ದಾವಣಗೆರೆ: ಪರಿಶಿಷ್ಟ ಜಾತಿಗೆ ಕಲ್ಪಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಗುಂಪು ರಚಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಅಲೆಮಾರಿಗಳ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ 49 ಜಾತಿಗಳ ಮಹಾ ಒಕ್ಕೂಟದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳಮೀಸಲು ವಿಂಗಡಣೆಗೆ ವಿರೋಧ ವ್ಯಕ್ತಪಡಿಸಿದರು. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿದರು.
ಮೀಸಲಾತಿ ಕಲ್ಪಿಸಿದಾಗಿನಿಂದ ಪರಿಶಿಷ್ಟ ಜಾತಿಗಳಲ್ಲಿ ಇರುವ ಬಲಾಢ್ಯರೇ ಎಲ್ಲ ಸೌಲಭ್ಯಗಳನ್ನು ಪಡೆದಿದ್ದಾರೆ. ಒಳಮೀಸಲಾತಿಯಿಂದ ಸಣ್ಣ ಸಮುದಾಯ ಮತ್ತು ಅಲೆಮಾರಿಗಳಿಗೆ ನ್ಯಾಯ ದೊರಕುತ್ತದೆ ಎಂಬ ನಂಬಿಕೆ ಹುಸಿಯಾಗಿದೆ. ಒಳಮೀಸಲಾತಿ ಹಂಚಿಕೆ ಸೂತ್ರ ರಚಿಸುವಾಗ ಅಲೆಮಾರಿ ಜಾತಿಗಳನ್ನು ಕಡೆಗಣಿಸಲಾಗಿದೆ. ನಿರ್ಗತಿಕ ಸಮುದಾಯಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪರಿಶಿಷ್ಟ ಜಾತಿಯಲ್ಲಿ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜಾತಿಗಳ ಪರಿಸ್ಥಿತಿ ಹೀನಾಯವಾಗಿದೆ. ಬೀದಿಬದಿಯಲ್ಲಿ ಜೋಪಡಿ ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದೆ. ಅಲೆಮಾರಿಗಳ ಈ ಬದುಕನ್ನು ಬಿಂಬಿಸಿ ಒಳಮೀಸಲಾತಿಗೆ ಬೇಡಿಕೆ ಇಡಲಾಗಿತ್ತು. ಸಮುದಾಯದ ಪರಿಸ್ಥಿತಿಯನ್ನು ಅವಲೋಕಿಸಿದ ನಾಗಮೋಹನ್‌ದಾಸ್ ಆಯೋಗ 49 ಜಾತಿಗಳಿಗೆ ಪ್ರತ್ಯೇಕ ಗುಂಪು ರಚಿಸಿ ಶೇ 1ರಷ್ಟು ಮೀಸಲಾತಿ ಕಲ್ಪಿಸಿತ್ತು. ಪ್ರಭಾವಿ ಸಮುದಾಯಕ್ಕೆ ಮಣಿದ ರಾಜ್ಯ ಸರ್ಕಾರ ಈ ಶಿಫಾರಸ್ಸನ್ನು ಕೈಬಿಟ್ಟಿದೆ’ ಎಂದು ಒಕ್ಕೂಟದ ಮುಖಂಡ ಕತ್ತಲಗೆರೆ ಡಿ.ತಿಪ್ಪಣ್ಣ ಆರೋಪಿಸಿದರು.
‘ಒಳಮೀಸಲು ಹಂಚಿಕೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಇಟ್ಟಿರುವ ಹೆಜ್ಜೆಗಳು ಅಘಾತವುಂಟು ಮಾಡಿವೆ. ಪರಿಶಿಷ್ಟ ಜಾತಿಯಲ್ಲಿ ಬಲಾಢ್ಯರಾಗಿರುವ ಲಂಬಾಣಿ, ಭೋವಿ ಜಾತಿಗಳನ್ನು ಒಳಗೊಂಡ ಸ್ಪೃಶ್ಯ ಗುಂಪಿಗೆ ಅಲೆಮಾರಿ ಸಮುದಾಯ ಸೇರಿಸಲಾಗಿದೆ. ಅಕ್ಷರಸ್ಥರಾಗಿರುವ ಈ ಸಮುದಾಯಗಳ ಜೊತೆಗೆ ಪೈಪೋಟಿ ನಡೆಸಿ ಮೀಸಲಾತಿ ಪಡೆಯುವುದು ಅಸಾಧ್ಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಒಕ್ಕೂಟದ ಮುಖಂಡರಾದ ತಿಪ್ಪೇಶಪ್ಪ ಗುರುರಾಜಪುರ, ರಮೇಶ್ ಸಿ.ದಾಸರ್, ಮಂಜುನಾಥ, ಗರುಳಾಧರ ಜರೇಕಟ್ಟೆ, ಮಂಜುನಾಥ ದಾಸರ್, ಆಂಜನೇಯ, ಸಿದ್ಧಪ್ಪ ಹೊನ್ನಾಳಿ, ಜೆ.ವೆಂಕಟೇಶ್ ಹಾಜರಿದ್ದರು.
ಬಲಾಢ್ಯ ಸಮುದಾಯದ ಜನರೊಂದಿಗೆ ಸ್ಪರ್ಧಿಸುವುದು ಕಷ್ಟ. ಶಿಕ್ಷಣ ಉದ್ಯೋಗ ಹಾಗೂ ರಾಜಕೀಯ ಸ್ಥಾನಮಾನ ಮರೀಚಿಕೆಯಾಗುವ ಆತಂಕ ಕಾಡುತ್ತಿದೆಡಿ.ತಿಪ್ಪಣ್ಣ ಮುಖಂಡ ಅಲೆಮಾರಿ ಜಾತಿಗಳ ಮಹಾ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.