ADVERTISEMENT

ಶಿವಾಜಿ ಧೈರ್ಯ, ಸಾಹಸಗಳಿಗೆ ಸ್ಫೂರ್ತಿ: ಬಸವಪ್ರಭು ಸ್ವಾಮೀಜಿ

ಛತ್ರಪತಿ ಶಿವಾಜಿ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 3:40 IST
Last Updated 20 ಫೆಬ್ರುವರಿ 2021, 3:40 IST
ದಾವಣಗೆರೆ ಕೃಷ್ಣಭವಾನಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯುತ್ಸವವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು
ದಾವಣಗೆರೆ ಕೃಷ್ಣಭವಾನಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯುತ್ಸವವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು   

ದಾವಣಗೆರೆ: ಧೈರ್ಯ, ಸಾಹಸಗಳಿಗೆ ಮತ್ತೊಂದು ಹೆಸರೇ ಛತ್ರಪತಿ ಶಿವಾಜಿ. ಹಾಗಾಗಿ ಶಿವಾಜಿ ಸ್ಮರಣೆಯಿಂದ ನಮ್ಮ ಬದುಕಿನ ಸವಾಲುಗಳನ್ನು ಎದುರಿಸುವ ಧೈರ್ಯ ದೊರೆಯಲಿದೆ. ಆತ್ಮಹತ್ಯೆಯತ್ತ ಮುಖಮಾಡುವ ರೈತರು, ವಿದ್ಯಾರ್ಥಿಗಳು, ಇತರರು ಶಿವಾಜಿಯನ್ನೊಮ್ಮೆ ಸ್ಮರಿಸಿದರೆ ಅವರು ಅದರಿಂದ ಹೊರಬರಲಿದ್ದಾರೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಕೃಷ್ಣಭವಾನಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

16ನೇ ವಯಸ್ಸಿನಲ್ಲಿ ತೋರಣಗಲ್ ಪ್ರದೇಶ ಗೆಲ್ಲುವ ಶಿವಾಜಿಗೆ ತಾಯಿ ಜೀಜಾಬಾಯಿಯೇ ಪ್ರೇರಣಾ ಶಕ್ತಿ. ಬಾಲ್ಯದಲ್ಲಿ ಬಿತ್ತಿದ್ದ ಸ್ವರಾಜ್ಯ ಕಟ್ಟುವ ಕನಸನ್ನು ನನಸು ಮಾಡಿದ ಶಿವಾಜಿ ಎಲ್ಲರಿಗೂ ಸ್ಫೂರ್ತಿ ಹಾಗೂ ಆತ್ಮವಿಶ್ವಾಸದ ಪ್ರತೀಕ ಎಂದು ಸ್ಮರಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಎಮ್ಮೇಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಶಿವಾಜಿ ಡಿಸ್ಲೆ, ‘ಎಲ್ಲ ಗರ್ಭಿಣಿಯರು ಹುಳಿಮಾವು, ಸಿಹಿಭಕ್ಷೃ ತಿನ್ನುವ ಬೇಡಿಕೆ ಹೊಂದಿದ್ದರೆ ಜೀಜಾಬಾಯಿ ಗರ್ಭವತಿಯಾದಾಗ ದೇಶದ್ರೋಹಿಗಳ ವಿರುದ್ಧ ಚಾಮುಂಡಿಯಾಗಬೇಕು. ಮಗ ಪರಾಕ್ರಮಿಯಾಗಬೇಕೆಂಬ ಆಶಯ ಹೊಂದಿದ್ದರು’ ಎಂದರು.

ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್, ‘ಕರ್ನಾಟಕ ಸರ್ಕಾರ, ಕ್ಷತ್ರಿಯ ಮರಾಠ ಅಭಿವೃದ್ಧಿ ನಿಗಮ ರಚಿಸಿದಾಗ ಕೆಲವರ ವಿರೋಧ ಎದುರಾಯಿತು. ಕನ್ನಡಪರ ಹೋರಾಟಗಾರರು ನಿಗಮದ ವಿರುದ್ಧ ಹೇಳಿಕೆ ನೀಡುವ ಉದ್ಧಟತನ ಮುಂದುವರಿಸಿದರೆ ರಾಜ್ಯದ ಎಲ್ಲ ಮರಾಠಿಗರ ಪ್ರತಿಭಟನೆ ಎದುರಿಸಬೇಕಾಗುತ್ತದೆ.’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘ, ಜೀಜಾಮಾತಾ ಮಹಿಳಾ ಮಂಡಳಿ ಹಾಗೂ ಶಿವ ಛತ್ರಪತಿ ಶಿವಾಜಿ ಮಹಾರಾಜರ ಯುವಕ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಂಘದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್, ಅಜ್ಜಪ್ಪ ಪವಾರ್, ಜಿ.ಯಲ್ಲಪ್ಪ ಢಮಾಳೆ, ಜಯಣ್ಣ ಜಾಧವ್, ಹನುಮಂತರವ್ ಸಾಳಂಕಿ, ವೈ,ಮಲ್ಲೇಶ್, ಗೌರಬಾಯಿ ಮೋಹಿತೆ, ಅನುಸೂಯ ಬಾಯಿ, ಪದ್ಮಾ ಜಾಧವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.