ಸಂತೇಬೆನ್ನೂರು: ದಾವಣಗೆರೆ ಮತ್ತು ಚನ್ನಗಿರಿಗಳಲ್ಲಿರುವ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳ ತೀವ್ರ ಸ್ಪರ್ಧೆಯಿಂದಾಗಿ ವಿದ್ಯಾರ್ಥಿಗಳಿಲ್ಲದೇ ಸೊರಗುತ್ತಿರುವ ಹೋಬಳಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ದಾಖಲಾತಿ ವೃದ್ಧಿಸಿಕೊಳ್ಳಲು ಶಿಕ್ಷಕರು, ‘ನಾ ಮುಂದು.. ತಾ ಮುಂದು...’ ಎನ್ನುವಂತೆ ಪಾಲಕರ ಮನೆಮನೆಗೆ ಅಲೆಯತ್ತ ವಿದ್ಯಾರ್ಥಿಗಳನ್ನು ಹೊಂಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕನಸು ಹೊತ್ತು ಗುಣಮಟ್ಟದ ಶಿಕ್ಷಣ ಕೊಡಿಸಲು ಶಾಲೆಯನ್ನು ಆಯ್ಕೆ ಮಾಡುತ್ತಿದ್ದಾರೆ. ಶಾಲೆಯ ಆಯ್ಕೆ ವಿಷಯದಲ್ಲಿ ಆರ್ಥಿಕ ಸ್ಥಿತಿಗತಿಯೂ ಪ್ರಮುಖ ಪಾತ್ರ ವಹಿಸುತ್ತವೆ.
ಸಿಬಿಎಸ್‌ಇ ಪಠ್ಯಕ್ಷ ಹೊಂದಿರುವ ಖಾಸಗಿ ಶಾಲೆಗಳು ಎಲ್ಲಡೆ ತಲೆ ಎತ್ತಿರುವ ಪರಿಣಾಮ ದಾಖಲಾತಿ ಕೊರತೆ ಎದುರಿಸುತ್ತಿರುವ ಈ ಶಾಲೆಗಳ ಆಡಳಿತ ಮಂಡಳಿ ಹಾಗೂ ಬೋಧನಾ ಸಿಬ್ಬಂದಿಗೆ ತೀವ್ರ ಆತಂಕ ಎದುರಾಗಿದೆ.
ಅಂತೆಯೇ ತಮ್ಮ ಅಸ್ತಿತ್ವ ರಕ್ಷಣೆಗಾಗಿ ಸರ್ಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆ ಸಿಬ್ಬಂದಿ ದಾಖಲಾತಿ ಆಂದೋಲನ ನಡೆಸುತ್ತ ವಿದ್ಯಾರ್ಥಿಗಳನ್ನು ಆಕರ್ಷಿಸಲು ಖಾಸಗಿ ಶಾಲೆಗಳೊಂದಿಗೆ ಪೈಪೋಟಿಗೆ ಇಳಿದಿದ್ದಾರೆ.
‘ಶಿಕ್ಷಕರು ಮನೆ–ಮನೆಗೆ ಭೇಟಿ ನೀಡಿ ಪಾಲಕರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಸವಲತ್ತುಗಳ ಬಗ್ಗೆ ತಿಳಿ ಹೇಳಲಾಗಿದೆ. ಶಾಲೆಗಳಗೆ ಕರೆದೊಯ್ಯಲು ‘ಹಳದಿ ಬಸ್’ ಇಲ್ಲದ ಕಾರಣ ಮಕ್ಕಳು ಬೇರೆಡೆಗೆ ಸೇರುತ್ತಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಗೂ ಬಸ್ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದೇವೆ. ದಾಖಲಾತಿ ಪ್ರಮಾಣ ಗಣನೀಯ ಏರಿಕೆಕಂಡಿದೆ’ ಎಂದು ಶಿಕ್ಷಕ ಎಲ್. ಮಲ್ಲೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ಶಿಕ್ಷಕರು ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿ 8ನೇ ತರಗತಿಗೆ ಪ್ರವೇಶ ಪಡೆಯುವಂತೆ ಕೋರುತ್ತಿದ್ದಾರೆ. ಶಿಕ್ಷಕರೇ ತಮ್ಮ ವೇತನದಲ್ಲಿ ಬಸ್ ಸೌಲಭ್ಯ, ಸಮವಸ್ತ್ರ ಕಲ್ಪಿಸುವ ಭರವಸೆಯನ್ನೂ ನೀಡಿದ್ದಾರೆ. ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿರುವುದು ಆತಂಕ ಉಂಟು ಮಾಡಿದೆ. ಕಳೆದ ವರ್ಷ ಮೆದಿಕೆರೆ ಅನುದಾನಿತ ಪ್ರೌಢಶಾಲೆ ಮುಚ್ಚಲಾಗಿದೆ’ ಎಂದು ಶಿಕ್ಷಕರು ಹೇಳುತ್ತಾರೆ.
‘ದಾವಣಗೆರೆ ಹಾಗೂ ಚನ್ನಗಿರಿ ಭಾಗದ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳ ಅಂದಾಜು 30 ಶಾಲಾ ಬಸ್‌ಗಳು ಓಡಾಡುತ್ತವೆ. ಸಿಬಿಎಸ್‌ಇ ನೆಪದಲ್ಲಿ ಆ ಶಾಲೆಗಳಿಗೆ ವರ್ಗಾವಣೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ’ ಎನ್ನುತ್ತಾರೆ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಆರ್.ನಾಗರಾಜ್.
‘2024– 25ನೇ ಸಾಲಿನಲ್ಲಿ ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 426 ವಿದ್ಯಾರ್ಥಿಗಳು 7ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕೆಲ ಗ್ರಾಮಗಳಲ್ಲಿ ಪಾಲಕರು ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಿ ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ. ದಾಖಲಾತಿ ತೀವ್ರ ಕುಸಿದಿದ್ದ ಶಾಲೆಗಳಲ್ಲಿ ಚೇತರಿಕೆ ಕಂಡಿದೆ’ ಎನ್ನುತ್ತಾರೆ ಸಿಆರ್‌ಪಿ ಶಂಕರಗೌಡ.
ಸರ್ಕಾರದ ಕಿತ್ತೂರು ಚನ್ನಮ್ಮ, ಮೊರಾರ್ಜಿ, ಜವಾಹರ ನವೋದಯ ವಸತಿ ಶಾಲೆಗಳಲ್ಲೂ ಅನೇಕ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವ ಫಲವಾಗಿ ಗ್ರಾಮೀಣ ಶಾಲೆಗಳ ಪ್ರವೇಶ ಪ್ರಮಾಣ ಕುಸಿಯುತ್ತಿದೆ ಎಂಬುದು ಸರ್ಕಾರಿ ಶಾಲಾ ಶಿಕ್ಷಕರ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.