ADVERTISEMENT

ಫೆ. 14, 15ರಂದು ಸಂತ ಸೇವಾಲಾಲ್ ಜಯಂತಿ

ಬಂಜಾರ ಸಮುದಾಯದ ಲಕ್ಷಾಂತರ ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 19:46 IST
Last Updated 12 ಫೆಬ್ರುವರಿ 2019, 19:46 IST
ಸಂತ ಸೇವಾಲಾಲರು
ಸಂತ ಸೇವಾಲಾಲರು   

ನ್ಯಾಮತಿ: ಬಂಜಾರ ಸಮುದಾಯದ ಜಗದ್ಗುರು ಸಂತ ಸೇವಾಲಾಲ್‌ ಅವರ 280ನೇ ಜಯಂತ್ಯುತ್ಸವ ಫೆ. 14ರಿಂದ 15ರವರೆಗೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ.

ದೇಶದ ನಾನಾ ಭಾಗಗಳಿಂದ ಮಾಲಾಧಾರಿಗಳು ಪಾದಯಾತ್ರೆ ಮೂಲಕ, ಉಳಿದವರು ವಿವಿಧ ವಾಹನಗಳ ಮೂಲಕ ಜಾತ್ರೆಗೆ ಬರುತ್ತಾರೆ. ಬರುವ ಲಕ್ಷಾಂತರ ಭಕ್ತರಿಗೆ ಮೂಲಸೌಲಭ್ಯ, ಸಾರಿಗೆ, ವಸತಿ, ಊಟ, ಶೌಚಾಲಯ, ಬೆಳಕಿನ ವ್ಯವಸ್ಥೆ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಶ್ರಮಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಸ್‌ಪಿ. ಆರ್. ಚೇತನ್, ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಅಶ್ವತಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಕ್ಷೇತ್ರದಲ್ಲಿ ಸಾಕಷ್ಟು ಬಾರಿ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ADVERTISEMENT

ಎತ್ತರ ಪ್ರದೇಶದ ಸುಂದರ ಪರಿಸರದಲ್ಲಿರುವ ಜನ್ಮಸ್ಥಾನ ಸೂರಗೊಂಡನಕೊಪ್ಪದಲ್ಲಿ ಈಗಾಗಲೇ ಕೊಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿವೆ. ಕಲ್ಯಾಣ ಮಂಟಪ, ದಾಸೋಹ ಭವನ, ಸಭಾ ಭವನ, ಸಪ್ತ ಮಾತೃಕೆಯರ ಪವಿತ್ರ ಕೊಳ, ಬಂಜಾರ ಸಂಸ್ಕೃತಿ ಬಿಂಬಿಸುವ ಮತ್ತು ಸೇವಾಲಾಲ್ ಅವರ ಪವಾಡ ದೃಶ್ಯಗಳ ಬಿಂಬಿಸುವ ಕಲಾಕೃತಿಗಳು, ವಸತಿಗೃಹಗಳು, ಪ್ರವೇಶದ್ವಾರ ನಿರ್ಮಾಣ ಕಾರ್ಯಗಳು ನಡೆದು ಬಂಜಾರ ಸಮುದಾಯದವರಿಗೆ ಮಾತ್ರವಲ್ಲದೆ ಎಲ್ಲಾ ಪ್ರವಾಸಿಗರಿಗೆ ಮತ್ತು ಶಾಲಾ-ಕಾಲೇಜು ಮಕ್ಕಳ ಶೈಕ್ಷಣಿಕ ಪ್ರವಾಸ ಸ್ಥಳವಾಗಲಿದೆ.

ಫೆ. 13ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಬಂಜಾರ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡು, 14ರಂದು ಮಧ್ಯಾಹ್ನ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಶಾಸಕ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಲಿದ್ದು, ಅತಿಥಿ ಗೃಹವನ್ನು ಮಾಜಿ ಸಿಎಂ. ಬಿ.ಎಸ್.ಯಡಿಯೂರಪ್ಪ ಮತ್ತು ಧರ್ಮಶಾಲಾ ಕಟ್ಟಡವನ್ನು ಸಂಸದ ಎಂ. ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಸಚಿವರು, ಬಂಜಾರ ಜನಾಂಗದ ಶಾಸಕರು, ಜಿಲ್ಲೆಯ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸಮಾಜದ ಗಣ್ಯರು ಬರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.