ADVERTISEMENT

ದಾವಣಗೆರೆಗೆ ತಲುಪಿದ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ: ಅಭಿಮಾನಿಗಳ ಜಮಾವಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:02 IST
Last Updated 15 ಡಿಸೆಂಬರ್ 2025, 2:02 IST
<div class="paragraphs"><p>ದಾವಣಗೆರೆಗೆ ತಲುಪಿದ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ: ಅಭಿಮಾನಿಗಳ ಜಮಾವಣೆ</p></div>

ದಾವಣಗೆರೆಗೆ ತಲುಪಿದ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ: ಅಭಿಮಾನಿಗಳ ಜಮಾವಣೆ

   

ದಾವಣಗೆರೆ: ಬೆಂಗಳೂರಿನಲ್ಲಿ ನಿಧನರಾದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಸೋಮವಾರ ನಸುಕಿನಲ್ಲಿ ದಾವಣಗೆರೆಗೆ ತರಲಾಯಿತು.

ಬೆಂಗಳೂರಿನ ಸದಾಶಿವನಗರದಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಚೇರಿಯ ಆವರಣದಿಂದ ಭಾನುವಾರ ಮಧ್ಯರಾತ್ರಿ ಹೊರಟ ಪಾರ್ಥಿವ ಶರೀರ, ರಸ್ತೆ ಮಾರ್ಗವಾಗಿ ಸೋಮವಾರ ನಸುಕಿನ 5ಕ್ಕೆ ದಾವಣಗೆರೆ ತಲುಪಿತು.

ADVERTISEMENT

ನಗರದ ಎಂಸಿಸಿ ಬಡಾವಣೆಯಲ್ಲಿರುವ ಹಿರಿಯ ಪುತ್ರ ಎಸ್.ಎಸ್. ಬಕ್ಕೇಶ್ ಮನೆಗೆ ಪಾರ್ಥಿವ ಶರೀರವನ್ನು ತರಲಾಯಿತು. ದ್ವಿತೀಯ ಪುತ್ರ ಎಸ್.ಎಸ್. ಗಣೇಶ್ ಹಾಗೂ ತೃತೀಯ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್‌ ಅವರ ಮನೆಯಲ್ಲಿ ಅಂತಿಮ ದರ್ಶನ ಹಾಗೂ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ.

ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ತಿಳಿದು ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಎಂಸಿಸಿ ಬಡಾವಣೆಯ ಮನೆಯ ಎದುರು ಜಮಾಯಿಸಿದ್ದಾರೆ.‌ ಹೆಚ್ಚು ಜನ ಬರುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಶಾಮನೂರು ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

‘ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಪುತ್ರರ ಮನೆಯಲ್ಲಿ ಮಧ್ಯಾಹ್ನ 12ರವರೆಗೆ ಇಡಲಾಗುತ್ತದೆ. ಬಳಿಕ ಮೆರವಣಿಗೆಯಲ್ಲಿ ಹೈಸ್ಕೂಲ್ ಮೈದಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮಧ್ಯಾಹ್ನ 3ಕ್ಕೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಲಿದೆ. ಪಿ.ಬಿ.ರಸ್ತೆ ಮೂಲಕ ಬಂಬೂಬಜಾರಿನ ಕಲ್ಲೇಶ್ವರ ಮಿಲ್ ಆವರಣದಲ್ಲಿ ಸಂಜೆ 5ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಾಮನೂರು ಶಿವಶಂಕರಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 3ಗಂಟೆಗೆ ದಾವಣಗೆರೆಗೆ ಆಗಮಿಸಲಿದ್ದಾರೆ. ಗಣ್ಯರಿಗೆ ಬಾಪೂಜಿ ಎಂಬಿಎ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ 5 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.