ADVERTISEMENT

ಶಾಮನೂರು ಶಿವಶಂಕರಪ್ಪ ಜಾತ್ಯತೀತ ನಾಯಕ: ನುಡಿನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 3:00 IST
Last Updated 27 ಡಿಸೆಂಬರ್ 2025, 3:00 IST
<div class="paragraphs"><p>ನುಡಿ ನಮನ ಕಾರ್ಯಕ್ರಮ</p></div>

ನುಡಿ ನಮನ ಕಾರ್ಯಕ್ರಮ

   

–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆ. ಆದರೂ ಸತತವಾಗಿ ಆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದ ಅವರು ನಿಜಕ್ಕೂ ಜಾತ್ಯತೀತ, ಜನಪ್ರಿಯ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ADVERTISEMENT

ಇಲ್ಲಿನ ಆನೆಕೊಂಡದ ಕಲ್ಲೇಶ್ವರ ಮಿಲ್‌ ಸಮೀಪ ಶಾಮನೂರು ಶಿವಶಂಕರಪ್ಪ ಅವರಿಗೆ ಕುಟುಂಬದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ನುಡಿನಮನ’ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಶಿವಶಂಕರಪ್ಪ ಅವರನ್ನು ನಾನು ಯಾವಾಗಲೂ ಯಜಮಾನರು ಎಂದೇ ಕರೆಯುತ್ತಿದ್ದೆ. 95ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿಯೂ ಪಾಲ್ಗೊಂಡಿದ್ದೆ. 100 ವರ್ಷ ಪೂರೈಸುತ್ತಾರೆ ಎಂಬ ನಂಬಿಕೆ ಇತ್ತು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಹುಮ್ಮಸ್ಸು ಅವರಲ್ಲಿ ಕಂಡಿತ್ತು. ಬದುಕಿದ್ದರೆ ಬಹುಶಃ ಅವರಿಗೇ ಕಾಂಗ್ರೆಸ್‌ ಟಿಕೆಟ್‌ ನೀಡಬೇಕಾಗುತ್ತಿತ್ತು’ ಎಂದರು.

‘ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟಿದ್ದಕ್ಕೆ ಶಿವಶಂಕರಪ್ಪ ಕೃತಜ್ಞರಾಗಿದ್ದರು. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯಗೊಳಿಸಿದ ಕಾರಣಕ್ಕೆ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ನನಗೆ ಸನ್ಮಾನ ಮಾಡಿದ್ದರು. ಮೂಲತಃ ಅವರೊಬ್ಬರ ಮನುಷ್ಯ ಪ್ರೇಮಿಯಾಗಿದ್ದರು’ ಎಂದು ಸ್ಮರಿಸಿದರು.

‘ವೀರಶೈವ–ಲಿಂಗಾಯತ ಉಪಪಂಗಡಗಳ ನಡುವೆ ವೈವಾಹಿಕ ಸಂಬಂಧ ಬೆಳೆಸಿದರು. ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಸಮುದಾಯಕ್ಕೆ ಶಕ್ತಿ ತುಂಬಿದರು. ವೀರಶೈವ–ಲಿಂಗಾಯತ ಒಂದೇ ಎಂಬ ತೀರ್ಮಾನ ಕೈಗೊಂಡಿದ್ದರಿಂದ ಸಮಾಜ ವಿಘಟನೆ ಆಗಲಿಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

‘ಶಿವಶಂಕರಪ್ಪ ನಡೆದುಬಂದ ದಾರಿ ಸ್ಫೂರ್ತಿದಾಯಕ. ಅವರ ಸಾಮಾಜಿಕ ಕಳಕಳಿ ಅನುಕರಣೀಯ. ವೀರಶೈವ ಲಿಂಗಾಯತ ಮಹಾಸಭಾ ಮುನ್ನಡೆಸಿದ ರೀತಿ ಮೆಚ್ಚುವಂತಹದು. ಸಮುದಾಯದ ನಡುವೆ ಬಿರುಕು ಮೂಡಿಸುವ ಪ್ರಯತ್ನವನ್ನು ಅವರು ವಿಫಲಗೊಳಿಸಿದರು’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೆನಪಿಸಿಕೊಂಡರು.

‘ಶಿವಶಂಕರಪ್ಪ ಅವರೊಂದಿಗೆ ನನ್ನ ಬಾಂಧವ್ಯ ಹಲವು ದಿನಗಳಿಂದ ಇತ್ತು. ಶ್ರೀಮಂತಿಕೆ ಜೊತೆಗೆ ಹೃದಯ ಶ್ರೀಮಂತಿಕೆ ಇಟ್ಟುಕೊಂಡಿದ್ದ ಶಾಮನೂರು ಅವರ ಆದರ್ಶ ಅನುಕರಣೀಯ. ಕೋವಿಡ್‌ ಸಂದರ್ಭ ಹತ್ತಾರು ಕೋಟಿ ವೆಚ್ಚ ಮಾಡಿ ಲಸಿಕೆ ನೀಡಿ ಜನರ ಆರೋಗ್ಯ ಕಾಪಾಡಿದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಸಮಯ ಮತ್ತು ಸ್ಥಿತಪ್ರಜ್ಞೆಯ ಕಾರಣಕ್ಕೆ ಉದ್ಯಮ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಕಂಡರು. ಲೆಕ್ಕದಲ್ಲಿ ಬಹಳ ಪಕ್ಕ ಇದ್ದರು. ವಯಸ್ಸಿಗೆ ಮೀರಿ ಸ್ನೇಹ ಬೆಳೆಸಿದ್ದರು. ಹಾಸ್ಯಪ್ರಜ್ಞೆ ಅವರಲ್ಲಿ ಅಗಾಧವಾಗಿತ್ತು. ಉತ್ಸಾಹ, ಉಲ್ಲಾಸವನ್ನು ಜೀವಂತವಾಗಿಟ್ಟುಕೊಂಡಿದ್ದರು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

‘ಅತ್ತೆ–ಮಾವನವರದು ಅನುರೂಪ ದಾಂಪತ್ಯ. ಕೂಡು ಕುಟುಂಬ, ಜನಾನುರಾಗಿಯಾಗಿ ಇರುವುದು ಹೇಗೆ ಎಂಬುದನ್ನು ಇಬ್ಬರೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಕಾಯಕಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಬಡವರ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ಜನಪ್ರತಿನಿಧಿಗಳಿಗೆ ಮಾದರಿ ರಾಜಕಾರಣಿ ಆಗಿದ್ದರು. ಅವರ ಸರಳತೆ ಮತ್ತು ಸ್ವಾಭಿಮಾನ ಅನುಕರಣೀಯ’ ಎಂದು ಸೊಸೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ವಿವರಿಸಿದರು.

ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ, ಮದರಸಾ ಕಾರ್ಯಾಧ್ಯಕ್ಷ ಮೌಲಾನ ಅಬುಸುಫಾನ್‌, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಅನ್ನದಾನಿ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ಸಚಿವರಾದ ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ, ಆರ್‌.ಬಿ. ತಿಮ್ಮಾಪುರ, ಈಶ್ವರ ಖಂಡ್ರೆ, ವಿಧಾನಸಭೆ ಮುಖ್ಯಸಚೇತಕ ಅಶೋಕ್ ಪಟ್ಟಣ, ಎಐಸಿಸಿ ವೀಕ್ಷಕ ಮಯೂರ ಜಯಕುಮಾರ್‌, ಶಾಸಕರಾದ ಕೆ.ಎಸ್‌. ಬಸವಂತಪ್ಪ, ಟಿ. ರಘುಮೂರ್ತಿ, ಬಿ. ದೇವೇಂದ್ರಪ್ಪ, ಡಿ.ಜಿ. ಶಾಂತನಗೌಡ, ಬಸವರಾಜ್ ಶಿವಗಂಗಾ, ಡಿ.ಟಿ. ಶ್ರೀನಿವಾಸ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವರಾದ ಎಚ್‌. ಆಂಜನೇಯ, ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಆರ್‌.ಎಸ್‌. ಪಾಟೀಲ, ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌. ಬಕ್ಕೇಶ್‌, ಎಸ್‌.ಎಸ್‌. ಗಣೇಶ್‌ ಹಾಜರಿದ್ದರು.

ಭಾವುಕರಾದ ಪುತ್ರ ಮಲ್ಲಿಕಾರ್ಜುನ್‌

‘ಶಾಮನೂರು ಶಿವಶಂಕರಪ್ಪ ಅವರು ನನ್ನನ್ನು ಮಗನಿಗಿಂತ ಮಿಗಿಲಾಗಿ ಸ್ನೇಹಿತನಂತೆ ಕಾಣುತ್ತಿದ್ದರು. ಅವರಂತಹ ತಂದೆಯನ್ನು ಪಡೆದ ನಾವೇ ಧನ್ಯರು..’ ಎನ್ನುವಾಗ ಪುತ್ರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಭಾವುಕರಾದರು.

‘1967ರಲ್ಲಿ ರೈಸ್‌ಮಿಲ್‌ ಶುರು ಮಾಡಿದರು. ಕಲ್ಲೇಶ್ವರ ಟ್ರೇಡರ್ಸ್‌ ರೂಪಿಸಿ ಉದ್ಯಮ ಕಟ್ಟಿದರು. ಸ್ವತಃ ಅವರೇ ಕಾಳುಗಳನ್ನು ಪರಿಶೀಲಿಸುತ್ತಿದ್ದರು. ಅವರ ಪ್ರೋತ್ಸಾಹದಿಂದ 6 ಸಕ್ಕರೆ ಕಾರ್ಖಾನೆಗಳನ್ನು ಶುರು ಮಾಡಿದ್ದೇವೆ. ಉದ್ಯಮವನ್ನು ಎತ್ತರಕ್ಕೆ ಬೆಳೆಸಿದ್ದೇವೆ’ ಎಂದರು.

‘ಹತ್ತಿ ಗಿರಣಿಗಳು ಮುಚ್ಚಿದ ಬಳಿಕ ಬಾಪೂಜಿ ವಿದ್ಯಾಸಂಸ್ಥೆಯನ್ನು ಬೆಳೆಸಿ ಶಿಕ್ಷಣ ಕಾಶಿಯಾಗಿ ರೂಪಿಸಿದರು. ತಂದೆಯ ಜೊತೆಗೆ ಹಲವು ಕುಟುಂಬಗಳು ಕೈಜೋಡಿಸಿದವು. 1992ರಲ್ಲಿ ದಾವಣಗೆರೆಯಲ್ಲಿ ಕೋಮುಗಲಭೆಯಾಗಿ 18 ಜನ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ₹ 50000 ಧನಸಹಾಯವನ್ನು ವೈಯಕ್ತಿವಾಗಿ ನೀಡಿದ್ದರು. ಪಕ್ಷದ ಅಪೇಕ್ಷೆಯ ಮೇರೆಗೆ ಚುನಾವಣಾ ರಾಜಕಾರಣಕ್ಕೆ ಬಂದರು’ ಎಂದು ನೆನಪಿಸಿಕೊಂಡರು.

ಸ್ವಾಮೀಜಿಗಳಿಗೆ ಬೆತ್ತ, ರಾಜಕಾರಣಿಗಳಿಗೆ ರುದ್ರಾಕ್ಷಿ!

ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳಿಗೆ ಶಾಮನೂರು ಕುಟುಂಬದಿಂದ ಬೆತ್ತ ಹಾಗೂ ಛತ್ರಿಯನ್ನು (ಕೊಡೆ) ಉಡುಗೊರೆಯಾಗಿ ನೀಡಲಾಯಿತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲಾ ರಾಜಕಾರಣಿಗಳಿಗೆ ರುದ್ರಾಕ್ಷಿ ಮಾಲೆ ನೀಡಿದ್ದು ಗಮನ ಸೆಳೆಯಿತು. 

‘ನಮಗೆಲ್ಲಾ (ಸ್ವಾಮೀಜಿಗಳಿಗೆ) ಬೆತ್ತ ಹಾಗೂ ಛತ್ರಿ ನೀಡಿ, ರಾಜಕೀಯ ಧುರೀಣರಿಗೆ ರುದ್ರಾಕ್ಷಿ ಯಾಕೆ ನೀಡಿದರು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ರಾಜಕೀಯ ಧುರೀಣರಿಗೆ ರುದ್ರಾಕ್ಷಿ ನೀಡಿದ್ದು, ಮಠ ಸೇರಿಕೊಳ್ಳಲಿ ಎಂಬ ಅರ್ಥವೇ? ಗುರುಗಳಿಗೆ ಬೆತ್ತ ಕೊಟ್ಟಿದ್ದು ನೀವು ಧರ್ಮ ದಂಡ ಮಾಡಿ ಎಂಬ ಅರ್ಥವೇ?’ ಎಂದು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.  

‘ಎಲ್ಲರೂ ಶಾಂತಿಯಿಂದ ಇರಲಿ ಎಂಬ ಉದ್ದೇಶಕ್ಕೆ’ ಎಂದು ಶಾಮನೂರು ಕುಟುಂಬದವರು ಪ್ರತಿಕ್ರಿಯಿಸಿದರು. ‘ಶಾಂತಿಯ ಉದ್ದೇಶ ಒಳ್ಳೆಯದೇ. ನಾಡಿಗೆ ಬೇಕಿರುವುದು ಶಾಂತಿಯೇ. ನಾಡಿನ ಒಳಿತಿಗಾಗಿ ರಾಜಕೀಯ ಧುರೀಣರು ಶ್ರಮ ವಹಿಸಲಿ, ಉತ್ತಮ ಆಡಳಿತ ನೀಡಲಿ’ ಎಂದು ಸ್ವಾಮೀಜಿ ಹಾರೈಸಿದರು. 

‘ಹಿಂದಿನ ಸ್ವಾಮೀಜಿಗಳು ಬೆತ್ತ ಹಿಡಿಯುತ್ತಿದ್ದರು, ಈಗಿನ ಸ್ವಾಮೀಜಿಗಳು ಬೆತ್ತ ಹಿಡಿಯುತ್ತಿಲ್ಲ. ಕಾಲು ಜಾರಿದರೆ ಊರಲು, ಸಮಾಜದಲ್ಲಿ ಯಾರಾದರೂ ಮೀರಿದರೆ ಅವರ ಮೇಲೆ ಹೇರಲು ಬೆತ್ತ ಕೊಟ್ಟಿರಬಹುದು’ ಎಂದು ಶಿರಹಟ್ಟಿ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಂಜೆವರೆಗೂ ಅನ್ನ ಸಂತರ್ಪಣೆ 

ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಹಾಗೂ ನುಡಿನಮನ ಸಮಾರಂಭದ ಅಂಗವಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ಅನ್ನ ಸಂತರ್ಪಣೆ ನಡೆಯಿತು.  ಸಮಾರಂಭದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಜನರು ವಿವಿಧ ಖಾದ್ಯಗಳನ್ನು ಸವಿದರು. ಅನ್ನ ಸಂತರ್ಪಣೆಗೆಂದು ವೇದಿಕೆ ಮುಂಭಾಗ ದೊಡ್ಡ ಪೆಂಡಾಲ್‌ಗಳನ್ನು ಹಾಕಲಾಗಿತ್ತು. ಅಡುಗೆ ಬಡಿಸಲು 90 ಕೌಂಟರ್‌ಗಳನ್ನು ತೆರೆಯಲಾಗಿತ್ತು.  ಬೆಳಿಗ್ಗೆ 8 ಗಂಟೆಯಿಂದ ಉಪಾಹಾರ ನೀಡಲಾಯಿತು. ಬೆಳಿಗ್ಗೆ ಇಡ್ಲಿ –ಸಾಂಬಾರು, ಉಪ್ಪಿಟ್ಟು, ಕೇಸರಿಬಾತ್ ಹಾಗೂ ದೋಸೆ ಬಡಿಸಲಾಯಿತು. 

ಮಧ್ಯಾಹ್ನದ ಊಟಕ್ಕೆ ಸಬ್ಬಕ್ಕಿ ಶಾವಿಗೆ ಪಾಯಸ, ಬೋಂಡಾ, ಎರಡು ರೀತಿಯ ಪಲ್ಯ, ಚಪಾತಿ, ರುಮಾಲಿ ರೊಟ್ಟಿ, ಅನ್ನ– ಸಾಂಬಾರು ಹಾಗೂ ಮೊಸರು ಬಡಿಸಲಾಯಿತು. 60 ಸಾವಿರ ಲಾಡು, ಮೈಸೂರು ಪಾಕ್ ತಯಾರಿಸಲಾಗಿತ್ತು.

ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿ
ದಾವಣಗೆರೆಯ ಕಲ್ಲೇಶ್ವರ ಮಿಲ್ ಸಮೀಪ ಶುಕ್ರವಾರ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ನುಡಿ ನಮನ ಕಾರ್ಯಕ್ರಮದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿದರು. ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಕಾಶಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಕಲ್ಲೇಶ್ವರ ಮಿಲ್ ಸಮೀಪ ಶುಕ್ರವಾರ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ನುಡಿ ನಮನ ಕಾರ್ಯಕ್ರಮದಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಕಲ್ಲೇಶ್ವರ ಮಿಲ್ ಸಮೀಪ ಶುಕ್ರವಾರ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ನುಡಿ ನಮನ ಕಾರ್ಯಕ್ರಮದಲ್ಲಿ ಮಠಾಧೀಶರಿಗೆ ನಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.