ದಾವಣಗೆರೆಯ ಪ್ರಧಾನ ಅಂಚೆ ಕಚೇರಿಯಲ್ಲಿ ವಿವಿಧ ಸೇವೆ ಪಡೆಯಲು ಬುಧವಾರ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಜನ
–ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆ: ಅಂಚೆ ಇಲಾಖೆ ನೂತನವಾಗಿ ಅಳವಡಿಸಿಕೊಂಡಿರುವ ‘ಐ.ಟಿ 2.O’ ತಂತ್ರಜ್ಞಾನ ಮತ್ತು ಸಂಪರ್ಕ ಜಾಲದ ಸರ್ವರ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಅಂಚೆ ಸೇವೆಯಲ್ಲಿ ದಿಢೀರ್ ವ್ಯತ್ಯಯ ಉಂಟಾಗಿದೆ. ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಪಾರ್ಸಲ್ ಸೇವೆ, ಅಂಚೆ ವಿಮೆ ಹಾಗೂ ಮನಿ ಆರ್ಡರ್ ಸೇವೆಗಳಲ್ಲಿ ಮೂರು ದಿನಗಳಿಂದ ತೊಂದರೆಯಾಗಿದೆ.
ಭಾರತೀಯ ಅಂಚೆ ಇಲಾಖೆಯು ‘ಐ.ಟಿ 2.O’ ಹೆಸರಿನ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಈ ವ್ಯವಸ್ಥೆ ಜೂನ್ 23ರಿಂದ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿದೆ. ಆ.4ರಂದು ದೇಶದ ಹಲವು ರಾಜ್ಯಗಳು ಏಕಕಾಲಕ್ಕೆ ಈ ಸೇವೆಗೆ ತೆರೆದುಕೊಂಡಿದ್ದರಿಂದ ಸರ್ವರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಸೇವೆ ಮರಳಿದರೂ ತೀರಾ ನಿಧಾನಗತಿಯಲ್ಲಿದೆ.
ಆ.9ರ ರಕ್ಷಾಬಂಧನ ಹಬ್ಬದ ಅಂಗವಾಗಿ ದೂರದ ಊರಿನ ಸಹೋದರರಿಗೆ ಅಂಚೆ ಇಲಾಖೆಯ ಮೂಲಕ ರಾಖಿ ರವಾನೆಯಾಗುತ್ತವೆ. ಹೀಗೆ ರಾಖಿ ಹಿಡಿದು ಅಂಚೆ ಕಚೇರಿಗೆ ತೆರಳಿದ ಯುವತಿಯರು, ಮಹಿಳೆಯರು ನಿರಾಸೆಯಿಂದ ಮನೆಗೆ ಮರಳಿದ್ದಾರೆ. ಶ್ರಾವಣ ಮಾಸದಲ್ಲಿ ದೇವರಿಗೆ ಮನಿ ಆರ್ಡರ್ ಮೂಲಕ ಕಾಣಿಕೆ, ದೇಣಿಗೆ ಕಳುಹಿಸಲು ಪ್ರಯತ್ನಿಸಿ ಭಕ್ತರು ವಿಫಲರಾಗಿದ್ದಾರೆ.
ಒಂದೂವರೆ ತಿಂಗಳ ಹಿಂದೆ ರಾಜ್ಯದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವಾಗ ಸೇವೆಯಲ್ಲಿ ಉಂಟಾಗುವ ವ್ಯತ್ಯಯದ ಬಗ್ಗೆ ಅಂಚೆ ಇಲಾಖೆಯು ಮೊದಲೇ ಮಾಹಿತಿ ನೀಡಿತ್ತು. ಅಂದಿನಿಂದ ಹೊಸ ವ್ಯವಸ್ಥೆಯಲ್ಲಿ ಅಂಚೆ ಕಾರ್ಯನಿರ್ವಹಿಸಿದೆ. ಬೇರೆ ರಾಜ್ಯಗಳು ಈ ತಂತ್ರಜ್ಞಾನಕ್ಕೆ ತೆರೆದುಕೊಂಡಾಗ ಸೇವೆಯಲ್ಲಿ ಆಗಬಹುದಾದ ವ್ಯತ್ಯಯದ ಬಗ್ಗೆ ಇಲಾಖೆ ಊಹಿಸಿರಲಿಲ್ಲ. ಅಂಚೆ ಪೆಟ್ಟಿಗೆ ಮೂಲಕ ನಡೆಯುವ ಸಾಮಾನ್ಯ ಅಂಚೆ ಸೇವೆ, ಬ್ಯಾಂಕ್ ಮಾದರಿಯ ಹಣಕಾಸು ವ್ಯವಹಾರಗಳಿಗೆ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.
‘ಶ್ರಾವಣ ಮಾಸದಲ್ಲಿ ಭಕ್ತರು ವಿವಿಧ ದೇಗುಲಗಳಿಗೆ ಮನಿ ಆರ್ಡರ್ ಮೂಲಕ ಕಾಣಿಕೆ ಸಲ್ಲಿಸುವುದು ವಾಡಿಕೆ. ಅಂಚೆ ಮೂಲಕ ರಾಖಿ ಕಳುಹಿಸುವ ಸಹೋದರಿಯರೂ ಇದ್ದಾರೆ. ರಾಖಿ ಹಬ್ಬಕ್ಕೂ ಕೆಲ ದಿನಗಳ ಮುಂಚೆ ಹೀಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಪಾರ್ಸಲ್ ಸೇವೆ ಬಯಸಿ ಬಂದವರಿಗೆ ಸಮಸ್ಯೆಯ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ ಸುಸ್ತಾಗಿದ್ದೇವೆ’ ಎಂದು ನಗರದ ಅಂಚೆ ಕಚೇರಿಯೊಂದರ ಸಿಬ್ಬಂದಿ ತಿಳಿಸಿದರು.
ಕೋರ್ಟ್ ನೋಟಿಸ್, ಸರ್ಕಾರಿ ಇಲಾಖೆಯ ಪತ್ರಗಳು ಸಾಮಾನ್ಯವಾಗಿ ರಿಜಿಸ್ಟರ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ರವಾನೆಯಾಗುತ್ತವೆ. ನೋಟಿಸ್ ಅಥವಾ ಪತ್ರವೊಂದು ಗಮ್ಯ ತಲುಪುವವರೆಗಿನ ಪ್ರತಿ ಹಂತವು ಅಂಚೆ ಇಲಾಖೆಯಲ್ಲಿ ದಾಖಲೆ ಲಭ್ಯವಾಗುತ್ತದೆ. ನಿಗದಿತ ಸ್ಥಳ ತಲುಪಿದ ಪತ್ರದ ಮಾಹಿತಿಯನ್ನು ಬಟವಾಡೆಗೂ ಮುನ್ನ ಅಂಚೆ ಸಂಪರ್ಕ ಜಾಲದಲ್ಲಿ ನಮೂದಿಸಬೇಕು. ಸರ್ವರ್ ಸಮಸ್ಯೆಯಿಂದ ಬಟವಾಡೆಯಾಗದ ಪತ್ರಗಳು ಅಂಚೆ ಇಲಾಖೆಯಲ್ಲಿಯೇ ಉಳಿದಿವೆ.
ದಾವಣಗೆರೆಯ ಪ್ರಧಾನ ಅಂಚೆ ಕಚೇರಿ
ಪುಣೆಯಲ್ಲಿರುವ ಸಹೋದರನಿಗೆ ಪ್ರತಿ ವರ್ಷ ರಾಖಿ ಕಳುಹಿಸುತ್ತಿದ್ದೆ. ಎರಡು ದಿನ ಅಂಚೆ ಕಚೇರಿಗೆ ಅಲೆದು ಕೋರಿಯರ್ ಮೂಲಕ ರಾಖಿ ರವಾನಿಸಿದೆಪುಷ್ಪಾ ವಿದ್ಯಾನಗರ ನಿವಾಸಿ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.