ADVERTISEMENT

ದಾವಣಗೆರೆ: ಜಲ ಸಂಗ್ರಹ ಸಾಮರ್ಥ್ಯ ಕುಗ್ಗಿಸಿದ ಹೂಳು; ಜಲಮೂಲಗಳಿಗೆ ಬೇಕಿದೆ ಕಾಯಕಲ್ಪ

ಸುಮಾ ಬಿ.
Published 2 ಡಿಸೆಂಬರ್ 2024, 6:40 IST
Last Updated 2 ಡಿಸೆಂಬರ್ 2024, 6:40 IST
ಜಗಳೂರು ಕೆರೆ 5 ದಶಕಗಳ ನಂತರ ಭರ್ತಿಯಾಗಿದ್ದು, ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಕಳೆಸಸ್ಯಗಳು ಮತ್ತು ಹೂಳಿನಿಂದ ಕೆರೆ ತುಂಬಿಹೋಗಿದೆ 
ಪ್ರಜಾವಾಣಿ ಚಿತ್ರ/ ಡಿ. ಶ್ರೀನಿವಾಸ್
ಜಗಳೂರು ಕೆರೆ 5 ದಶಕಗಳ ನಂತರ ಭರ್ತಿಯಾಗಿದ್ದು, ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಕಳೆಸಸ್ಯಗಳು ಮತ್ತು ಹೂಳಿನಿಂದ ಕೆರೆ ತುಂಬಿಹೋಗಿದೆ  ಪ್ರಜಾವಾಣಿ ಚಿತ್ರ/ ಡಿ. ಶ್ರೀನಿವಾಸ್   

ದಾವಣಗೆರೆ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 150 ರಷ್ಟು ಹೆಚ್ಚು ಮಳೆಯಾಗಿದೆ. ಜಲಮೂಲಗಳ ಒಡಲು ಸೇರಬೇಕಿದ್ದ ಆ ನೀರು ಸಮುದ್ರದ ಪಾಲಾಗಿದೆ. ಹೂಳು, ಒತ್ತುವರಿ, ಕಳೆ ಗಿಡಗಳ ಸುಳಿಗೆ ಸಿಲುಕಿ ನಲುಗುತ್ತಿರುವ ಕೆರೆಗಳಲ್ಲಿ ಈ ವರ್ಷವೂ ನಿರೀಕ್ಷಿಸಿದಷ್ಟು ನೀರು ಸಂಗ್ರಹವಾಗಿಲ್ಲ.

ಸಮೃದ್ಧ ಮಳೆ ಬಂದರೂ ಕೆಲವೆಡೆ ಅಂತರ್ಜಲ ಮರುಪೂರಣಕ್ಕೆ ಕೆರೆಯ ಹೂಳು ಅಡ್ಡಿಯಾಗಿದೆ. ಪರಿಣಾಮ ಕೃಷಿ ಚಟುವಟಿಕೆಗೆ ಹಿನ್ನೆಡೆ ಉಂಟಾಗುತ್ತಿದೆ. ಕೆಲವು ಕೆರೆಗಳು ಕಾಲಕಲ್ಪ ಕಂಡಿದ್ದು, ಮೈದುಂಬಿ ನಳನಳಿಸುತ್ತಿವೆ. ಗ್ರಾಮೀಣ ಭಾಗದ ಪ್ರಮುಖ ಜಲಮೂಲಗಳಾದ ಕೆರೆ, ಕಟ್ಟೆಗಳಿಗೆ ಮರುಜೀವ ತುಂಬಲು ವಿವಿಧ ಸಂಘ ಸಂಸ್ಥೆಗಳು, ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ.

ಜಿಲ್ಲೆಯಲ್ಲಿ ಪಂಚಾಯತ್‌ ರಾಜ್ ಎಂಜಿನಿಯರಿಂಗ್‌ ವಿಭಾಗ (ಪಿಆರ್‌ಇಡಿ) ಹಾಗೂ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ ಒಟ್ಟು 254 ಕೆರೆಗಳಿವೆ. ಒಂದು ಎಕರೆಯಿಂದ 40 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಗಳು ಪಿಆರ್‌ಇಡಿ ವ್ಯಾಪ್ತಿಗೂ, 40 ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಬಹುಪಾಲು ಕೆರೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದ್ದು, ಪ್ರಸಕ್ತ ವರ್ಷ ಜಿಲ್ಲಾ ಪಂಚಾಯಿತಿಯಿಂದ 152 ಕೆರೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಕೆರೆಯ ಪೂರಕ ನಾಲೆ ಅಭಿವೃದ್ಧಿ, ಕೋಡಿ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ADVERTISEMENT

ಇಂತಹ ಕಾರ್ಯಗಳ ನಡುವೆಯೂ ಹಲವು ಕೆರೆಗಳು ಅಭಿವೃದ್ಧಿಯ ಲವಲೇಶವೂ ಕಾಣದೆ ಸೊರಗಿವೆ. ನೀರಾವರಿ ಇಲಾಖೆಗೆ ಒಳಪಟ್ಟ ಸೂಳೆಕೆರೆ (ಶಾಂತಿಸಾಗರ) ಹಾಗೂ ಡಿ.ಬಿ. ಕೆರೆ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಕೆರೆಗಳೆನಿಸಿವೆ. ಈ ಕೆರೆಗಳು ಒತ್ತುವರಿ, ಹೂಳು, ಗಿಡ–ಗಂಟಿಗಳ ಹಾವಳಿಗೆ ಸಿಲುಕಿ ನಲುಗುತ್ತಿವೆ. ಬಹುತೇಕ ಕೆರೆಗಳಲ್ಲಿ 3ರಿಂದ 4 ಅಡಿ ಹೂಳು ಶೇಖರವಾಗಿದ್ದು, ಸಮರ್ಪಕ ನೀರು ಸಂಗ್ರಹಣೆ ಸಾಧ್ಯವಾಗುತ್ತಿಲ್ಲ.

ದಾವಣಗೆರೆಯ ಅಣಜಿ ಕೆರೆ, ಮಲೇಬೆನ್ನೂರು ಸಮೀಪದ ಮುದ್ದಪ್ಪನ ಕೆರೆ, ಮಾಯಕೊಂಡದ ಹೊಸಕೆರೆ ಹೀಗೆ ಜಿಲ್ಲೆಯ ಹಲವು ಪ್ರಮುಖ ಕೆರೆಗಳು ಕಾಯಕಲ್ಪದ ನಿರೀಕ್ಷೆಯಲ್ಲಿವೆ. ಇನ್ನು ಬಹುತೇಕ ಸಣ್ಣ ಕೆರೆಗಳು ಸಣ್ಣ ಕುರುಹೂ ಇಲ್ಲದೆ ಅಸ್ತಿತ್ವ ಕಳೆದುಕೊಂಡಿವೆ.

ಕೆರೆಗಳಿಗೆ ನೀರು ಹರಿದುಬರುವ ಬಹುತೇಕ ಕಾಲುವೆಗಳು ಒತ್ತುವರಿಗೆ ತುತ್ತಾಗಿವೆ. ಇದರಿಂದ ಕೆರೆಗಳಿಗೆ ನೀರು ಹರಿದುಬರಲು ಹಿನ್ನಡೆಯಾಗಿದೆ. ಬಹುತೇಕ ಕಡೆ ಕೆರೆಗಳ ನಾಮಫಲಕ ಅಳವಡಿಸಿಲ್ಲ. ಕೆರೆಗಳ ಗಡಿ ಗುರುತಿಸಿಲ್ಲ. ಗ್ರಾಮ, ಪಟ್ಟಣಕ್ಕೆ ಹೊಂದಿಕೊಂಡಂತಿರುವ ಬಹುತೇಕ ಕೆರೆಗಳಿಗೆ ತ್ಯಾಜ್ಯ ನೀರು ಹರಿದು ದುರ್ವಾಸನೆ ಬೀರುತ್ತಿದ್ದು, ರೋಗಗಳನ್ನು ಹರಡುವ ತಾಣಗಳಾಗುತ್ತಿವೆ. ಇಂತಹ ಕೆರೆಗಳನ್ನು ಗುರುತಿಸಿ ಕಾಯಕಲ್ಪ ನೀಡುವ ಸಂಕಲ್ಪ ಬೇಕಿದೆ.

ಒಡಲು ತುಂಬಿಸಿದ ‘ನಮ್ಮೂರ ಕೆರೆ’ ಯೋಜನೆ:

‘ನಮ್ಮೂರು ನಮ್ಮ ಕರೆ’ ಕಾರ್ಯಕ್ರಮದಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಜಿಲ್ಲೆಯಲ್ಲಿ ಈವರೆಗೆ 24 ಕೆರೆಗಳನ್ನು ಅಭಿವೃದ್ಧಿಪಡಿಸಿದೆ. ಸಂಸ್ಥೆ ಅಡಿ ಪ್ರತಿ ವರ್ಷ 5ರಿಂದ 7 ಕೆರೆಗಳು ಜಿಲ್ಲೆಯಲ್ಲಿ ಪುನಶ್ಚೇತನಗೊಳ್ಳುತ್ತಿವೆ. ಗ್ರಾಮ ಪಂಚಾಯಿತಿ, ಇತರ ಸಂಘ– ಸಂಸ್ಥೆಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೆರೆಯ ಹೂಳನ್ನು ತೆಗೆಯಲು ಅಗತ್ಯವಾಗಿರುವ ಹಿಟಾಚಿಯ ಸೌಲಭ್ಯವನ್ನು ಧರ್ಮಸ್ಥಳ ಯೋಜನೆ ಒದಗಿಸುತ್ತದೆ.

‘ಕೆರೆ ಪುನಶ್ಚೇತನ ಮಾಡಿಕೊಳ್ಳಲು ಆಸಕ್ತಿ ಇರುವ ಗ್ರಾಮಗಳಿಗೆ ಆದ್ಯತೆ ನೀಡಲಾಗುವುದು. ತೆಗೆದ ಹೂಳಿನ ವಿಲೇವಾರಿ ಜವಾಬ್ದಾರಿ ಗ್ರಾಮಸ್ಥರದ್ದು. ಕೆರೆ ಅಭಿವೃದ್ಧಿಗೂ ಮುನ್ನ ಕೆರೆ ಸಮಿತಿ ರಚಿಸಿ ಹಲವು ಜವಾಬ್ದಾರಿಗಳನ್ನು ವಹಿಸಿಕೊಡಲಾಗುವುದು. ಆನಂತರವೂ ಕೆರೆ ಉಸ್ತುವಾರಿಯನ್ನೂ ಗ್ರಾಮಸ್ಥರಿಗೇ ವಹಿಸಲಾಗುವುದು’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ದಾವಣಗೆರೆ ಪ್ರಾದೇಶಿಕ ಎಂಜಿನಿಯರ್‌ ಹರೀಶ್‌ ನಾಯ್ಕ ಮಾಹಿತಿ ನೀಡಿದರು.

ಚನ್ನಗಿರಿ ತಾಲ್ಲೂಕು ಆಗರಬನ್ನಿಹಟ್ಟಿ ಗ್ರಾಮದ ಕೆರೆಯ ಹೂಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದಿಂದ ಎತ್ತಿದ್ದು ಈ ಬಾರಿ ಬಿದ್ದ ಮಳೆಗೆ ತುಂಬಿರುವುದರಿಂದ ಗ್ರಾಮದ ಮಹಿಳೆಯರು ಬಾಗಿನ ಅರ್ಪಿಸಿದರು
ಪ್ರಸಕ್ತ ವರ್ಷ ಸಮೃದ್ಧ ಮಳೆಯಾಗಿ ಜಿಲ್ಲೆಯ ಬಹುತೇಕ ಎಲ್ಲ ಕೆರೆಗಳೂ ತುಂಬಿವೆ. ಕೆಲವೆಡೆ ಒತ್ತುವರಿ ಸಮಸ್ಯೆಯಿಂದ ತಕ್ಕಷ್ಟು ನೀರು ಹರಿದಿಲ್ಲ. ಅಂತಹ ಕೆರೆಗಳನ್ನು ಗುರುತಿಸಿ ತೆರವು ಕಾರ್ಯ ಕೈಗೊಳ್ಳಲಾಗುವುದು.
ಸುರೇಶ್‌ ಇಟ್ನಾಳ್ ಜಿಲ್ಲಾ ಪಂಚಾಯಿತಿ ಸಿಇಒ 
ಕಾಲ ಕಾಲಕ್ಕೆ ಬಾಕಿ ಇರುವ ಕೆರೆಗಳ ಹೂಳನ್ನು ಎತ್ತುವ ಮೂಲಕ ರೈತರ ಬದಕು ಹಸನು ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು
ಮಂಜುನಾಥ್ ಆಗರಬನ್ನಿಹಟ್ಟಿ ಚನ್ನಗಿರಿ ತಾಲ್ಲೂಕು
23 ಟಿಎಂಸಿ ಅಡಿ ನೀರು ಸಮುದ್ರದ ಪಾಲು
‘ಜಿಲ್ಲೆಯಲ್ಲಿ 538 ಕೆರೆಗಳಿದ್ದು 243 ಕೆರೆಗಳಿಗೆ ಮಾತ್ರ ಸಮರ್ಪಕ ನೀರು ಹರಿದು ಬಂದಿದೆ. ಉಳಿದ ಕೆರೆಗಳಲ್ಲಿ ನಿರೀಕ್ಷೆಯಷ್ಟು ನೀರು ಸಂಗ್ರಹವಾಗಿಲ್ಲ. ಒಟ್ಟು 40 ಟಿಎಂಸಿ ಅಡಿ ನೀರು ಶೇಖರಣೆಯಾಗಬೇಕಿತ್ತು. ಆದರೆ 17 ಟಿಎಂಡಿ ಅಡಿ ನೀರು ಮಾತ್ರವೇ ಸಂಗ್ರಹವಾಗಿದೆ. ಉಳಿದ 23 ಟಿಎಂಸಿ ಅಡಿ ನೀರು ಸಮುದ್ರದ ಪಾಲಾಗಿದೆ’ ಎನ್ನುವ ಲೆಕ್ಕಾಚಾರ ಮುಂದಿಡುತ್ತಾರೆ ಜಿಲ್ಲಾ ನೆಲ– ಜಲ ಪರಿಸರ ಆಂದೋಲನ ಸಮಿತಿ ಸಂಚಾಲಕ ಬಲ್ಲೂರು ರವಿಕುಮಾರ್‌. ‘ರೈಲ್ವೆ ಕಾಮಗಾರಿಗಳಿಗೆ ಹೆದ್ದಾರಿಗಳ ನಿರ್ಮಾಣಕ್ಕೆ ಮಣ್ಣು ಬೇಕು. ಅವುಗಳಿಗೆ ಮಣ್ಣು ಒದಗಿಸಲು ಮಾತ್ರ ಕೆರೆಯ ಹೂಳು ತೆಗೆಯಲು ಜಿಲ್ಲಾ ಪಂಚಾಯಿತಿಯಿಂದ ಸಹಕಾರ ಸಿಗುತ್ತಿದೆ. ರೈತರ ಜಮೀನುಗಳಿಗೆ ಹೂಳು ಒದಗಿಸಲು ಹಿಟಾಚಿ ನೆರವು ಸಿಗುವುದಿಲ್ಲ. ಸಣ್ಣ ಹಿಡುವಳಿ ರೈತರಿಗೆ ಪ್ರತಿ ಎಕರೆಗೆ 5 ಟ್ರ್ಯಾಕ್ಟರ್‌ ಹೂಳು ತುಂಬಿಸಿಕೊಳ್ಳಲು ಜಿಲ್ಲಾಡಳಿತದ ನೆರವು ಬೇಕು’ ಎಂದು ಒತ್ತಾಯಿಸುತ್ತಾರೆ ಅವರು.
ಹೂಳಿನಿಂದ ತುಂಬಿಹೋದ ದೊಡ್ಡ ಕೆರೆಗಳು ಡಿ. ಶ್ರೀನಿವಾಸ್
ಜಗಳೂರು: ನೂರಕ್ಕೂ ಹೆಚ್ಚು ಕೆರೆಗಳಿರುವ ಜಗಳೂರು ತಾಲ್ಲೂಕಿನಲ್ಲಿ ದಶಕಗಳಿಂದ ಹೂಳು ತೆಗೆಯದ ಕಾರಣ ಹಲವು ದೊಡ್ಡ ಕೆರೆಗಳು ಹೂಳಿನಿಂದ ತುಂಬಿಕೊಂಡಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹ ಸಾಧ್ಯವಾಗುತ್ತಿಲ್ಲ. ಸಣ್ಣ ನೀರಾವರಿ ಇಲಾಖೆ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿದ್ದರೂ ಬಯಲುಸೀಮೆಯ ನೀರಿನ ಪ್ರಮುಖ ಜಲಮೂಲಗಳಾಗಿರುವ ಕೆರೆಗಳು ಕಳೆಗುಂದಿವೆ. 516 ಎಕರೆಗೂ ಹೆಚ್ಚು ವಿಸ್ತೀರ್ಣದ ಐತಿಹಾಸಿಕ ಜಗಳೂರು ಕೆರೆ 5 ದಶಕಗಳ ನಂತರ ಭರ್ತಿಯಾಗಿದೆ. ಆದರೆ ಇಡೀ ಕೆರೆಯ ತುಂಬಾ ಕಳೆ ಸಸ್ಯಗಳು ಹಾಗೂ ಅಡಿಗಟ್ಟಲೆ ಹೂಳು ತುಂಬಿಕೊಂಡಿದೆ. 57 ಕೆರೆ ತುಂಬಿಸುವ ಯೋಜನೆ ಮತ್ತು ಉತ್ತಮ ಮಳೆ ಬಿದ್ದ ಕಾರಣ ಈ ಬಾರಿ ತಾಲ್ಲೂಕಿನಲ್ಲಿ ಚಿಕ್ಕ ದೊಡ್ಡ ಕೆರೆಗಳು ತುಂಬಿವೆ. ಆದರೆ ಯಥೇಚ್ಚ ಹೂಳು ನೀರು ಸಂಗ್ರಹಕ್ಕೆ ಅಡ್ಡಿಯಾಗಿದೆ. ಜಮ್ಮಾಪುರ ಭರಮಸಮುದ್ರ ಮುಂತಾದ ಕೆರೆಗಳಲ್ಲಿ ರೈತರೇ ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಯಂತ್ರಗಳು ಹಾಗೂ ಟ್ರ್ಯಾಕ್ಟರ್ ಮೂಲಕ ಕೆರೆ ಅಂಗಳದಲ್ಲಿನ ಹೂಳು ಹಾಗೂ ಕೆರೆಗೋಡನ್ನು ಪ್ರತಿ ವರ್ಷ ತಮ್ಮ ಜಮೀನುಗಳಿಗೆ ಸಾಗಿಸುತ್ತಿದ್ದಾರೆ. ಕೆಲವು ಸಣ್ಣಕೆರೆಗಳು ಮತ್ತು ಗೋಕಟ್ಟೆಗಳಲ್ಲಿ ಉದ್ಯೋಗಖಾತ್ರಿಯಡಿ ಆಗಾಗ್ಗೆ ಕಾಟಾಚಾರಕ್ಕೆ ಹೂಳು ತೆಗೆಯುವ ಕಾಮಗಾರಿ ನಡೆಯುತ್ತದೆ. ದೊಡ್ಡ ಪ್ರಮಾಣದಲ್ಲಿ ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂಬ ಆರೋಪಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.