
ದಾವಣಗೆರೆ: ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ‘ಶ್ರಮಿಕ ವಸತಿ ಶಾಲೆ’ ನಿರ್ಮಾಣಕ್ಕೆ ಮುಂದಾಗಿದ್ದು, ಜಿಲ್ಲೆಗೆ ಎರಡು ಶಾಲೆಗಳು ಮಂಜೂರಾಗಿವೆ. ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರ್ಚಘಟ್ಟ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಗ್ಗನೂರು ಬಳಿ ಇದಕ್ಕಾಗಿ ಸ್ಥಳ ಗುರುತಿಸಲಾಗಿದೆ.
ರಾಜ್ಯದ ಪ್ರತಿ ಜಿಲ್ಲೆಗೆ ಮೊದಲ ಹಂತದಲ್ಲಿ 31 ಶಾಲೆಗಳನ್ನು ಮಂಜೂರು ಮಾಡಿದಾಗ ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಬಳಿ ಸ್ಥಳ ಗುರುತಿಸಲಾಗಿತ್ತು. 2ನೇ ಹಂತದಲ್ಲಿ 11 ಶಾಲೆಗಳನ್ನು ಹಂಚಿಕೆ ಮಾಡಿದಾಗ ದಾವಣಗೆರೆ ತಾಲ್ಲೂಕಿಗೇ ಮತ್ತೊಂದು ಶಾಲೆ ಲಭ್ಯವಾಗಿದ್ದು, ಕೊಗ್ಗನೂರು ಬಳಿ ಶಾಲೆ ನಿರ್ಮಿಸಲು ನಿರ್ಧರಿಸಲಾಗಿದೆ. ಎರಡು ಕಡೆ ತಲಾ 6 ಎಕರೆ ಭೂಮಿಯನ್ನು ಕಂದಾಯ ಇಲಾಖೆ ಒದಗಿಸಿಕೊಟ್ಟಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಾದರಿಯಲ್ಲಿ ‘ಶ್ರಮಿಕ ವಸತಿ ಶಾಲೆ’ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇದಕ್ಕೆ ₹ 1,530 ಕೋಟಿ ಅನುದಾನವನ್ನು ಮಂಡಳಿ ಮೀಸಲಿಟ್ಟಿದೆ. 6ನೇ ತರಗತಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ದೊರೆಯಲಿದೆ. ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
‘ಆರ್ಥಿಕವಾಗಿ ದುರ್ಬಲರಾಗಿರುವ ಕಟ್ಟಡ ಕಾರ್ಮಿಕರು ಸಾಮಾನ್ಯವಾಗಿ ವಲಸೆ ಪ್ರವೃತ್ತಿ ಹೊಂದಿರುತ್ತಾರೆ. ರಾಜ್ಯದ ಇತರೆ ನಗರ ಹಾಗೂ ಹೊರ ರಾಜ್ಯಗಳಿಗೂ ವಲಸೆ ಹೋಗುತ್ತಾರೆ. ಬದುಕು ಸಾಗಿಸುವ ಅನಿವಾರ್ಯತೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಕಡಿಮೆ. ಇಂತಹ ಕಾರ್ಮಿಕು ವಲಸೆ ಹೋದರೂ ಅವರ ಮಕ್ಕಳು ವಸತಿ ಶಾಲೆಯಲ್ಲಿ ಓದಲು ಅನುಕೂಲವಾಗಲಿದೆ. ಕಾರ್ಮಿಕರ ಮಕ್ಕಳು ಶಿಕ್ಷಣ ವಂಚಿತರಾಗುವುದು ತಪ್ಪಲಿದೆ’ ಎಂದು ಕಾರ್ಮಿಕ ಇಲಾಖೆಯ ಮೂಲಗಳು ವಿವರಿಸಿವೆ.
ಪ್ರತಿ ತರಗತಿಗೆ 50 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗುತ್ತದೆ. ಪ್ರತಿ ವಸತಿ ಶಾಲೆಯಲ್ಲಿ ಅಂದಾಜು 300ರಿಂದ 350 ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಾಲಾ ಕಟ್ಟಡ, ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತದೆ. ತರಗತಿ ಕೊಠಡಿ, ಪ್ರಯೋಗಾಲಯ, ಕ್ರೀಡಾಂಗಣ, ಗ್ರಂಥಾಲಯ, ಕಚೇರಿ, ಶಿಕ್ಷಕರಿಗೆ ಪ್ರತ್ಯೇಕ ವಸತಿ ಸಮುಚ್ಛಯ ಇರಲಿದೆ.
‘ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಹಳ್ಳಿ ಬಳಿ 3 ಎಕರೆ ಭೂಮಿ ಲಭ್ಯವಾಗಿತ್ತು. ವಸತಿ ಶಾಲೆಗೆ ಕನಿಷ್ಠ 6 ಎಕರೆ ಅಗತ್ಯ ಇರುವುದರಿಂದ ಕೊಗ್ಗನೂರು ಬಳಿ ಸ್ಥಳ ಗುರುತಿಸಲಾಯಿತು. ಕಂದಾಯ ಇಲಾಖೆ ಈ ಭೂಮಿಯನ್ನು ಕಾರ್ಮಿಕ ಇಲಾಖೆಯ ಹೆಸರಿಗೆ ಖಾತೆ ಮಾಡಿಕೊಟ್ಟಿದೆ. ಮುಂದಿನ ತೀರ್ಮಾನಗಳನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕೈಗೊಳ್ಳಲಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಆರ್. ಅರವಿಂದ್ ತಿಳಿಸಿದರು.
ವಸತಿ ಶಾಲೆಯ ಪಠ್ಯ, ಮಾಧ್ಯಮ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ, ನಿರ್ವಹಣೆ ಸೇರಿದಂತೆ ಇನ್ನೂ ಕೆಲ ವಿಚಾರಗಳು ನಿರ್ಧಾರದ ಹಂತದಲ್ಲಿವೆ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಶ್ರಮಿಕ ವಸತಿ ಶಾಲೆಗಳಿಗೆ ಸ್ಥಳ ಗುರುತಿಸಲಾಗಿದೆ. ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ. ಶಾಲೆಯ ರೂಪುರೇಷ ಇನ್ನಷ್ಟೇ ಸಿದ್ಧವಾಗಬೇಕಿದೆ–ಎಸ್.ಆರ್. ಅರವಿಂದ್, ಜಿಲ್ಲಾ ಕಾರ್ಮಿಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.