ADVERTISEMENT

ನ್ಯಾಮತಿ: ಕೋಡಿ ಬಿದ್ದ ಸವಳಂಗ ಹೊಸಕರೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:21 IST
Last Updated 2 ಸೆಪ್ಟೆಂಬರ್ 2025, 5:21 IST
ನ್ಯಾಮತಿ ತಾಲ್ಲೂಕು ಸವಳಂಗ ಹೊಸಕೆರೆ ಭರ್ತಿಯಾಗಿದ್ದು, ಕೋಡಿ ಹರಿಯುತ್ತಿರುವ ದೃಶ್ಯ
ನ್ಯಾಮತಿ ತಾಲ್ಲೂಕು ಸವಳಂಗ ಹೊಸಕೆರೆ ಭರ್ತಿಯಾಗಿದ್ದು, ಕೋಡಿ ಹರಿಯುತ್ತಿರುವ ದೃಶ್ಯ   

ಸವಳಂಗ (ನ್ಯಾಮತಿ): ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತಾಲ್ಲೂಕಿನಲ್ಲಿಯೇ ದೊಡ್ಡ ಕೆರೆಯಾಗಿರುವ ಸವಳಂಗ ಹೊಸಕರೆ (ಕಾಯಕಕೆರೆ) ಶುಕ್ರವಾರ ಭರ್ತಿಯಾಗಿ ಕೋಡಿ ಹರಿದಿದೆ. 

1928ರಲ್ಲಿ ನಿರ್ಮಿಸಲಾದ ಸವಳಂಗ ಹೊಸಕೆರೆ 800 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆ ಭರ್ತಿಯಾದರೆ ಸವಳಂಗ, ಸುರಹೊನ್ನೆ, ಸೋಗಿಲು, ಚಟ್ನಹಳ್ಳಿ, ಗಂಜೀನಹಳ್ಳಿ,  ಫಲವನಹಳ್ಳಿ, ನ್ಯಾಮತಿ, ದೊಡ್ಡೆತ್ತಿನಹಳ್ಳಿ ಗ್ರಾಮಗಳ ಸಾವಿರಾರು ಎಕರೆ ಜಮೀನಿನಲ್ಲಿ ನೀರಾವರಿ ಮಾಡಲು ಅನುಕೂಲವಾಗುತ್ತದೆ. ಕೆರೆ ಕೋಡಿ ಬಿದ್ದಿರುವುದು ಈ ಭಾಗದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕೆರೆ ವೀಕ್ಷಣೆಗೆ ಸುತ್ತಮುತ್ತಲ ಗ್ರಾಮಗಳ ಜನರು ಆಗಮಿಸುತ್ತಿದ್ದು, ಎಲ್ಲಿಯೂ ಎಚ್ಚರಿಕೆ ಅಥವಾ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಕೋಡಿ ಬಿದ್ದು ನೀರು ಹರಿಯುವ ಸ್ಥಳದಲ್ಲಿ  ತ್ಯಾಜ್ಯ ಹಾಗೂ ಗಿಡಗಂಟಿ ಆವರಿಸಿವೆ. ಸಣ್ಣ ನೀರಾವರಿ ಇಲಾಖೆ, ಗ್ರಾಮಾಡಳಿತ ಮತ್ತು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ADVERTISEMENT

ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕಾಯುತ್ತಿರುವ ಈ ಕೆರೆಯ ಅಂಚಿನಲ್ಲಿ ಅಂದಾಜು 20 ಎಕರೆಯಷ್ಟು ಪ್ರದೇಶ ಒತ್ತುವರಿಯಾಗಿದೆ. ಗ್ರಾಮದ ಊರ ಮುಂದಿನ ಮತ್ತೊಂದು ಕೆರೆ 100 ಎಕರೆ ವಿಸ್ತೀರ್ಣ ಹೊಂದಿದೆ. ಇದನ್ನೂ ಒತ್ತುವರಿ ಮಾಡಿರುವ ಕೆಲವರು ತೋಟ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.