ADVERTISEMENT

ಮನೆಯ ದೇವರ ಸೇವೆಗೆ ಮುಡಿಪು: ಭಕ್ತಿಯಲ್ಲಿ ಪರವಶರಾಗುತ್ತಿದ್ದ ಶಾಮನೂರು ಶಿವಶಂಕರಪ್ಪ

ಜೆ.ತಿಮ್ಮಪ್ಪ
Published 15 ಡಿಸೆಂಬರ್ 2025, 2:27 IST
Last Updated 15 ಡಿಸೆಂಬರ್ 2025, 2:27 IST
<div class="paragraphs"><p>ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿನ ಕಲ್ಲೇಶ್ವರ ಸ್ವಾಮಿಗೆ ದಾವಣಗೆರೆಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಜನ್ಮ ದಿನಾಚರಣೆ<br>ಅಂಗವಾಗಿ ಪೂಜೆ ಸಲ್ಲಿಸಿದ್ದರು (ಸಂಗ್ರಹ ಚಿತ್ರ)</p></div>

ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿನ ಕಲ್ಲೇಶ್ವರ ಸ್ವಾಮಿಗೆ ದಾವಣಗೆರೆಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಜನ್ಮ ದಿನಾಚರಣೆ
ಅಂಗವಾಗಿ ಪೂಜೆ ಸಲ್ಲಿಸಿದ್ದರು (ಸಂಗ್ರಹ ಚಿತ್ರ)

   

ಚಿಕ್ಕಜಾಜೂರು: ಶಾಮನೂರು ಶಿವಶಂಕರಪ್ಪ ಅವರಿಗೂ, ಇಲ್ಲಿಗೆ ಸಮೀಪದ ಹಿರೇಎಮ್ಮಿಗನೂರು ಕಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಕಲ್ಲೇಶ್ವರ ಸ್ವಾಮಿಯು ಶಾಮನೂರು ಶಿವಶಂಕರಪ್ಪ ಅವರ ಮನೆ ದೇವರಾಗಿದ್ದು, ಪ್ರತಿ ವರ್ಷ ಅವರು ಹತ್ತಾರು ಬಾರಿ ದೇವಸ್ಥಾನಕ್ಕೆ ಬಂದು ಸ್ವತಃ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆಯಾಗಿತ್ತು.

ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಅಧ್ಯಕ್ಷರೂ ಆಗಿದ್ದ ಶಿವಶಂಕರಪ್ಪ ಅವರು ಪ್ರತಿ ವರ್ಷ ಜೂನ್‌ 16ರಂದು ತಮ್ಮ ಜನ್ಮದಿನದಂದು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ನಡೆಯುವ ಕಲ್ಲೇಶ್ವರ ಸ್ವಾಮಿಯ ರಥೋತ್ಸವದಂದು ಕುಟುಂಬ ಸದಸ್ಯರೊಂದಿಗೆ ಬಂದು ಪೂಜೆ ಸಲ್ಲಿಸಿ, ತೇರನ್ನು ಸ್ವತಃ ಎಳೆಯುತ್ತಿದ್ದರು. ಶ್ರಾವಣ ಮಾಸದ ಮೊದಲ ಸೋಮವಾರ, ಕಾರ್ತಿಕ ಮಾಸದ ಮೊದಲ ಸೋಮವಾರ ಹಾಗೂ ಶಿವರಾತ್ರಿಯಂದು ಭೇಟಿ ನೀಡುವುದನ್ನು ತಪ್ಪಿಸುತ್ತಿರಲಿಲ್ಲ. ಇದಲ್ಲದೇ, ನೆನೆಸಿಕೊಂಡಾಗಲೆಲ್ಲಾ ಮನೆದೇವರಿಗೆ ಬಂದು ಹೋಗುತ್ತಿದ್ದರು.

ADVERTISEMENT

ದಾನದಲ್ಲಿ ಕರ್ಣ: ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶೇ 90ರಷ್ಟು ಧನಸಹಾಯ ನೀಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ದಾಸೋಹ ಮಂದಿರಕ್ಕೆ ಮತ್ತು ಹೊಸದಾಗಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ನೆರವಾಗಿದ್ದಾರೆ. ದಾವಣಗೆರೆಯ ನಿಟ್ಟುವಳ್ಳಿ ಎ.ಎಂ. ಜಯದೇವಪ್ಪ ಅವರೊಂದಿಗೆ ಕೈಜೋಡಿಸಿ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. 2026 ಜೂನ್‌ 15ರೊಳಗೆ ಅವರಿಂದಲೇ ಉದ್ಘಾಟಿಸುವ ಇಂಗಿತ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರಲ್ಲಿತ್ತು ಎನ್ನುತ್ತಾರೆ ದೇವಸ್ಥಾನ ಸಮಿತಿಯ ಜಂಟಿ ಕಾರ್ಯದರ್ಶಿ ಕೆ.ಆರ್‌. ಶಿವಯೋಗಿ.

ಮನೆದೇವರಿಗೆ 5 ಕೆ.ಜಿ. ಆಭರಣ: ಕಲ್ಲೇಶ್ವರ ಸ್ವಾಮಿ, ಗಣಪತಿ ಹಾಗೂ ಮಹಿಷಾಸುರ ಮರ್ದಿನಿ ದೇವತಾ ಮೂರ್ತಿಗಳಿಗೆ ಬಂಗಾರದ ಮುಖಪದ್ಮ ಸೇರಿದಂತೆ ಸಾಕಷ್ಟು ಆಭರಣಗಳನ್ನು ನೀಡಿದ್ದಾರೆ. ಬೆಳ್ಳಿ ನಾಗಾಭರಣ, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ ಹೊದಿಕೆಯನ್ನು ಮಾಡಿಸಲು ಹಣ ನೀಡಿದ್ದಾರೆ. ಹಂತಹಂತವಾಗಿ ದಾನವಾಗಿ ನೀಡಿದ ಚಿನ್ನದ ಆಭರಣಗಳ ತೂಕವೇ ಅಂದಾಜು 5 ಕೆ.ಜಿ. ಎನ್ನುತ್ತಾರೆ ದೇಗುಲದ ಪದಾಧಿಕಾರಿಗಳು.

‘ಗ್ರಾಮದ ಬಿಲ್ವಪತ್ರೆ ವನಕ್ಕೆ ಕೊಳವೆಬಾವಿ ಕೊರೆಸಿಕೊಟ್ಟಿದ್ದರು. ಸಂತೆಬೆನ್ನೂರಿನಿಂದ ಹಿರೇ ಎಮ್ಮಿಗನೂರುವರೆಗೆ ಡಾಂಬರ್‌ ರಸ್ತೆ ಹಾಗೂ ಸಿಸಿ ರಸ್ತೆ ನಿರ್ಮಿಸಿಕೊಟ್ಟಿದ್ದರು. ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಇಂಗಿತವನ್ನು ಆಗಾಗ್ಗೆ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು’ ಎಂಬ ವಿಷಯವನ್ನು ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಪಿ.ಎಸ್‌. ಬಸವರಾಜಪ್ಪ ಮತ್ತು ಸಮಿತಿ ಸದಸ್ಯರು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.