೃತ್ತಿ ನನ್ನದು. ಮನೆಯಲ್ಲಿ, ಆಸ್ಪತ್ರೆಯಲ್ಲಿ ಅಂತರ ಕಾಯ್ದುಕೊಂಡರೂ ರೋಗಿಗಳು ಬಂದಾಗ ಅವರ ಹತ್ತಿರ ಹೋಗಲೇಬೇಕಾಗುತ್ತದೆ. ಹಾಗೆ ಯಾರಿಂದಲೋ ಬಂದಿರಬೇಕು. ಕೊರೊನಾ ಬರುವ ಮೊದಲೇ ಅದರ ಬಗ್ಗೆ ತಿಳಿದುಕೊಂಡಿದ್ದೆ. ಮನೆಯಲ್ಲಿ ಸುತ್ತಮುತ್ತಲಲ್ಲಿ ಈ ಬಗ್ಗೆ ಹೇಳಿದ್ದೆ. ಕೊರೊನಾ ಬಂದಾಗಲೂ ನನಗೇನೂ ಆಗುವುದಿಲ್ಲ. ಹೆದರಬೇಡಿ. ಹುಷಾರಾಗಿ ಬರುತ್ತೇನೆ ಎಂದು ಮನೆಯಲ್ಲಿ ಧೈರ್ಯ ಹೇಳಿದ್ದೆ’ ಎಂದು ವಿವರಿಸಿದರು.

ADVERTISEMENT

‘ನನಗೆ ಕೊರೊನಾ ಬಂದಾಗ ನನ್ನ ಮನೆಯಲ್ಲಿ ಯಾರೂ ಹೆದರಿಕೊಳ್ಳಲಿಲ್ಲ. ಆದರೆ ಸಂಬಂಧಿಕರು ಹೆದರಿಕೊಂಡರು. ನನ್ನ ಅತ್ತಿಗೆಗೆ ಬಿ.ಪಿ. ಶುಗರ್‌ ಇತ್ತು. ಅವರು ಹೆದರಿದ್ದರಿಂದಲೇ ಮೃತಪಟ್ಟರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಆಸ್ಪತ್ರೆಯಲ್ಲಿ ಸರ್ಜನ್‌, ಡ್ಯೂಟಿ ಡಾಕ್ಟರ್‌, ನರ್ಸ್‌, ಆಯಾಗಳು ಚೆನ್ನಾಗಿ ನೋಡಿಕೊಂಡರು. ಜಿಲ್ಲಾಧಿಕಾರಿ, ಎಸ್‌ಪಿ, ಡಿಎಚ್‌ಒ ಸರ್ವೇಕ್ಷಣಾಧಿಕಾರಿ ಸಹಿತ ಎಲ್ಲರೂ ನನ್ನ ಆರೋಗ್ಯದ ಬಗ್ಗೆ ವೈದ್ಯರಲ್ಲಿ ವಿಚಾರಿಸುತ್ತಿದ್ದರು. ನನ್ನ ಮೇಲಧಿಕಾರಿಗಳು ಕೂಡ ಏನೂ ಆಗುವುದಿಲ್ಲ ಎಂದು ಧೈರ್ಯ ತುಂಬಿದ್ದರು. ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಹೊರಗಿನ ತೊಂದರೆಗಳೇ ಕಾಡುತ್ತಿವೆ’ ಎಂದು ತಿಳಿಸಿದರು.

‘ಫೋಟೊ ಕಳುಹಿಸಿ ಅನ್ನುವರು’: ‘ನನ್ನ ನಂಬರ್‌ ಲೀಕ್‌ ಆಗಿತ್ತು. ಹಾಗಾಗಿ ಯಾರ‍್ಯಾರೋ ಅಪರಿಚಿತರು ಕರೆ ಮಾಡಿ ನಿಮ್ಮ ಫೋಟೊ ಕಳುಹಿಸಿ ಎನ್ನುತ್ತಿದ್ದರು. ವಿಡಿಯೊ ಕಾಲ್‌ ಮಾಡಿ ನಿಮ್ಮನ್ನು ನೋಡಬೇಕು ಎನ್ನುತ್ತಿದ್ದರು. ಈ ಎಲ್ಲ ಕಿರಿಕಿರಿಗಳನ್ನು ನಿಭಾಯಿಸಿದರೆ ಮನಸ್ಸಿಗೆ ಆಘಾತವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ನನ್ನ ಬಗ್ಗೆ ಹಲವರು ಬರೆದಿದ್ದಾರೆ’ ಎಂದು ವಿಷಾದಿಸಿದರು.

‘ಕೊರೊನಾ ಎಲ್ಲಿಂದ ಬಂತು? ಎಷ್ಟು ಮಂದಿಗೆ ಹಬ್ಬಿಸಿದ್ದೇನೆ ಎಂದು ಹೇಳಲು ₹ 50 ಕೋಟಿ ಕೇಳಿದ್ದೇನೆ ಎಂದು ವದಂತಿ ಹಬ್ಬಿಸಿದರು. ನನಗೂ ವೈಯಕ್ತಿಕ ಬದುಕು ಇದೆ. ಪತಿ, ಮಕ್ಕಳು, ಮನೆ ಇದೆ. ಕೊರೊನಾ ಬೇಕಂತಲೇ ಯಾರಾದರೂ ತಂದುಕೊಳ್ಳುತ್ತಾರಾ? ವಿದ್ಯಾವಂತಳಾಗಿ ನಾನು ಯಾಕಾದರೂ ಗುಂಡಿಗೆ ಬೀಳಬೇಕು? ಅಷ್ಟು ಪರಿಜ್ಞಾನ ಇಲ್ಲದೇ ನನ್ನನ್ನು ಕೆಟ್ಟದಾಗಿ ಬಿಂಬಿದರು’ ಎಂದು ನೊಂದುಕೊಂಡರು.

‘ಮನೆಯಲ್ಲಿ ಸೋರೆಬಾಯಿ ಕಟ್ಟಬಹುದು. ಜನರ ಬಾಯಿ ಕಟ್ಟಲು ಸಾಧ್ಯವಿಲ್ಲ ಎಂದು ಸುಮ್ಮನಾಗಿದ್ದೇನೆ. ಆದರೂ ಮನಸ್ಸಿಗೆ ಆದ ನೋವು ಪ್ರತಿದಿನ ಕಾಡುತ್ತಿದೆ. ಎಷ್ಟೋ ದಿನ ರಾತ್ರಿ ಅಳುತ್ತಾ ಮಲಗಿದ್ದೇನೆ. ಒಂದೂವರೆ ದಶಕದಿಂದ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ. ಕುಹಕ ಆಡುವವರು ಆಡಲಿ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಹೀಗೆ ಬಿಟ್ಟು ಇನ್ನಷ್ಟು ಜಾಸ್ತಿಯಾದರೆ ತಲೆ ಎತ್ತಿ ನಡೆಯುವುದು ಹೇಗೆ ಎಂಬ ಪ್ರಶ್ನೆಯೂ ಎದುರಾಗಿದೆ’ ಎಂದು ಮಾತು ಮುಗಿಸಿದರು.

‘ದಾಖಲೆ ಇದ್ದರೆ ಕೊಡಿ’
‘ಕೊರೊನಾವನ್ನು ಬೆಂಗಳೂರಿನಿಂದ ತಂದೆ, ಮುಂಬೈಯಿಂದ ತಂದೆ... ಎಂದೆಲ್ಲ ದಿನಕ್ಕೊಂದು ಊರಿನ ಹೆಸರು ಹೇಳುವವರು ದಯವಿಟ್ಟು ನಿಮ್ಮಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆ ಇದ್ದರೆ ಕೊಡಿ. ಬಾಯಿ ಚಪಲಕ್ಕೆ ಇಲ್ಲಸಲ್ಲದ್ದನ್ನು ಮಾತನಾಡಿ ನನ್ನನ್ನು ನೋಯಿಸಬೇಡಿ’ ಎಂದು ನರ್ಸ್‌ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.