
ಮಾಯಕೊಂಡ: ನಗರಗಳಂತೆ ಹಳ್ಳಿಗಳಲ್ಲೂ ಪೌರ ಕಾರ್ಮಿಕರ ನೇಮಕಾತಿ ನಡೆದರೆ, ನೈರ್ಮಲ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಭಿಪ್ರಾಯಪಟ್ಟರು.
ಸಮೀಪದ ಶ್ಯಾಗಲೆ ಗ್ರಾಮದಲ್ಲಿ ಮನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಯೋಜನೆಯಡಿ ₹17 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪೌರ ಕಾರ್ಮಿಕರನ್ನು ನೇಮಿಸಿ ಗ್ರಾಮಗಳ ಸ್ವಚ್ಛತೆ ಮತ್ತು ಶುದ್ಧ ಪರಿಸರ ನಿರ್ಮಾಣ ಮಾಡಬೇಕು ಎಂಬುದಾಗಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಸರ್ಕಾರವು ಪೌರಕಾರ್ಮಿಕರನ್ನು ನೇಮಿಸಿದರೆ ಗ್ರಾಮಗಳು ರೋಗಮುಕ್ತವಾಗಲಿವೆ. ಘನ ತ್ಯಾಜ್ಯವನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡುವ ಸಲುವಾಗಿ ಪಂಚಾಯಿತಿ ಮಟ್ಟದಲ್ಲೇ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದರು.
ಮನೆಯಲ್ಲಿಯೇ ಕಸ ವಿಂಗಡಣೆ ಮಾಡುವಂತೆ ಗ್ರಾಮಸ್ಥರಲ್ಲಿ ಅಧಿಕಾರಿಗಳು ಅರಿವು ಮೂಡಿಸಬೇಕು. ಕಸ ಸಂಗ್ರಹ ವಾಹನಗಳ ಸಿಬ್ಬಂದಿ ಮನೆಗಳ ಬಳಿಗೆ ಹೋಗಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ಓಬಳಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಇಒ ರಾಮಭೋವಿ, ಪಿಡಿಒ ಲೋಹಿತ್ ಕುಮಾರ್, ಮುಖಂಡರಾದ ಸತೀಶ್, ಮಂಜಣ್ಣ, ಪರಮೇಶ್ವರಪ್ಪ, ತಿಪ್ಪೇಶ್, ಶಿವಕುಮಾರ್, ವಿಜಯಕುಮಾರ್, ಕೋಡಿಹಳ್ಳಿ ವಿಶ್ವನಾಥ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.