ADVERTISEMENT

ದಾವಣಗೆರೆ | ಕಲೆ, ಕಲಾವಿದರ ಮಹಾಪೋಷಕ ಶಾಮನೂರು ಶಿವಶಂಕರಪ್ಪ

ಪ್ರದೀಪ ಕುಂದಣಗಾರ
Published 15 ಡಿಸೆಂಬರ್ 2025, 3:15 IST
Last Updated 15 ಡಿಸೆಂಬರ್ 2025, 3:15 IST
<div class="paragraphs"><p>‘ಬೆಂಗಳೂರಿಗೆ ಬಂದ ಬೊರೇಗೌಡ’ ಚಲನಚಿತ್ರವ ದೃಶ್ಯವೊಂದಕ್ಕೆ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದಾಗಿನ ಚಿತ್ರ</p></div>

‘ಬೆಂಗಳೂರಿಗೆ ಬಂದ ಬೊರೇಗೌಡ’ ಚಲನಚಿತ್ರವ ದೃಶ್ಯವೊಂದಕ್ಕೆ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದಾಗಿನ ಚಿತ್ರ

   

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರು ಮಧ್ಯ ಕರ್ನಾಟಕದ ಲಿಂಗಾಯತ ಸಮಾಜದ ಪ್ರಬಲ ಮುಂಚೂಣಿ ನಾಯಕ. ರಾಜಕೀಯ ಮುತ್ಸದ್ಧಿ ಹಾಗೂ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರೂ, ಕಲಾ ಅಭಿಮಾನಿ, ಕಲಾ ಪೋಷಕ, ಸಾಹಿತ್ಯ ಪ್ರೇಮಿಯಾಗಿಯೂ ಗುರುತಿಸಿಕೊಂಡವರು.

ಕಲಾವಿದರು ಬಂದು ಸಹಾಯ ಕೇಳಿದರೆ ಹಿಂದೆ ಮುಂದೆ ನೋಡದೆ ‘ನಾಳೆ ಬನ್ನಿ’ ಎನ್ನದೇ ತಕ್ಷಣಕ್ಕೆ ಸಹಾಯಹಸ್ತ ಚಾಚುತ್ತಿದ್ದ ಹಿರಿಯ ಜೀವ ಎಂದು ನೆನಪಿಸಿಕೊಳ್ಳುತ್ತಾರೆ ಹಲವು ಹಿರಿಯ ಕಲಾವಿದರು.

ADVERTISEMENT

ದಾವಣಗೆರೆಯಲ್ಲಿ 6–7 ದಶಕಗಳಿಂದ ಯಾವುದೇ ಕಲೆ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ದೊಡ್ಡದಾಗಿರಲಿ, ಚಿಕ್ಕದಾಗಿರಲಿ ಇವರ ಸಹಾಯ ಇದ್ದೇ ಇರುತ್ತಿತ್ತು. ಅದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೇ ಆಗಲಿ, ಅಖಿಲ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ಸಮ್ಮೇಳನವೇ ಆಗಿರಲಿ, ಸಾಂಸ್ಕೃತಿಕ ಕಾರ್ಯಕ್ರಮವೇ ಆಗಿರಲಿ ಅದಕ್ಕೆ ಎಸ್‌.ಎಸ್‌. ಅವರ ಸಹಾಯ, ಸಹಕಾರ ಸದಾ ಮುಂಚೂಣಿಯಲ್ಲಿ ಇರುತ್ತಿತ್ತು.

‘ಅಖಿಲ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಬೆಳ್ಳಿಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಮೂರು ದಿನ ಸಮ್ಮೇಳನ ಮಾಡುವ ವಿಚಾರ ಮಾಡಿದ್ದೇವೆ’ ಎಂದು 1994ರಲ್ಲಿ ಹಿರಿಯ ಕಲಾವಿದರು ಬಂದು ಕೇಳಿದರು. ಅದಕ್ಕೆ ಖುಷಿಯಿಂದಲೇ ಸ್ಪಂದಿಸಿದ ಶಿವಶಂಕರಪ್ಪ, ‘ಅಗತ್ಯವಾಗಿ ಮಾಡಿ. ರಾಜ್ಯದಾದ್ಯಂತ ಎಷ್ಟು ಕಲಾವಿದರಿದ್ದಾರೋ ಎಲ್ಲರನ್ನೂ ಕರೆಯಿಸಿ. ವ್ಯವಸ್ಥೆ ಮಾಡೋಣ’ ಎಂದು ಹುರುಪು ತುಂಬಿದ್ದರು. ಅಷ್ಟೇ ಅಲ್ಲದೇ ಸಕಲ ವ್ಯವಸ್ಥೆಗೆ ಬೇಕಾದ ಆರ್ಥಿಕ ಸಹಾಯಕ್ಕೆ ಬೆನ್ನೆಲುಬೂ ಆಗಿದ್ದರು.

‘ಮೂರು ದಿನಗಳ ಸಮ್ಮೇಳನಕ್ಕೆ ನಾಡಿನ ಎಲ್ಲೆಡೆಯಿಂದ ಸಾವಿರಾರು ಕಲಾವಿದರು ಬಂದಿದ್ದರು. ಕೊನೆಯ ದಿನ ರಾಜ್ಯದ ನೂರಾರು ನಾಟಕ ಕಂಪನಿಗಳ ಮಾಲೀಕರು ಒಂದು ದಿನ ನಾಟಕ ಪ್ರದರ್ಶನ ಸ್ಥಗಿತ ಮಾಡಿ ಸಮ್ಮೇಳನಕ್ಕೆ ಬಂದಿದ್ದರಿಂದ ದಾವಣಗೆರೆಯು ವೃತ್ತಿ ರಂಗಭೂಮಿಯ ತವರೂರಾಗಿ ಕಂಗೊಳಿಸಿತ್ತು. ಶಿವಶಂಕರಪ್ಪನವರು, ‘ಎಲ್ಲ ಕಲಾವಿದರು ಬಂದಿದ್ದು ನಮ್ಮೂರಿನ ಹೆಮ್ಮೆ’ ಎಂದು ಹೇಳುವ ಮೂಲಕ ಬಹಳ ಖುಷಿ ಪಟ್ಟಿದ್ದರು. ಅವರು ಕಲೆ, ಕಲಾವಿದರ ಮಹಾಪೋಷಕರು ಅಂದರೆ ಅತಿಶಯೋಕ್ತಿ ಅಲ್ಲ ಎಂಬುದಾಗಿ ನೆನಪಿಸಿಕೊಂಡರು’ ಅಖಿಲ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ ಅವರು.

‘ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಕಲಾವಿದರಿಗೆ ಆಶ್ರಯ ಮನೆಗಳನ್ನು ಕೊಡಿಸಿ, ಕಲಾವಿದರ ಸೂರು ಕೊಡಿಸಿದ ಪುಣ್ಯಾತ್ಮ ಎನ್ನಿಸಿಕೊಂಡರು. ಯಾವುದೇ ಭಾಗದ ಕಲಾವಿದರು ದಾವಣಗೆರೆಗೆ ಬಂದರೆ, ಅವರನ್ನು ಗೌರವಿಸುವುದಷ್ಟೇ ಅಲ್ಲ, ಜೇಬಿನಿಂದ ಕೈಗೆ ಸಿಕ್ಕಷ್ಟು ಹಣವನ್ನು ಎಣಿಸದೇ ಕೊಟ್ಟ ಕೊಡುಗೈದಾನಿ ಎನಿಸಿಕೊಂಡವರು. ರಂಗಭೂಮಿ ಹೆಸರಾಂತ ಕಲಾವಿದೆ ಮೈಸೂರು ಹೆಲೆನ್ ಅವರನ್ನು ದಾವಣಗೆರೆಗೆ ಕರೆಯಿಸಿ ‘ಜನಕಜಾತೆ ಜಾನಕಿ’ ಎಂಬ ಕಾರ್ಯಕ್ರಮ ಆಯೋಜಿಸಿ, ಗೌರವಿಸಿ, ಸಹಾಯ ಮಾಡಿದ್ದು ಮಾಸದ ನೆನಪು’ ಎಂದು ಅವರು ನೆನಪಿಸಿಕೊಂಡುರು.

ಜೂನಿಯರ್ ರಾಜಕುಮಾರ್ ಖ್ಯಾತಿಯ ಮೈಸೂರಿನ ಕಲಾವಿದ ಸಹಾಯ ಕೇಳಿದಾಗ, ‘ಕಲಾವಿದರು, ಉಳಿಯಬೇಕು, ಬೆಳೆಯಬೇಕು’ ಎಂದು ಹೇಳಿದ್ದಲ್ಲದೇ ₹ 1 ಲಕ್ಷ ನೀಡಿದ್ದರು.


ಸಿನಿಮಾದತ್ತ ಒಂದು ಝಲಕ್: ‘ಬೆಂಗಳೂರಿಗೆ ಬಂದ ಬೋರೇಗೌಡ’ ಎಂಬ ಚಲನಚಿತ್ರವನ್ನು ಶಾಮನೂರು ಶಿವಶಂಕರಪ್ಪನವರು ತಮ್ಮದೇ ಸ್ವಂತ ಪ್ರೊಡಕ್ಷನ್‌ನಲ್ಲಿ ತೆರೆದರೆ, ಮರೇಗೌಡ್ರ ರೇವಣಸಿದ್ದಪ್ಪ ಅವರೊಂದಿಗೆ ಜಂಟಿ ಪ್ರೊಡಕ್ಷನ್‌ದಲ್ಲಿ ‘ಬೆತ್ತಲೆ ಸೇವೆ’ ಸಿನಿಮಾ ಮಾಡಿದ್ದರು. ಆದರೆ, ಆ ಕ್ಷೇತ್ರದಲ್ಲಿ ಅವರು ಮುಂದುವರಿಯಲು ಬಯಸದೇ ಕಲೆ, ಕಲಾವಿದರ ಮಹಾಪೋಷಕರಾಗಿ ಅದರಲ್ಲಿಯೇ ಸಂತಸಪಟ್ಟವರು. ದಾವಣಗೆರೆ ಹಾಗೂ ಸುತ್ತಮುತ್ತ ಎಲ್ಲಿಯೇ ನಾಟಕವಿದ್ದರೆ ಪೂರ್ಣ ನಾಟಕವನ್ನು ನೋಡುತ್ತಿದ್ದರು. ಒಳ್ಳೆಯದಾಗಿ ನಟಿಸಿದ ಕಲಾವಿದರ ಪಾತ್ರಗಳನ್ನು ಮೆಚ್ಚಿಕೊಂಡು ಭೇಷ್ ಎಂದಿದ್ದರು.

ದಾವಣಗೆರೆಯಲ್ಲಿ ನಡೆದ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಕಾರಣಿಕರ್ತರಾಗಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಪ್ರೊ.ಜಿ.ಎಸ್‌.ಸಿದ್ಧಲಿಂಗಯ್ಯ ಸನ್ಮಾನಿಸಿದಾಗಿನ ನೋಟ
ದಾವಣಗೆರೆಯಲ್ಲಿ ನಡೆದ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಜಿ.ಎಸ್. ಶಿವರುದ್ರಪ್ಪ ಅವರನ್ನು ಶಾಮನೂರು ಶಿವಶಂಕರಪ್ಪ ಗೌರವಿಸಿದ್ದು
ದಾವಣಗೆರೆಯಲ್ಲಿ ನಡೆದ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರೊಂದಿಗೆ ಶಿವಶಂಕರಪ್ಪ

ಸಾಣೇಹಳ್ಳಿಯ ನಾಟಕೋತ್ಸವಕ್ಕೆ ಅಪಾರ ಸಹಾಯ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನಡೆಯುವ ಪ್ರತಿವರ್ಷದ ನಾಟಕೋತ್ಸವಕ್ಕೆ ಶಾಮನೂರು ಶಿವಶಂಕರಪ್ಪನವರು ಅಗತ್ಯಕ್ಕಿಂತ ಹೆಚ್ಚು ಸಹಾಯ ಸಹಕಾರ ನೀಡುತ್ತಲೇ ಬಂದಿದ್ದಾರೆ. ಸಾಣೇಹಳ್ಳಿಯ ತಿರುಗಾಟ ತಂಡಕ್ಕೆ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್ ಬಂದಾಗ ಸ್ವಾಮೀಜಿಯವರಿಗೆ ರಂಗಸೇವೆಗಾಗಿ ₹ 1 ಲಕ್ಷ ಕೊಡುವುದಾಗಿ ವಾಗ್ದಾನ ಮಾಡಿದರು. ಹಾಗೆಯೇ ವಾರದೊಳಗೆ ₹ 1 ಲಕ್ಷ ಕಳುಹಿಸಿದ್ದರು. ಸಾಣೇಹಳ್ಳಿಯಲ್ಲಿ ಶಿವಕುಮಾರ ಬಯಲು ರಂಗಮಂದಿರ ಹಾಗೂ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರವನ್ನು ನಿರ್ಮಾಣವಾಗಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. ನಾಟಕೋತ್ಸವದ ಹಿಂದಿನ ಶಕ್ತಿಯೂ ಆಗಿದ್ದರು. ಬರೀ ಆರ್ಥಿಕ ಸಹಾಯವಲ್ಲದೇ ಕಲಾ ರಸಿಕರು ಕಲಾ ಪ್ರೇಮಿಗಳು ಆಗಿರುವ ಶಿವಶಂಕರಪ್ಪ ಆರೋಗ್ಯ ಸಮಸ್ಯೆಗಳ ಸಂದರ್ಭದ ಹೊರತಾಗಿ ಉಳಿದೆಲ್ಲ ವರ್ಷವೂ ನಾಟಕೋತ್ಸವ ಸಂದರ್ಭದಲ್ಲಿ ನಿತ್ಯ ಇಲ್ಲಿ ಬಂದು ನಾಟಕಗಳನ್ನು ನೋಡಿ ಆಸ್ವಾದಿಸುತ್ತಿದ್ದರು. ನಾಟಕಗಳಿಗೆ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಕಲೆ ಬೆಳೆಯಬೇಕು ಕಲಾವಿದರು ನೆಮ್ಮದಿಯ ಬದುಕು ಕಾಣಬೇಕು ಎಂಬುದು ಅವರ ಮಹದಾಸೆಯಾಗಿತ್ತು. ‘ಕಲಾವಿದರ ಪ್ರದರ್ಶನವೆಂದರೆ ಅವರ ಕಲೆಯೇ ಮಾತಾಡುವಂತಿರಬೇಕು. ರಂಗ ಕಲಾವಿದೆಯರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಅವರಿಗೆ ಗೌರವ ನೀಡಬೇಕು ಎಂಬ ನಿರ್ಮಲ ಮನಸ್ಸು ಅವರದ್ದಾಗಿತ್ತು’ ಎಂದು ಮಠದ ಭಕ್ತರೊಬ್ಬರು ನೆನಪಿಸಿಕೊಂಡರು.

ಜನಸೇವೆಗಾಗಿ ಕಲ್ಯಾಣ ಮಂಟಪ

ಸಾಣೇಹಳ್ಳಿ ಸ್ವಾಮಿಗಳು ಭಕ್ತರ ಆಶಯದಂತೆ ದಾವಣಗೆರೆಯಲ್ಲಿ ಒಂದು ಕಲ್ಯಾಣ ಮಂಟದ ಕಟ್ಟಿಸಬೇಕು. ಯಾವ ಭಕ್ತರು ದೊಡ್ಡ ಮೊತ್ತದ ಕಾಣಿಕೆ ನೀಡುವರೋ ಅವರ ಹೆಸರನ್ನು ಕಲ್ಯಾಣಮಂಟಪಕ್ಕೆ ಇಡೋಣವೆಂದು ನಿರ್ಧರಿಸಿದ್ದರಂತೆ. ಆಗ ಮೊದಲು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ಕಲ್ಯಾಣ ಮಂಟಪದ ಕಟ್ಟುವ ವಿಚಾರ ತಿಳಿಸಿದರು. ₹ 20 ಲಕ್ಷ ದೇಣಿಗೆ ನೀಡಿ ಶುರು ಮಾಡಿ ಎಂದರಂತೆ. ಆಗ ಕೆಲಸ ಆರಂಭಿಸಿ ಭಕ್ತರಿಂದ ದೇಣಿಗೆ ಸ್ವೀಕರಿಸುತ್ತ ಕಟ್ಟಡದ ಕಾಮಗಾರಿ ಮುಂದುವರಿಸಿದ್ದರು. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಕೆಲಸ ನಿಂತಾಗ ಶಿವಶಂಕರಪ್ಪ ಅವರೇ ಅಗತ್ಯವಿದ್ದ ಹಣವನ್ನು ನೀಡಿ ಕಲ್ಯಾಣ ಮಂಟಪ ತಲೆ ಎತ್ತುವಂತೆ ಮಾಡಿದರಂತೆ. ಆಗ ಸ್ವಾಮಿಗಳು ಹಾಗೂ ಭಕ್ತರು ಮೊದಲೇ ನಿರ್ಧರಿಸಿದಂತೆ ಹೆಚ್ಚು ದೇಣಿಗೆ ನೀಡಿದ ಶಾಮನೂರು ಶಿವಶಂಕರಪ್ಪನವರ ಹೆಸರನ್ನೇ ಕಲ್ಯಾಣ ಮಂಟಪಕ್ಕೆ ಇಟ್ಟರು ಎಂಬುದು ಈಗ ಇತಿಹಾಸ. ಕಲೆ ನಾಟಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಭಾಗದಲ್ಲಿ ಎಲ್ಲಿಯೇ ಆದರೂ ಅವುಗಳ ಹಿಂದಿನ ಶಕ್ತಿ ಆರ್ಥಿಕ ಸಹಾಯಕರಾಗಿ ಶಿವಶಂಕರಪ್ಪ ಇದ್ದಾರೆ ಎಂಬುದನ್ನು ಬೇರೆಯಾಗಿ ಹೇಳಬೇಕಿಲ್ಲ.

ಜೇವರ್ಗಿ ಕಂಪನಿ ಸೀನರಿ ಮರುಸೃಷ್ಟಿ

2007ರಲ್ಲಿ ದಾವಣಗೆರೆಗೆ ಬಂದು ಕ್ಯಾಂಪ್ ಹಾಕಿದ್ದ ವಿಶ್ವಜ್ಯೋತಿ ಪಂಚಾಚಾರ್ಯ ನಾಟ್ಯಸಂಘ ಜೇವರ್ಗಿ ಒಳ್ಳೆಯ ನಾಟಕ ಪ್ರದರ್ಶಿಸುತ್ತಿತ್ತು. ಆಗ ಬಿರು ಬೇಸಿಗೆ. ಮಧ್ಯಾಹ್ನ ಕಲಾವಿದರು ವಿಶ್ರಾಂತಿ ತೆಗೆದುಕೊಳ್ಳುವ ಸಮಯ. ಆಗ ಏಕಾಏಕಿ ಬೆಂಕಿ ಹೊತ್ತಿಕೊಂಡು ಕಂಪನಿಯ ಪರಿಕರಗಳೆಲ್ಲಾ ಸುಟ್ಟು ಕಂಪನಿ ಬರಿದಾಯಿತು. ಆ ಹೊತ್ತಲ್ಲಿ ಕಂಪನಿಯ ಮಾಲೀಕ ಜೇವರ್ಗಿ ರಾಜಣ್ಣ ಅವರಿಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಗಿತ್ತು. ಕಂಪನಿ ಕತೆ ಮುಂದೇನು? ಎಂಬ  ಚಿಂತೆಗೆ ಒಳಗಾಗಿದ್ದರು. ಭದ್ರಪ್ಪ ಅವರು ರಾಜಣ್ಣನನ್ನು ಶಿವಶಂಕರಪ್ಪನವರ ಬಳಿ ಕರೆದೊಯ್ದಾಗ ‘ಏನೂ ತಿಳಿಯದಂತಾಗಿದೆ. ಸೀನರಿ ಬರೆಯಿಸಿಕೊಟ್ಟರೆ ಮತ್ತೆ ನಾಟಕ ಶುರು ಮಾಡಬಹುದು. ಕಂಪನಿ ಉಳಿಸಬಹುದು’ ಎಂದು ರಾಜಣ್ಣ ಹೇಳಿದರು. ‘ಎಷ್ಟಾಗುತ್ತದೆ?‘ ಎಂದು ಕೇಳಿದ ಶಿವಶಂಕರಪ್ಪ ತಕ್ಷಣ ₹ 1.50 ಲಕ್ಷ ರಾಜಣ್ಣನ ಕೈಗೆ ಇಟ್ಟು ‘ನಾಟಕ ಶುರು ಮಾಡು’ ಎಂದು ಆಶೀರ್ವದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.