ADVERTISEMENT

ಸಂತೇಬೆನ್ನೂರು | ನಾಗೇನಹಳ್ಳಿ ನಾಗರ ಕಲ್ಲಿನ ಮೇಲೆ ಹೆಡೆ ಬಿಚ್ಚಿ ನಿಂತ ನಾಗರಹಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:06 IST
Last Updated 30 ಜುಲೈ 2025, 7:06 IST
ಸಂತೇಬೆನ್ನೂರು ಸಮೀಪದ ನಾಗೇನಹಳ್ಳಿ ಗ್ರಾಮದ ಆಂಜನೇಯ ಹಾಗೂ ಶಿವನ ದೇಗುಲದ ಸಮುಚ್ಚಯದಲ್ಲಿರುವ ನಾಗರ ಕಲ್ಲಿನ ಮೇಲೆ ನಾಗರ ಪಂಚಮಿ ಮುನ್ನಾ ದಿನ ಹೆಡೆ ಬಿಚ್ಚಿ ನಿಂತ ನಾಗರ ಹಾವು.
ಸಂತೇಬೆನ್ನೂರು ಸಮೀಪದ ನಾಗೇನಹಳ್ಳಿ ಗ್ರಾಮದ ಆಂಜನೇಯ ಹಾಗೂ ಶಿವನ ದೇಗುಲದ ಸಮುಚ್ಚಯದಲ್ಲಿರುವ ನಾಗರ ಕಲ್ಲಿನ ಮೇಲೆ ನಾಗರ ಪಂಚಮಿ ಮುನ್ನಾ ದಿನ ಹೆಡೆ ಬಿಚ್ಚಿ ನಿಂತ ನಾಗರ ಹಾವು.   

ಸಂತೇಬೆನ್ನೂರು: ಸಮೀಪದ ನಾಗೇನಹಳ್ಳಿ ಗ್ರಾಮದ ದೇಗುಲಗಳ ಸಮುಚ್ಚಯದ ಆವರಣದಲ್ಲಿ ನಾಗರ ಪಂಚಮಿ ಮುನ್ನಾ ದಿನ ನಾಗರಕಲ್ಲಿನ ಮೇಲೆಯೇ ಹೆಡೆ ಬಿಚ್ಚಿ ನಿಂತು ಗ್ರಾಮಸ್ಥರಲ್ಲಿ ಅಚ್ಚರಿಯೊಂದಿಗೆ ದೈವಿಕ ಭಾವನೆ ಮೂಡಿಸಿದೆ. ಗ್ರಾಮದ ಹೆಸರೇ ಹೇಳುವಂತೆ ನಾಗೇನಹಳ್ಳಿಯಲ್ಲಿ ನಾಗರ ಹಾವಿನ ಬಗ್ಗೆ ಇಂದಿಗೂ ಪ್ರಚಲಿತ ಇರುವ ಸಂಗತಿ, ಇಲ್ಲಿ ನಾಗರ ಹಾವು ಕಚ್ಚುವುದಿಲ್ಲ, ಕಚ್ಚಿದರೂ ವಿಷದ ಪ್ರಭಾವ ಇಲ್ಲ. ಹೆಣ್ಣು ಮಕ್ಕಳು ಕೂಡ ನಾಗರ ಹಾವನ್ನು ಭಯವಿಲ್ಲದೇ ಹಿಡಿದು ಆಡಿಸುವರು. ಇಷ್ಟೆಲ್ಲಾ ವಾಸ್ತವ ಸಂಗತಿಗೆ ಒಂದು ಐತಿಹ್ಯ ಇದೆ. ಶತಮಾನಗಳ ಹಿಂದೆ ಇಲ್ಲಿ ಒಬ್ಬ ಯತಿ ದೇಗುಲ ನಿರ್ಮಿಸಿ ತಪ್ಪಸ್ಸು ನಡೆಸುತ್ತಿದ್ದರು. ಅವರು ಒಬ್ಬ ಅನಾಥ ಮಗುವನ್ನು ಸಾಕಿದ್ದರು. ಒಮ್ಮೆ ನಾಗರಹಾವೊಂದು ಕಚ್ಚಿ ಬಾಲಕ ಸಾವನ್ನಪ್ಪುತ್ತಾನೆ. ಇದರಿಂದ ತೀವ್ರ ನೊಂದ ಯತಿಗಳು ಈ ಗಡಿಯಲ್ಲಿರುವ ನಾಗರಹಾವುಗಳೆಲ್ಲಾ ನಾಶವಾಗಲಿ ಎಂದು ಶಾಪ ನೀಡುತ್ತಾರೆ. ಆಗ ನಾಗರ ಹಾವುಗಳು ಶಾಪದಿಂದ ವಿಮೋಚನೆ ಮಾಡಬೇಕು ಎಂದು ಯತಿಯಲ್ಲಿ ಬೇಡಿಕೊಳ್ಳುತ್ತವೆ. ಯತಿಗಳು ನಾಗರ ಹಾವುಗಳನ್ನು ಮನ್ನಿಸಿ ಈ ಗಡಿ ಭಾಗದಲ್ಲಿ ಯಾರಿಗೂ ಕಚ್ಚಬಾರದು. ಕಚ್ಚಿದರೂ ವಿಷ ಏರದೆ ಸಾವು ಸಂಭವಿಸುವುದಿಲ್ಲ ಎಂದು ಆದೇಶ ನೀಡುತ್ತಾರೆ. ಅಂದಿನಿಂದ ನಾಗೇನಹಳ್ಳಿ ಗಡಿ ಭಾಗದಲ್ಲಿ ನಾಗರ ಹಾವು ಕಚ್ಚುವುದಿಲ್ಲ. ಕಚ್ಚಿದರೂ ಸಾವಿಲ್ಲ ಎನ್ನುತ್ತಾರೆ ಗ್ರಾಮದ ಎನ್.ಎಸ್.ತಿಮ್ಮೇಶ್. ಐತಿಹಾಸಿಕ ಆಂಜನೇಯ ಹಾಗೂ ಶಿವನ ದೇಗುಲದ ಬಳಿಯೇ ನಾಗರಕಲ್ಲು ಇವೆ. ನಾಗರ ಪಂಚಮಿಯ ಪಂಚ ದಿನಗಳೊಳಗೆ ಹೆಡೆ ಬಿಚ್ಚಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈಚೆಗೆ ಯಶೋದಮ್ಮ ಎಂಬುವವರಿಗೆ ನಾಗರ ಹಾವು ಕಡಿದಿದ್ದು, ಮೂರು ದಿನ ದೇಗುಲದಲ್ಲಿ ಉಳಿದಿದ್ದರು. ಗುಣಮುಖರಾಗಿ ಮನೆಗೆ ಸೇರಿದರು. ನಾಗರ ಹಾವು ಕಡಿದರೂ ಚಿಕಿತ್ಸೆ ಪಡೆಯುವುದಿಲ್ಲ. ದಶಕಗಳಿಂದ ನಾಲ್ಕೈದು ಜನಕ್ಕೆ ಹಾವು ಕಚ್ಚಿದ ನಿದರ್ಶನಗಳಿವೆ. ಆದರೆ ಯಾವುದೇ ಆತಂಕವಿಲ್ಲ ಎನ್ನುತ್ತಾರೆ ಗ್ರಾಮದ ಸ್ವಾಮಿ. ನಾಗೇನಹಳ್ಳಿ ಗಡಿ ಭಾಗದಲ್ಲಿ ಹಾವು ಕಚ್ಚಿದರೇ ಮಾತ್ರ ಜೀವ ಹಾನಿ ಇಲ್ಲ. ವೈಜ್ಞಾನಿಕ ಯುಗದಲ್ಲಿಯೂ ಕೆಲವರಿಗೆ ಅಚ್ಚರಿ ಉಂಟು ಮಾಡಬಹುದು. ಆದರೇ ಇದು ಇಂದಿಗೂ ಸತ್ಯ.

ಸಂತೇಬೆನ್ನೂರು ಸಮೀಪದ ನಾಗೇನಹಳ್ಳಿ ಗ್ರಾಮದ ಆಂಜನೇಯ ಹಾಗೂ ಶಿವನ ದೇಗುಲದ ಸಮುಚ್ಚಯದಲ್ಲಿರುವ ನಾಗರ ಕಲ್ಲಿನ ಮೇಲೆ ನಾಗರ ಪಂಚಮಿ ಮುನ್ನಾ ದಿನ ಹೆಡೆ ಬಿಚ್ಚಿ ನಿಂತ ನಾಗರ ಹಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.