ದಾವಣಗೆರೆ: ‘ರಾಜ್ಯದಲ್ಲಿ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯವನ್ನು ಎದುರು ಹಾಕಿಕೊಂಡು ಅಧಿಕಾರ ನಡೆಸಲು ಸಾಧ್ಯವಿಲ್ಲ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.
‘ರಾಜ್ಯದಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಅಧಿಕವಾಗಿದೆ. ಎರಡನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯವಿದೆ. ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವುದಾಗಿ ಸರ್ಕಾರ ಸುಮ್ಮನೆ ಹೇಳುತ್ತಿದೆ. ಒಂದೊಮ್ಮೆ ಬಿಡುಗಡೆ ಮಾಡಿದರೆ ಒಕ್ಕಲಿಗರು ಮತ್ತು ಲಿಂಗಾಯತರು ಒಗ್ಗೂಡಿ ಹೋರಾಟ ಮಾಡುತ್ತೇವೆ’ ಎಂದು ಮಂಗಳವಾರ ರಾತ್ರಿ ಸುದ್ದಿಗಾರರೆದುರು ತಿಳಿಸಿದರು.
ಹೊಸ ಗಣತಿ ಸೂಕ್ತ: ಸಾಣೇಹಳ್ಳಿ ಶ್ರೀ
ದಾವಣಗೆರೆ: ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ 10 ವರ್ಷಗಳ ಹಿಂದೆ ನಡೆದಿದೆ. ಈ ಸಮೀಕ್ಷೆಯ ವರದಿಯಲ್ಲಿ ತೊಂದರೆ ಇರುವಂತೆ ಕಾಣುತ್ತಿದೆ. ಈ ವರದಿ ಬಿಡುಗಡೆ ಮಾಡದೇ ಹೊಸ ಗಣತಿ ಮಾಡುವುದು ಸೂಕ್ತ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ‘ಗಣತಿಯ ವರದಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಪ್ರಮಾಣದಲ್ಲಿ ತೋರಿಸಲಾಗಿದೆ. ಮತ್ತೊಂದು ಸಮುದಾಯದ ಜನಸಂಖ್ಯೆ ಹೆಚ್ಚು ಇರುವಂತೆ ತೋರುತ್ತಿದೆ. ಇದರಿಂದ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಇದನ್ನು ಸರ್ಕಾರ ಸ್ವೀಕಾರ ಮಾಡದೇ ಇರುವುದು ಒಳಿತು ಎಂಬ ಸಲಹೆ ನೀಡಲು ಬಯಸುತ್ತೇವೆ’ ಎಂದು ಸುದ್ದಿಗಾರರೆದುರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.