ADVERTISEMENT

ಕೋವಿಡ್‌–19 ಗೆಲ್ಲಲು ಆತ್ಮಸ್ಥೈರ್ಯ ಸಾಕು: ಕೊರೊನಾ ಸೋಂಕು ಮುಕ್ತ ಮರ್ದಾನ್‌ ಸಾಬ್‌

ಬಾಲಕೃಷ್ಣ ಪಿ.ಎಚ್‌
Published 13 ಜೂನ್ 2020, 19:30 IST
Last Updated 13 ಜೂನ್ 2020, 19:30 IST
ಮರ್ದಾನ್‌ ಸಾಬ್‌
ಮರ್ದಾನ್‌ ಸಾಬ್‌   

ದಾವಣಗೆರೆ: ‘ಕೊರೊನಾ ಬಂದರೆ ಜೀವನವೇ ಮುಗಿಯಿತು ಎಂದು ಅಪ್‌ಸೆಟ್‌ ಆಗಬಾರದು. ಹೆದರಿ ಬಿಪಿ, ಶುಗರ್‌ ಜಾಸ್ತಿ ಮಾಡಿಕೊಳ್ಳಬಾರದು. ಅದು ಬರುತ್ತದೆ ಹೋಗುತ್ತದೆ. ಧೈರ್ಯದಿಂದಿದ್ದರೆ ಸಾಕು. ಕೊರೊನಾ ವಿರುದ್ಧ ವಿಜಯ ಸಾಧಿಸಬಹುದು’.

ಇದು ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಹೊರಗೆ ಬಂದ ಜಾಲಿನಗರದ ಮರ್ದಾನ್‌ ಸಾಬ್‌ (48) ಅವರ ಮಾತುಗಳು. ಅವರು ಕೊರೊನಾ ಬಗೆಗೆ ಸ್ವಾನುಭವವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ನನ್ನ ತಮ್ಮ ಯುವಜನ ಸೇವಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ನೀರಿಗೆ ಬಿದ್ದವರನ್ನು ರಕ್ಷಣೆ ಮಾಡುವ ತಂಡವಾಗಿ ರಾಜ್ಯದಾದ್ಯಂತ ಓಡಾಡುವವರು ನಾವು. ನನ್ನ ಮಗಳನ್ನು ಪಕ್ಕದಲ್ಲೇ ಮದುವೆ ಮಾಡಿಕೊಟ್ಟಿದ್ದೇವೆ. ನನ್ನ ಮಗಳ ಮಾವನಿಗೆ ಹುಷಾರಿರಲಿಲ್ಲ. ಅವರನ್ನು ಟಾಟಾ ಸುಮೋದಲ್ಲಿ ಕರೆದುಕೊಂಡು ಹೋಗಿ ಮೊದಲು ಬಾಪೂಜಿ ಆಸ್ಪತ್ರೆಗೆ ಬಳಿಕ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ್ದೆವು. ಅವರಲ್ಲಿ ಕೊರೊನಾ ಇರುವುದು ಪತ್ತೆಯಾಗಿತ್ತು. ಬಳಿಕ ಅವರು ಮೃತಪಟ್ಟರು. ಅವರಿಗೆ ಕೊರೊನಾ ಇದೆ ಎಂದು ಗೊತ್ತಾದಾಗಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ನಾವು ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗೆ ದಾಖಲಾದೆವು’ ಎಂದು ವಿವರಿಸಿದರು.

ADVERTISEMENT

‘ನಮ್ಮದು ಕೂಡುಕುಟುಂಬ. ನಾವು ಮೂವರು ಸಹೋದರರು ಸೇರಿ 17 ಮಂದಿ ಮನೆಯಲ್ಲಿದ್ದೇವೆ. ನನ್ನ ತಂಗಿ ಹರಪನಹಳ್ಳಿಯಿಂದ ಇಬ್ಬರು ಮಕ್ಕಳೊಂದಿಗೆ ಬಂದಿದ್ದಳು. ಅವರು ಸಹಿತ ಕುಟುಂಬದ ಎಲ್ಲರೂ ಆಸ್ಪತ್ರೆಗೆ ದಾಖಲಾದರು. ಆಮೇಲೆ 7 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿತು. 13 ಮಂದಿಗೆ ನೆಗೆಟಿವ್‌ ಬಂತು’ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಪ್ರತಿದಿನ ಚೆಕ್‌ಅಪ್‌ ಮಾಡುತ್ತಿದ್ದರು. ಯಾವುದೇ ಸಮಸ್ಯೆ ಇಲ್ಲದೇ ಸೋಂಕುಮುಕ್ತರಾಗಿ ಬಿಡುಗಡೆಗೊಂಡಿದ್ದೇವೆ. ಜಿಲ್ಲಾಧಿಕಾರಿ, ಎಸ್‌ಪಿ ಕಾಳಜಿ ವಹಿಸಿದರು. ಅವರಿಗೆ ಕೃತಜ್ಞತೆಗಳು. ಕೊರೊನಾ ಬಂದವರನ್ನು ಕೀಳಾಗಿ ನೋಡಬೇಡಿ. ಇವತ್ತು ಕೀಳಾಗಿ ನೋಡಿದವರಿಗೇ ನಾಳೆ ಕೊರೊನಾ ಬರಬಹುದು. ಬಂದರೆ ಗುಣಮುಖರಾಗುವುದರಲ್ಲಿ ಅನುಮಾನವಿಲ್ಲ. ಬೇಕೆಂದೇ ಯಾರೂ ಕೊರೊನಾ ಸೋಂಕಿಗೆ ಒಳಗಾಗುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.