ADVERTISEMENT

ಶೈಕ್ಷಣಿಕ ಕಳಕಳಿಯ ನಿವೃತ್ತ ಎಂಜಿನಿಯರ್‌ ಯಾಕೂಬ್‌

ಸಂತೇಬೆನ್ನೂರು ಸರ್ಕಾರಿ ಉರ್ದು ಶಾಲೆಗೆ 17.5 ಗುಂಟೆ ಜಮೀನು ದಾನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 7:39 IST
Last Updated 13 ಏಪ್ರಿಲ್ 2024, 7:39 IST
<div class="paragraphs"><p>ಚನ್ನಗಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೆ.ಮೊಹಮ್ಮದ್‌ ಯಾಕೂಬ್‌ ಅವರನ್ನು ಗೌರವಿಸಲಾಯಿತು. </p></div>

ಚನ್ನಗಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೆ.ಮೊಹಮ್ಮದ್‌ ಯಾಕೂಬ್‌ ಅವರನ್ನು ಗೌರವಿಸಲಾಯಿತು.

   

ದಾವಣಗೆರೆ: ಜಿಲ್ಲೆಯ ಸಂತೇಬೆನ್ನೂರು ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಅದೇ ಗ್ರಾಮದ ವಾಸಿ ಕೆ. ಮೊಹಮ್ಮದ್‌ ಯಾಕೂಬ್‌ (98) ಅವರು 17.5 ಗುಂಟೆ ಜಮೀನನ್ನು ಶಾಲೆಗೆ ದಾನ ನೀಡುವ ಮೂಲಕ ಶೈಕ್ಷಣಿಕ ಕಾಳಜಿ ತೋರಿದ್ದಾರೆ.

ಸಂತೇಬೆನ್ನೂರಿನಲ್ಲಿಯೇ ಹುಟ್ಟಿ ಬೆಳೆದ ಯಾಕೂಬ್‌, ಎಂಜಿನಿಯರಿಂಗ್‌ ಪದವೀಧರರು. ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿ 1982ರಲ್ಲಿ ನಿವೃತ್ತರಾಗಿದ್ದಾರೆ. ಆ ವೇಳೆಗೆ ಗ್ರಾಮದಲ್ಲಿ ಶಾಲೆಯೇ ಇಲ್ಲದ್ದರಿಂದ ಬಡಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸ್ವಂತ ಜಾಗದಲ್ಲಿಯೇ ಎರಡು ಕೊಠಡಿಗಳನ್ನು ನಿರ್ಮಿಸಿಕೊಟ್ಟು ಶಾಲೆ ಆರಂಭಿಸಲು ನೆರವಾಗಿದ್ದರು. ಪ್ರಸ್ತುತ ಶಾಲೆಯು 6 ಕೊಠಡಿಗಳನ್ನು ಹೊಂದಿದ್ದು, 1ರಿಂದ 7ನೇ ತರಗತಿವರೆಗೆ 75 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ADVERTISEMENT

‘ಮೊಹಮ್ಮದ್‌ ಯಾಕೂಬ್‌ ಅವರಿಗೆ ಗ್ರಾಮದ ಸರ್ಕಾರಿ ಶಾಲೆ ಬಗ್ಗೆ ಅಪಾರವಾದ ಪ್ರೀತಿ. ಈ ಹಿಂದೆಯೇ ಜಾಗವನ್ನು ದಾನ ನೀಡಿದ್ದರೂ ನೋಂದಣಿ ಮಾಡಿಕೊಡಲು ಸಾಧ್ಯವಾಗಿರಲಿಲ್ಲ. ಈಚೆಗೆ ಅವರ ಆರೋಗ್ಯ ಹದಗೆಟ್ಟಿತ್ತು. ತಮಗೆ ಏನಾದರೂ ಆಗುವುದರೊಳಗೆ ಜಾಗವನ್ನು ಶಾಲೆ ಹೆಸರಿಗೆ ನೋಂದಣಿ ಮಾಡಿಸಿಕೊಡಬೇಕು ಎಂದು ದುಬೈನ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಸಿಇಒ ಆಗಿರುವ ಪುತ್ರ ಮೊಹಮ್ಮದ್‌ ಅಕ್ರಂ ಖಾಜಿ ಅವರನ್ನು ಕರೆಯಿಸಿ ಶುಕ್ರವಾರ ನೋಂದಣಿ ಪ್ರಕ್ರಿಯೆ ಮುಗಿಸಿಕೊಟ್ಟರು. ಅವರ ನಡೆ ಹಲವರಿಗೆ ಮಾದರಿಯಾಗಿದೆ’ ಎಂದು ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌. ಜಯಪ್ಪ ತಿಳಿಸಿದರು.

‘ದಾನಿ ಯಾಕೂಬ್‌ ಅವರು ಇಳಿವಯಸ್ಸಿಲ್ಲೂ ಗಾಲಿ ಕುರ್ಚಿಯಲ್ಲಿ ಬಂದು ಜಾಗವನ್ನು ಶಾಲೆ ಹೆಸರಿಗೆ ಮಾಡಿಕೊಟ್ಟಿದ್ದು ಶ್ಲಾಘನೀಯ. ಶಾಲಾ ವಿದ್ಯಾರ್ಥಿಗಳು, ಪಾಲಕರು ಮತ್ತು ಸಿಬ್ಬಂದಿ ಅವರಿಗೆ ಚಿರಋಣಿ. ಅವರ ಪುತ್ರ ಮೊಹಮ್ಮದ್‌ ಅಕ್ರಂ ಖಾಜಿ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸ್ಮಾರ್ಟ್‌ ಟಿ.ವಿ., ಕಂಪ್ಯೂಟರ್‌, ಪ್ರೊಜೆಕ್ಟರ್‌ ಇತ್ಯಾದಿ ಉಪಕರಣಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಶಾಲೆಯ ಮುಖ್ಯಶಿಕ್ಷಕ ಅಯಾಜ್‌ ಬೇಗ್‌ ತಿಳಿಸಿದರು.

‘ನಮ್ಮ ತಂದೆಯವರು ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಮುಂತಾದೆಡೆ ಸೇವೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯ ಗ್ಲಾಸ್‌ಹೌಸ್‌, ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ ಮತ್ತು ಧಾರವಾಡದಲ್ಲಿ ಕಲಾಭವನ ನಿರ್ಮಾಣದಲ್ಲಿ ಸೇವೆಯಲ್ಲಿದ್ದಾಗ ಪ್ರಮುಖ ಪಾತ್ರ ವಹಿಸಿದ್ದಾರೆ. ಇರುವುದರೊಳಗೇ ಏನಾದರೂ ಕೊಡುಗೆ ನೀಡಲೇಬೇಕೆಂದು ಸರ್ಕಾರಿ ಉರ್ದು ಶಾಲೆಗೆ ನೀಡಿದ್ದ ಜಾಗವನ್ನು ನೋಂದಣಿ ಮಾಡಿಸಿಕೊಟ್ಟಿದ್ದಾರೆ’ ಎಂದು ಪುತ್ರ ಮೊಹಮ್ಮದ್‌ ಅಕ್ರಂ ಖಾಜಿ ವಿವರಿಸಿದರು.

ಯಾಕೂಬ್‌ ಅವರಿಗೆ ನಾಲ್ವರು ಪುತ್ರರಿದ್ದು, ಎಲ್ಲರೂ ಎಂಜಿನಿಯರಿಂಗ್‌ ಪದವೀಧರರು. ಹಿರಿಯ ಪುತ್ರ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇಬ್ಬರು ಅಮೆರಿಕದಲ್ಲಿದ್ದಾರೆ. ಮೊಹಮ್ಮದ್‌ ಅಕ್ರಂ ಖಾಜಿ ಅವರು ದುಬೈನಲ್ಲಿದ್ದಾರೆ.

ಕೆ. ಮೊಹಮ್ಮದ್‌ ಯಾಕೂಬ್‌
ಜಿ. ಕೊಟ್ರೇಶ್‌

ಸರ್ಕಾರಿ ಶಾಲೆಗಳು ಬಡವರ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿವೆ. ಅವರ ಶೈಕ್ಷಣಿಕ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಜವಾಬ್ದಾರಿ. ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಮಕ್ಕಳು ಹೆಚ್ಚಿನ ಸಹಕಾರ ನೀಡಲಿದ್ದಾರೆ.

- ಕೆ.ಮೊಹಮ್ಮದ್‌ ಯಾಕೂಬ್‌ ದಾನಿ ಸಂತೇಬೆನ್ನೂರು

ಮೊಹಮ್ಮದ್‌ ಯಾಕೂಬ್‌ ಅವರ ನಿರ್ಧಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗಿದೆ. ಇಲಾಖೆ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ದಾನವನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ.

-ಜಿ. ಕೊಟ್ರೇಶ್‌ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.