ADVERTISEMENT

ಸಂತೇಬೆನ್ನೂರು | ಪುಷ್ಕರಣಿಯ ಮಂಟಪಗಳಲ್ಲಿ ಗಿಡ-ಗಂಟಿ!: ಪ್ರವಾಸಿಗರ ಬೇಸರ

ಕೆ.ಎಸ್.ವೀರೇಶ್ ಪ್ರಸಾದ್
Published 31 ಆಗಸ್ಟ್ 2025, 6:33 IST
Last Updated 31 ಆಗಸ್ಟ್ 2025, 6:33 IST
ಸಂತೇಬೆನ್ನೂರು ಐತಿಹಾಸಿಕ ಪುಷ್ಕರಿಣಿ ವಸಂತ ಮಂಟಪದ ಗೋಪುರದಲ್ಲಿ ಬೆಳೆದಿರುವ ಗಿಡ-ಗಂಟಿ
ಸಂತೇಬೆನ್ನೂರು ಐತಿಹಾಸಿಕ ಪುಷ್ಕರಿಣಿ ವಸಂತ ಮಂಟಪದ ಗೋಪುರದಲ್ಲಿ ಬೆಳೆದಿರುವ ಗಿಡ-ಗಂಟಿ   

ಸಂತೇಬೆನ್ನೂರು: ಇಲ್ಲಿನ ಐತಿಹಾಸಿಕ ಪುಷ್ಕರಣಿಯ ಮಧ್ಯ ಭಾಗದಲ್ಲಿರುವ ವಸಂತ ಮಂಟಪದ 5ನೇ ಗೋಪುರ ಅಂತಸ್ತಿನಲ್ಲಿ ಗಿಡ-ಗಂಟಿಗಳು ಬೆಳೆಯುತ್ತಿದ್ದು, ಸುಂದರ ರಚನೆಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಪ್ರವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಮೂರ್ನಾಲ್ಕು ತಿಂಗಳು ಸುರಿದ ಸತತ ಮಳೆಯಿಂದ ಈಗಾಗಲೇ 3ನೇ ಅಂತಸ್ತು ಪುಷ್ಕರಣಿಯಲ್ಲಿ ಮುಳುಗಿದೆ. 5ನೇ ಅಂತಸ್ತಿನಲ್ಲಿ ಗೋಪುರ ಹಾಗೂ ಸುತ್ತಲೂ ಇರುವ ಕಲಾತ್ಮಕ ಗೋಡೆಯನ್ನು ಗಾರೆಗಚ್ಚು ಹಾಗೂ ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಇದರ ಮೇಲಂತಸ್ತಿನ ಖಾಲಿ ಜಾಗದಲ್ಲಿ ಕಳೆ ಗಿಡಗಳು ಬೆಳೆಯುತ್ತಿವೆ. ಅರಳಿ, ಆಲದ ಬೇರುಗಳು ಕಟ್ಟಡದೊಳಕ್ಕೆ ಇಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ವೈವಿಧ್ಯಮವಾಗಿ ಮೇಲಂತಸ್ತಿನ ಗೋಡೆ ನಿರ್ಮಿಸಲಾಗಿದೆ. ಅವುಗಳ ಮೇಲೆ ಆನೆ, ಗಂಡಭೇರುಂಡ ಹಾಗೂ ಹಾವಿನ ಚಿತ್ರಗಳಿರುವ ಸಾಲಿನ ಸಂಕೀರ್ಣ ರಚನೆಯು ವಿಸ್ಮಯ ಮೂಡಿಸುತ್ತದೆ. ಸುದೀರ್ಘ ಅವಧಿಯಲ್ಲಿ ಈ ರಚನೆಯ ಪೈಕಿ ಅರ್ಧದಷ್ಟು ಭಾಗ ಹಾಳಾಗಿದೆ. ಗೋಪುರದ ಹೊರಮೈ ಭಾಗದಲ್ಲಿಯೂ ಕಲಾತ್ಮಕ ಉಬ್ಬು ಚಿತ್ರಗಳಿದ್ದು, ಅಲ್ಲಿಯೂ ಗಿಡ-ಗಂಟಿಗಳು ಚಾಚಿಕೊಂಡಿವೆ. 3ನೇ ಅಂತಸ್ತಿನ ಹೊರ ಚಾಚಿದ ಕಮಾನು ವೀಕ್ಷಣಾ ಗೋಪುರಗಳಲ್ಲಿಯೂ ಕಳೆ ಬೆಳೆಯುತ್ತಿದೆ.

ADVERTISEMENT

ಪುಷ್ಕರಣಿ ಸುತ್ತಲಿನ ಮಂಟಪಗಳಲ್ಲಿಯೂ ಹಸಿರು ಚಿಗುರಿದೆ. ಇಲ್ಲಿನ ಆಂದಾಜು 10 ಎಕರೆಯಷ್ಟು ಪ್ರದೇಶದಲ್ಲಿ ದಟ್ಟವಾದ ಕಳೆ ಬೆಳೆದಿದೆ. ಪುಷ್ಕರಣಿ ಪ್ರವೇಶದ ವಿಶಾಲ ಮೆಟ್ಟಿಲ ಮಧ್ಯದಲ್ಲಿನ ಪಾರ್ಕ್ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಪುಷ್ಕರಣಿಗೆ ನೀರು ತರುವ ಜಲಹರಿ ಮಂಟಪ, ಬಿಡುಗಂಡಿ ಮಂಟಪವನ್ನು ಅದರ ಸ್ವರೂಪದಲ್ಲೇ ಈಚೆಗೆ ‍ಪುನರ್‌ರಚನೆ ಮಾಡಲಾಗಿತ್ತು. ಅವು ಕೆಲವೇ ದಿನಗಳಲ್ಲಿ ಶಿಥಿಲಾವಸ್ಥೆ ತಲುಪಿವೆ ಎಂದು ಸ್ಥಳೀಯ ನಿವಾಸಿ, ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್ ಹೇಳಿದ್ದಾರೆ.

ಸತತ ಮಳೆಯಿಂದ ತುಂಬಿ ತುಳುಕುತ್ತಿರುವ ಪುಷ್ಕರಿಣಿ

ದಿನನಿತ್ಯ ನೂರಾರು ಪ್ರವಾಸಿಗರನ್ನು ಸೆಳೆಯುತ್ತಿರುವ ಪುಷ್ಕರಣಿಯು ಅಪರೂಪದ ರಚನೆ ಹೊಂದಿದೆ. ಪುರಾತತ್ವ ಇಲಾಖೆಯ ನಿರ್ವಹಣೆ ವಿಧಾನವು ಪ್ರವಾಸಿಗರಿಗೆ ತೃಪ್ತಿ ನೀಡಿಲ್ಲ. ವಿಶ್ವ ಪರಂಪರೆ ತಾಣಗಳಷ್ಟು ಅಭಿವೃದ್ಧಿ ಅಲ್ಲದಿದ್ದರೂ, ಕನಿಷ್ಠ ನಿರ್ವಹಣೆಯ ಅಗತ್ಯವಿದೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಬೇಕಿದೆ. ಜಿಲ್ಲಾಡಳಿತವೂ ಐತಿಹಾಸಿಕ ತಾಣ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಬೆಂಗಳೂರಿನ ಪ್ರವಾಸಿಗ ಕೆ.ಎಂ.ರಾಜು ಒತ್ತಾಯಿಸಿದ್ದಾರೆ.

ಸತತ ಮಳೆಯಿಂದ ತುಂಬಿ ತುಳುಕುತ್ತಿರುವ ಪುಷ್ಕರಿಣಿ
ನೀರಿನ ಮಧ್ಯದ ವಸಂತ ಮಂಟಪದ ಸ್ವಚ್ಛತೆಗೆ ಪರಿಣತ ಕಾರ್ಮಿಕರು ಹಾಗೂ ಸೂಕ್ತ ಜೀವ ರಕ್ಷಕ ಪರಿಕರಗಳ ಅವಶ್ಯಕತೆಯಿದೆ. ಸದ್ಯದಲ್ಲಿಯೇ ಗಿಡ-ಗಂಟಿ ತೆರವು ಮಾಡಲಾಗುವುದು
ವಿದ್ಯಾ ಪುಷ್ಕರಣಿ ಮೇಲ್ವಿಚಾರಕಿ ಪುರಾತತ್ವ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.