ADVERTISEMENT

ದಾವಣಗೆರೆ: ಶಾಲಾ ಶೌಚಾಲಯಕ್ಕೆ ಬೀಗ ಹಾಕಬೇಡಿ

ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ್ ವಿಠ್ಠಲ್‍ರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:55 IST
Last Updated 30 ಆಗಸ್ಟ್ 2025, 7:55 IST
ಗಿತ್ತೆ ಮಾಧವ ವಿಠ್ಠಲರಾವ್‌
ಗಿತ್ತೆ ಮಾಧವ ವಿಠ್ಠಲರಾವ್‌   

ದಾವಣಗೆರೆ: ಜಿಲ್ಲೆಯ ಬಹುತೇಕ ಎಲ್ಲ ಸರ್ಕಾರಿ ಶಾಲೆಗಳು ಶೌಚಾಲಯ ಹೊಂದಿವೆ. ಈ ಶೌಚಾಲಯಗಳಿಗೆ ಶಿಕ್ಷಕರು ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ಇದರಿಂದ ವಿದ್ಯಾರ್ಥಿಗಳು ಶೌಚಕ್ರಿಯೆಗಳಿಗೆ ಬಯಲು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ್ ವಿಠ್ಠಲ್‍ರಾವ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ, ಅನೈರ್ಮಲ್ಯ ಕೊರತೆಯನ್ನು ನೆಪವಾಗಿಟ್ಟುಕೊಂಡು ಶೌಚಾಲಯಗಳಿಗೆ ಬೀಗ ಹಾಕುವುದು ಸರಿಯಲ್ಲ. ಶಿಕ್ಷಕರ ಇಂತಹ ವರ್ತನೆಯನ್ನು ಸಹಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳು ಶೌಚಾಲಯ ಬಳಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಶಾಲೆ, ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಯಾವುದೇ ಹಂತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆ ಅತಿ ಮುಖ್ಯವಾಗಿದೆ. ಮಕ್ಕಳಿಗೆ ಬೇಕಾಗಿರುವ ಮೂಲಸೌಲಭ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು’ ಎಂದರು.

‘ಎಲ್ಲ ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಫಲಕ ಅಳವಡಿಸಬೇಕು. ಸಲಹಾ ಪೆಟ್ಟಿಗೆಗಳನ್ನು ಇಟ್ಟು ಕುಂದುಕೊರತೆಗಳನ್ನು ಆಲಿಸಬೇಕು. ಅಸುರಕ್ಷಿತ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ತಕ್ಷಣವೇ ಸರಿಪಡಿಸಬೇಕು. ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಇದ್ದು, ವಸತಿನಿಲಯದ ಸೌಲಭ್ಯವನ್ನು ಕಲ್ಪಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣವರ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾ ನಾಯ್ಕ, ಡಿಡಿಪಿಐ ಜಿ.ಕೊಟ್ರೇಶ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಮಕ್ಕಳ ರಕ್ಷಣಾ ಘಟಕದ ಟಿ.ಎನ್‌.ಕವಿತಾ ಹಾಜರಿದ್ದರು.

518 ಮಕ್ಕಳಿಗೆ ‘ಪ್ರಾಯೋಜಕತ್ವ’

‘ಪ್ರಾಯೋಜಕತ್ವ’ ಯೋಜನೆ ಮೂಲಕ ಜಿಲ್ಲೆಯ 518 ಮಕ್ಕಳಿಗೆ ಮೂರು ತಿಂಗಳಲ್ಲಿ ₹ 61.52 ಲಕ್ಷ ಪಾವತಿಸಲಾಗಿದೆ. ಏಕ ಪೋಷಕ ಮಕ್ಕಳು ಅನಾಥರು ಹಾಗೂ ಜೈಲಿನಲ್ಲಿರುವ ಪಾಲಕರ ಮಕ್ಕಳಿಗೆ ಮಿಷನ್ ವಾತ್ಸಲ್ಯ ಯೋಜನೆ ರೂಪಿಸಲಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ಪ್ರತಿ ವರ್ಷ ₹ 4000ದಂತೆ 12 ತಿಂಗಳು ಸಹಾಯಧನ ನೀಡಲಾಗುತ್ತದೆ. ಎಚ್ಐವಿ ಸೋಂಕಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಮಾಸಿಕ ₹ 2000 ಆರ್ಥಿಕ ನೆರವು ನೀಡಲಾಗುತ್ತದೆ.

ಈ ಯೋಜನೆಯಡಿ ಜಿಲ್ಲೆಯಲ್ಲಿ 406 ಫಲಾನುಭವಿಗಳಿದ್ದಾರೆ. ಇದರಲ್ಲಿ 101 ಬಾಲಕ ಮತ್ತು 305 ಬಾಲಕಿಯರಿದ್ದಾರೆ. ಈ ಯೋಜನೆಗೆ ₹ 24.36 ಲಕ್ಷ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪಿಎಂ ಕೇರ್ ಮತ್ತು ಸಿಎಂ ಬಾಲಸೇವಾ ಯೋಜನೆಯಡಿ ಮಾಸಿಕ ₹7500 ಆರ್ಥಿಕ ನೆರವು ಪಡೆಯುವ ಇಬ್ಬರು ಮಕ್ಕಳು ಜಿಲ್ಲೆಯಲ್ಲಿದ್ದಾರೆ. ಉಪಕಾರ ಯೋಜನೆಯಡಿ ಮಕ್ಕಳ ಪಾಲನಾ ಸಂಸ್ಥೆಯಿಂದ ಬಿಡುಗಡೆ ಹೊಂದಿದ 19 ಯುವಕ–ಯುವತಿಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ₹ 5000 ಗಳಂತೆ ಆರ್ಥಿಕ ಸೌಲಭ್ಯ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.