ADVERTISEMENT

ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ SC,ST ಆಯೋಗದ ಅಧ್ಯಕ್ಷ ಎಲ್‌.ಮೂರ್ತಿ ನಿರ್ದೇಶನ

ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷ ಎಲ್‌. ಮೂರ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 16:02 IST
Last Updated 20 ಜನವರಿ 2026, 16:02 IST
   

ದಾವಣಗೆರೆ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆಯುವ ಮಹತ್ತರ ಹೊಣೆ ನಿಭಾಯಿಸುತ್ತಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು (ಡಿಸಿಆರ್‌ಇ) ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗುವುದು ಎಂದು ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷ ಎಲ್‌.ಮೂರ್ತಿ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರಿಂದ ಮಂಗಳವಾರ ಅಹವಾಲು ಆಲಿಸಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ. ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಲು 60 ದಿನಗಳ ಕಾಲಾವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಜಾತಿ ನಿಂದನೆ, ದೌರ್ಜನ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆ ಹೆಚ್ಚು’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಈವರೆಗೆ ರಾಜ್ಯದ ಏಳು ಜಿಲ್ಲೆಗಳಿಗೆ ಭೇಟಿ ನೀಡಿ ಅಹವಾಲು ಆಲಿಸಿದ್ದೇನೆ. ಎಲ್ಲ ಜಿಲ್ಲೆಗಳಲ್ಲಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ನಡುವೆ ಸಾಮ್ಯತೆ ಇದೆ. ದೌರ್ಜನ್ಯ ಪ್ರಕರಣಗಳ ತನಿಖೆಯಲ್ಲಿನ ಲೋಪಗಳ ಬಗ್ಗೆ ಜನರು ಗಮನ ಸೆಳೆದಿದ್ದಾರೆ. 12 ಜಿಲ್ಲೆಗಳಲ್ಲಿ ಅಹವಾಲು ಆಲಿಸಿದ ಬಳಿಕ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಾಗುವುದು. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆಯಲಾಗುವುದು’ ಎಂದು ಹೇಳಿದರು.

ಜನರನ್ನು ಒಕ್ಕಲೆಬ್ಬಿಸುವಂತಿಲ್ಲ

‘ಪಿಟಿಸಿಎಲ್‌ ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಭೂಮಿ ಹಕ್ಕು ನೀಡಲಾಗಿದೆ. ಈ ಭೂಮಿಯ ಹಕ್ಕುಪತ್ರ, ಸರ್ವೆ, ಖಾತೆ ಬದಲಾವಣೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಂಡುಬಂದಿವೆ. ಕಾಯ್ದೆಯ ಮಾರ್ಗಸೂಚಿ ಅನ್ವಯ ತಹಶೀಲ್ದಾರ್‌ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರು ಬಗೆಹರಿಸಬಹುದಾಗಿದೆ. ಕಾನೂನು ಅನ್ವಯ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪಿಟಿಸಿಎಲ್‌ ಕಾಯ್ದೆಯಡಿ ಹಂಚಿಕೆ ಮಾಡಿದ ಭೂಮಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ ಎಂಬ ನೆಪವನ್ನು ಮುಂದಿಟ್ಟುಕೊಂಡು ಕಿರುಕುಳ ನೀಡಲಾಗುತ್ತಿದೆ. ಊರು, ಕೇರಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಗಾಳಿಗೆ ತೂರಿ ಒಕ್ಕಲೆಬ್ಬಿಸುವ ಪ್ರಯತ್ನವನ್ನು ಯಾರೊಬ್ಬರೂ ಮಾಡುವಂತಿಲ್ಲ’ ಎಂದು ಸೂಚನೆ ನೀಡಿದರು.

ನಿಯಮ ಮೀರಿ ವೆಚ್ಚ:

‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಕಾಯ್ದೆಯ ಪ್ರಕಾರ ಶೇ 24.70 ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಮೀಸಲಿಡಬೇಕು. ಈ ಅನುದಾನ ಸಮುದಾಯಕ್ಕೆ ಕ್ರಮಬದ್ಧವಾಗಿ ತಲುಪುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದಿವೆ. ನಿಯಮ ಮೀರಿ ವೆಚ್ಚ ಮಾಡಿರುವ ಕುರಿತು ಸಾರ್ವಜನಿಕರು ಆಕ್ಷೇಪಗಳನ್ನು ಸಲ್ಲಿಸಿದ್ದಾರೆ’ ಎಂದು ವಿವರಿಸಿದರು.

‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಡಿ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಜಿಲ್ಲೆಗಳಿಗೆ ಬರುತ್ತದೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆದಾಯದಲ್ಲಿ ಕೂಡ ಈ ಅನುದಾನ ಮೀಸಲಿಡಬೇಕು. ಇದನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕಲ್ಯಾಣಕ್ಕೆ ವಿನಿಯೋಗಿಸದೇ ಅನ್ಯ ಉದ್ದೇಶಕ್ಕೆ ಬಳಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಒಂದು ವೇಳೆ ಇಂತಹ ಲೋಪಗಳು ಆಗಿದ್ದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಆಯೋಗದ ಕಾರ್ಯದರ್ಶಿ ಎಚ್‌.ಎಸ್‌. ಶಿವರಾಮು, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಹಾಜರಿದ್ದರು.

ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ

ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮದ 300 ಎಕರೆಯನ್ನು ಭೂರಹಿತರಿಗೆ ನೀಡಲಾಗಿತ್ತು. ದಾಖಲೆಯಲ್ಲಿ ಭೂಮಿ ವಿಸ್ತೀರ್ಣ ಸರಿಯಾಗಿ ಉಲ್ಲೇಖವಾಗಿಲ್ಲ. ಕೆಲವರಿಗೆ ಭೂಮಿ ಹಕ್ಕು ಕೂಡ ಸಿಕ್ಕಿಲ್ಲ

ರಾಜಶೇಖರಪ್ಪ, ಗ್ರಾಮಸ್ಥ

ಅಕ್ಕಿ ಮಾರಾಟ ಮಾಡಿದ ಆರೋಪದಡಿ ದಾವಣಗೆರೆ ಶಕ್ತಿ ನಗರದ ಸರ್ಕಾರಿ ಹಾಸ್ಟೆಲ್‌ ವಾರ್ಡನ್ ಅಮಾನತು ಮಾಡಲಾಗಿದೆ. ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ

ಗಿತ್ತೆ ಮಾಧವ ವಿಠ್ಠಲ ರಾವ್, ಸಿಇಒ

ಜಿಲ್ಲಾ ಪಂಚಾಯಿತಿ 208 ಪ್ರಕರಣ ಇತ್ಯರ್ಥ

‘ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷರಾದ ಮೂರೂವರೆ ತಿಂಗಳಲ್ಲಿ 3,668 ದೂರುಗಳು ಸಲ್ಲಿಕೆಯಾಗಿವೆ. ಇದರಲ್ಲಿ 208 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 12 ಆದೇಶಗಳನ್ನು ನೀಡಲಾಗಿದೆ’ ಎಂದು ಎಲ್‌.ಮೂರ್ತಿ ಮಾಹಿತಿ ನೀಡಿದರು.

‘ಸ್ಮಶಾನ, ಮದ್ಯದಂಗಡಿ ಸಮಸ್ಯೆ, ಸುಳ್ಳು ಜಾತಿ ಪ್ರಮಾಣ ಪತ್ರ, ಹಾಸ್ಟೆಲ್‌ನಲ್ಲಿ ಮೂಲಸೌಲಭ್ಯ ಕೊರತೆ, ಅಂಬೇಡ್ಕರ್‌, ಬಾಬು ಜಗಜೀವನರಾಂ, ವಾಲ್ಮೀಕಿ ಭವನ ನಿರ್ಮಾಣ ಸೇರಿದಂತೆ ಹಲವು ರೀತಿಯ ದೂರುಗಳು ಸಲ್ಲಿಕೆಯಾಗಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.