ADVERTISEMENT

ಖರೀದಿ ಕೇಂದ್ರದಲ್ಲೇ ಭತ್ತ ಮಾರಾಟ ಮಾಡಿ: ಡಿಸಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:33 IST
Last Updated 26 ನವೆಂಬರ್ 2021, 2:33 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಜಿಲ್ಲೆಯ ಐದು ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರು ಹೊರಗೆ ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುವುದನ್ನು ತಪ್ಪಿಸಲು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಭತ್ತದ ಬೆಂಬಲ ಬೆಲೆ ಹಾಗೂ ಭತ್ತ ಖರೀದಿ ಕೇಂದ್ರದ ಬಗೆಗಿನ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ 2021-22ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಭತ್ತ ಖರೀದಿಸಲು ನಿರ್ಧರಿಸಿದೆ. ಅದರಂತೆ ಸಾಮಾನ್ಯ ಭತ್ತಕ್ಕೆ ₹ 1,940, ಗ್ರೇಡ್-ಎ ಭತ್ತಕ್ಕೆ ₹ 1,960 ಬೆಂಬಲ ಬೆಲೆ ಘೋಷಿಸಿದೆ ಎಂದರು.

ADVERTISEMENT

ರಾಜ್ಯದ ರೈತರಿಂದ 3.35 ಲಕ್ಷ ಮೆ.ಟನ್ ಭತ್ತವನ್ನು ಖರೀದಿಸುತ್ತಿದ್ದು, ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಎಫ್.ಎ.ಕ್ಯೂ ಗುಣಮಟ್ಟದ ಭತ್ತವನ್ನು ಮಾರಲು ಇಚ್ಛಿಸುವ ರೈತರು ಎಪಿಎಂಸಿ ಮಾರುಕಟ್ಟೆಯಲ್ಲಿನ ಕೆ.ಎಫ್.ಸಿ.ಸಿ (ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ) ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಭತ್ತ ಖರೀದಿಸಲು ಅಕ್ಕಿ ಗಿರಣಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳು ಕಂಡು ಬಂದರೆ ಅಥವಾ ರೈತರ ಹೆಸರಲ್ಲಿ ಭತ್ತ ಮಾರಲು ಪ್ರಯತ್ನಿಸಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌, ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.