
ದಾವಣಗೆರೆ: ಹೆಗಲಿಗೆ ಹೆಗಲುಕೊಟ್ಟು ಉದ್ಯಮ ಸಾಮ್ರಾಜ್ಯ ಕಟ್ಟಿ, ಈಗ ಮರಳಿ ಬಾರದ ಲೋಕಕ್ಕೆ ಹೊರಟಿರುವ ಅಪ್ಪನನ್ನು ಕೂರಿಸಿದ್ದ ಕೈವಲ್ಯಕ್ಕೂ ಹೆಗಲು ನೀಡಿದ ಮಕ್ಕಳ ಮೊಗದಲ್ಲಿ ಕೆನೆಗಟ್ಟಿದ್ದ ದುಃಖ. ಅಂತಿಮ ಯಾತ್ರೆಯುದ್ದಕ್ಕೂ ನಿಂತು ತುಂಬಿದ ಹಿರಿಯ ಜೀವಕ್ಕೆ ಕೈಮುಗಿದು ಕಣ್ಣಾಲಿ ಒದ್ದೆ ಮಾಡಿಕೊಂಡ ಜನಸ್ತೋಮ. ಕಷ್ಟದಲ್ಲಿದ್ದಾಗ ನೌಕರಿ ನೀಡಿ ಬದುಕಿನ ದಡ ಸೇರಿಸಿದ ನಾಯಕನನ್ನು ಕೊನೆಯದಾಗಿ ಕಣ್ತುಂಬಿಕೊಳ್ಳಲು ಸೇರಿದ್ದ ಸಂಸ್ಥೆಯ ನೂರಾರು ಸಿಬ್ಬಂದಿಯಿಂದ ಅಶ್ರುತರ್ಪಣ.
ಅತ್ಯಂತ ಹಿರಿಯ ರಾಜಕಾರಣಿ, ಬೃಹತ್ ಉದ್ಯಮಿ, ಜಿಲ್ಲೆಯ ಶಿಕ್ಷಣ ಕ್ರಾಂತಿಯ ಹರಿಕಾರ, ವೀರಶೈವ ಲಿಂಗಾಯತ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ಕೈವಲ್ಯದಲ್ಲಿ ಇರಿಸಿ, ಮನೆಯಾಚೆ ರಸ್ತೆಯಲ್ಲಿ ಮೆರವಣಿಗೆಗೆ ಸಿದ್ಧಪಡಿಸಿದ್ದ ವಾಹನದ ಬಳಿ ತಂದಾಗ, ಅದುವರೆಗೂ ಮಡುಗಟ್ಟಿದ್ದ ಕುಟುಂಬದ ಸದಸ್ಯರ ಕಣ್ಣೀರು ಧಾರೆಯಾಗಿ ಹರಿಯಿತು. ಎಂಸಿಸಿ ಬಡಾವಣೆಯಲ್ಲಿನ ನಿವಾಸದಿಂದ ಸೋಮವಾರ ಮಧ್ಯಾಹ್ನ 12.22ಕ್ಕೆ ಶಿವಶಂಕರಪ್ಪ ಅವರ ಅಂತಿಮ ಯಾತ್ರೆ ಪುಷ್ಪಾಲಂಕೃತ ವಾಹನದಲ್ಲಿ ಆರಂಭವಾದಾಗ ಅವರ ಅಭಿಮಾನಿಗಳ ದುಃಖ ಮಡುಗಟ್ಟಿತು.
ತೆರೆದ ವಾಹನವು ಹೆಜ್ಜೆಹೆಜ್ಜೆಗೂ ದೂರವಾಗುತ್ತಿದ್ದಂತೆಯೇ, ಯಜಮಾನರನ್ನು ಕಳೆದುಕೊಂಡ ಮನೆಯಲ್ಲಿ ನಿರ್ವಾತವೊಂದರ ಸೃಷ್ಟಿ. ದುಗುಡ, ಆರ್ದ್ರತೆ ತುಂಬಿದ್ದ ಎಲ್ಲರ ಮೊಗದಲ್ಲೂ ನೋವಿನ ಛಾಯೆ. ಬಿಸಿಲು ಏರಿದ್ದರೂ ಕಾರ್ಮೋಡ ಕವಿದ ಭಾವ.
‘ಶಾಮನೂರು ಶಿವಶಂಕರಪ್ಪ ಅವರಿಗೆ ಜಯವಾಗಲಿ’, ‘ಶಿವಶಂಕರಪ್ಪ ಅಮರ್ ರಹೇ...’ ಘೋಷಣೆಗಳು ಅಭಿಮಾನಿಗಳ ಕಂಠದಿಂದ ಅಲೆಯಂತೆ ಹೊಮ್ಮಿದವು. ಮೇಳದವರ ಹಲಗೆಯ ನಾದ, ಶಹನಾಯಿಯ ಸ್ವರವು ಬೇಸರದ ಕಟ್ಟೆಯೊಡೆದಂತೆ ಕೇಳಿಬಂದವು. ಮೈಕ್‌ನಲ್ಲಿ ಕೇಳಿಬಂದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ.. ಕಾಣಬಲ್ಲೆನೆ ಒಂದು ದಿನ ಕಡಲನು, ಸೇರಬಲ್ಲೆನೆ ಒಂದು ದಿನ...’ ಹಾಡು ಇಡೀ ವಾತಾವರಣವನ್ನು ದುಃಖದ ಮಡುವಿಗೆ ತಳ್ಳಿತು.
ಪಾರ್ಥಿವ ಶರೀರ ಇರಿಸಿದ್ದ ತೆರೆದ ವಾಹನವು ಶಾಮನೂರು ರಸ್ತೆಗೆ ಹೊರಳುತ್ತಿದ್ದಂತೆಯೇ ನೂರಾರು ಜನರು ಅಂತಿಮ ಯಾತ್ರೆಯಲ್ಲಿ ಸೇರಿಕೊಂಡರು. ಮುಖ್ಯರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದ್ದರಿಂದ ಯಾವುದೇ ಅಡ್ಡಿಯಿಲ್ಲದೆ ಮೆರವಣಿಗೆ ಮುಂದೆ ಸಾಗಿತು. ಶಾಮನೂರು ಕುಟುಂಬದ ಬಂಧುಗಳು, ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಆಪ್ತ ವಲಯದಲ್ಲಿ ಗುರುತಿಸಿಕೊಂಡವರು, ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ದರ್ಶನ ಪಡೆದರು. ಹಿರಿಯರು, ಕಿರಿಯರೆನ್ನದೇ ಕೈ ಎತ್ತಿ ಮುಗಿದು ವಿದಾಯ ಹೇಳಿದರು. ಹೂವಿನ ಹಾರಗಳನ್ನು ಅರ್ಪಿಸಿ ಕೃತಜ್ಞತೆ ಸಲ್ಲಿಸಿದರು.
ಪಾರ್ಥಿವ ಶರೀರ ಇರಿಸಿದ್ದ ವಾಹನದಲ್ಲಿ ಮಕ್ಕಳಾದ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ನಿಂತು ಅಭಿಮಾನಿಗಳು ನೀಡಿದ ಹೂಗಳನ್ನು ವಿನಮ್ರತೆಯಿಂದ ಪಡೆದು, ಭಾರದ ಮನಸ್ಸಿನಲ್ಲೇ ಅಪ್ಪನ ಪಾದಕ್ಕೆ ಅರ್ಪಿಸುತ್ತಿದ್ದುದು ಇಡೀ ಮಾರ್ಗದುದ್ದಕ್ಕೂ ಕಂಡುಬಂತು. ತಂದೆಗೆ ಜನರು ತೋರಿದ ಅಪಾರ ಗೌರವಾದರಗಳಿಂದ ಅವರ ಕಣ್ಣಂಚುಗಳು ಒದ್ದೆಯಾಗಿದ್ದವು.
ಗುಂಡಿ ವೃತ್ತದ ಮೂಲಕ ಚರ್ಚ್ ರಸ್ತೆಯಲ್ಲಿ ಸಾಗಿದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸ್ಥಳೀಯ ನಿವಾಸಿಗಳು ಗುಂಪುಗುಂಪಾಗಿ ಸೇರಿದ್ದರು. ಫೊಟೊ ಕ್ಲಿಕ್ಕಿಸಿ, ವಿಡಿಯೊ ಚಿತ್ರೀಕರಿಸಿ ನಾಯಕನ ಯುಗಾಂತ್ಯದ ಅಂತಿಮ ಕ್ಷಣಗಳನ್ನು ದಾಖಲಿಸಿಕೊಂಡರು. ರಾಮ್ ಆ್ಯಂಡ್ ಕೋ ವೃತ್ತದ ಮೂಲಕ ಎವಿಕೆ ಕಾಲೇಜು ರಸ್ತೆಗೆ ತಿರುಗಿದ ವಾಹನವು, ಅಲ್ಲಿನ ಬಾಪೂಜಿ ವಿದ್ಯಾಸಂಸ್ಥೆಯ ಅವರಣವನ್ನು ಪ್ರವೇಶಿಸಿತು. ಅಲ್ಲಿದ್ದ ನೂರಾರು ಸಿಬ್ಬಂದಿ, ದೀರ್ಘಕಾಲ ಸಂಸ್ಥೆಯ ನೇತೃತ್ವ ವಹಿಸಿದ್ದ ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಮೇಲೆ ಹೂಮಳೆಗರೆದರು. ಹಾರಗಳನ್ನು ಸಮರ್ಪಿಸಿದರು. ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದ ನಗರದ ಹೈಸ್ಕೂಲ್ ಮೈದಾನಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು.
ಸಾರ್ವಜನಿಕ ದರ್ಶನದ ಬಳಿಕ ಮತ್ತೆ ಶುರುವಾದ ಅಂತಿಮ ಯಾತ್ರೆಯು, ಅರುಣ ಥಿಯೇಟರ್ ವೃತ್ತದ ಮೂಲಕ ಹಳೇ ದಾವಣಗೆರೆ ಪ್ರವೇಶಿಸಿತು. ಮಾರ್ಗದುದ್ದಕ್ಕೂ ಎಲ್ಲಿ ನೋಡಿದರೂ ನೆಚ್ಚಿನ ನಾಯಕನಿಗೆ ಸಂತಾಪ ಸೂಚಿಸುವ ಬ್ಯಾನರ್‌ಗಳು ರಾರಾಜಿಸಿದವು. ಹೊಂಡದ ವೃತ್ತದ ಮೂಲಕ ನಗರದ ಅಧಿದೇವತೆ ದುಗ್ಗಮ್ಮನ ಗುಡಿಯ ಆವರಣವನ್ನು ಮೆರವಣಿಗೆ ತಲುಪಿತು. ತಮ್ಮ ಕೊನೆಯ ಉಸಿರಿರುವವರೆಗೂ ದೇಗುಲದ ಮಹಾ ಪೋಷಕರಾಗಿ ನಿಂತಿದ್ದ, ನಗರದ ಹೆಮ್ಮೆಯ ಪುತ್ರ ಶಾಮನೂರು ಅವರನ್ನು ಗ್ರಾಮದೇವಿ ಬೀಳ್ಕೊಟ್ಟಳು.
ಚೌಕಿಪೇಟೆ, ಕೆ.ಆರ್. ರಸ್ತೆಯ ಗಲ್ಲಿಗಳಲ್ಲಿ ಸ್ಥಳೀಯರು ಕಿಕ್ಕಿರಿದು ತುಂಬಿದ್ದರು. ವಾಹನದ ಎದುರು ಪಟಾಕಿಗಳನ್ನು ಸಿಡಿಸಿ ತಮ್ಮದೇ ರೀತಿಯಲ್ಲಿ ನಮಿಸಿದರು. ಮಹಿಳೆಯರೂ ಸೇರಿದಂತೆ ವಿವಿಧ ಸಂಘ– ಸಂಸ್ಥೆಗಳ ಸದಸ್ಯರು ಮುಷ್ಟಿಯಲ್ಲಿ ಹೂ ಹಿಡಿದು ಪಾರ್ಥಿವ ಶರೀರದತ್ತ ಅರ್ಪಿಸಿ ನಮಸ್ಕರಿಸಿದರು. ಬಂಬೂಬಜಾರ್ ಪ್ರವೇಶಿಸಿದ ಅಂತಿಮ ಯಾತ್ರೆಯು, ಅಂತ್ಯಸಂಸ್ಕಾರಕ್ಕೆ ನಿಶ್ಚಯಿಸಿದ್ದ ಕಲ್ಲೇಶ್ವರ ಮಿಲ್‌ನತ್ತ ಸಾಗಿತು. ಮಿಲ್ ಸುತ್ತಮತ್ತಲಿನ ಜಾಗದಲ್ಲಿ ಅದಾಗಲೇ ಸೇರಿದ್ದ ಅಪಾರ ಸಂಖ್ಯೆಯ ಜನರು, ವಾಹನವು ಆವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಹಿಂದೆಯೇ ಗುಂಪುಗುಂಪಾಗಿ ನಡೆದರು. ಗಣ್ಯರ ವಾಹನಗಳೂ ಸಾಲುಗಟ್ಟಿದವು.
ದಾವಣಗೆರೆ ನಗರವನ್ನು ಭಾಸ್ಕರನಂತೆ ದಶಕಗಳ ಕಾಲ ಬೆಳಗಿದ ಅವರು, ಬದುಕಿನ ಅಂತಿಮ ಯಾತ್ರೆಯನ್ನು ಮುಗಿಸಿ, ಸಂಜೆಯ ಸೂರ್ಯನೊಂದಿಗೆ ತಾವೂ ಅಸ್ತಂಗತರಾದರು. ನಿರ್ವಾತವೊಂದನ್ನು ಶಾಶ್ವತವಾಗಿ ಉಳಿಸಿಹೋದರು. ಜನರ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿದರು.
ರೇಷನ್ ಕಾರ್ಡ್ ಕೊಡಿಸಲು ಸಹಾಯ ಮಾಡಿದ್ದರು. ಜನರಿಗೆ ಅವರು ಮಾಡಿರುವ ಅಪಾರ ಸೇವೆಯನ್ನು ಏನೆಂದು ವರ್ಣಿಸಲಿ? ಅವರು ಒಂದಿನಿತೂ ಹಮ್ಮು ತೋರದ ಹೃದಯವಂತ. ನನ್ನಂತ ನೂರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆಕುಮಾರ ನಾಯ್ಕ ಅಭಿಮಾನಿ
ಸ್ವಯಂಪ್ರೇರಣೆಯಿಂದ ಅಂಗಡಿ ಬಂದ್
ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ನಗರದ ಕೆಲವು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಚಿನ್ನಾಭರಣ ವ್ಯಾಪಾರಿಗಳ ಸಂಘದವರೂ ಸೇರಿದಂತೆ ಕೆಲವು ಅಂಗಡಿಯವರು ತಮ್ಮ ವಹಿವಾಟು ಸ್ಥಗಿತಗೊಳಿಸಿ ಅಂಗಡಿಯ ಹೊರಗೆ ನಿಂತು ಪುಷ್ಪಾರ್ಚನೆ ಮಾಡಿ ಅಂತಿಮ ವಿದಾಯ ಹೇಳಿದರು. ಹಳೇ ದಾವಣಗೆರೆ ಭಾಗದಲ್ಲಿ ಜನಸಂದಣಿ ಹೆಚ್ಚಿತ್ತು. ಪಾರ್ಥಿವ ಶರೀರದ ಮೆರವಣಿಗೆ ಸಾಗಿದ ಮಾರ್ಗ ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿನಂತಿತ್ತು. ಹೊಸ ದಾವಣಗೆರೆಯಲ್ಲಿ ಅಂಗಡಿ ಹೋಟೆಲ್‌ಗಳು ತೆರೆದಿದ್ದವು. ಜನಜೀವನ ಎಂದಿನಂತೆ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.