ADVERTISEMENT

ಮರೆಯಾದ ರುಚಿಗೆ ಮರುಜೀವ; ಬಾಯಲ್ಲಿ ಕರಗುವ ಹಾಲುಬಾಯಿ, ಅಪರೂಪರ ತೊಡೆದೇವು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:21 IST
Last Updated 1 ಜನವರಿ 2026, 7:21 IST
ದಾವಣಗೆರೆ ಕೃಷಿ ಇಲಾಖೆ ಆವರಣದಲ್ಲಿ ನಡೆದ ಪಾಕಸ್ಪರ್ಧೆಯಲ್ಲಿ ರುಚಿ ಸವಿದ ಅಧಿಕಾರಿಗಳು
ದಾವಣಗೆರೆ ಕೃಷಿ ಇಲಾಖೆ ಆವರಣದಲ್ಲಿ ನಡೆದ ಪಾಕಸ್ಪರ್ಧೆಯಲ್ಲಿ ರುಚಿ ಸವಿದ ಅಧಿಕಾರಿಗಳು   

ದಾವಣಗೆರೆ: ನಗರದ ಕೃಷಿ ಇಲಾಖೆ ಆವರಣದ ತುಂಬೆಲ್ಲಾ ಪಾಕ ಪರಿಮಳದ ಘಮ ಆವರಿಸಿತ್ತು. ಹೆಂಗಳೆಯರ ಕೈಯಿಂದ ತಯಾರಾದ ರುಚಿಕರ ಸಿರಿದಾನ್ಯಗಳ ನಳಪಾಕ ಪಾಕಪ್ರಿಯರ ಬಾಯಿ ಚಪ್ಪರಿಸುವಂತೆ ಮಾಡಿತ್ತು. 

‘ಸಿರಿಧಾನ್ಯದ ಹೊಲ ಚಂದ.. ಸಿರಿದಾನ್ಯಗಳ ಖಾದ್ಯ ಚಂದ’ ಎಂಬ ಘೋಷ ವಾಕ್ಯದೊಂದಿಗೆ ನಗರದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಇಂದಿನ ಮಂದಿಯ ನೆನಪಿನಿಂದ ಮರೆಯಾದ ವಿವಿಧ ಸಾಂಪ್ರದಾಯಿಕ ಸ್ವಾದಗಳನ್ನು ತೆರೆದಿಟ್ಟಿತ್ತು.

ದೇಹಕ್ಕೆ ಶಕ್ತಿಯ ಜೊತೆ ಬಾಯಿಗೆ ರುಚಿ ನೀಡುವ ನೂರಾರು ಬಗೆಯ ಅಡುಗೆಗಳು, ಪಾಕಪ್ರವೀಣೆಯರ ಕೈರುಚಿಗೆ ಸಾಕ್ಷಿಯಾಗಿತ್ತು. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಬರಗಿನಿಂದ ತಯಾರಾದ ಸಿಹಿ–ಕಾರದ ಆರೋಗ್ಯವರ್ಧಿತ ಆಹಾರ ಒಂದೆಡೆಯಾದರೆ, ತಟ್ಟೆಯಲ್ಲಿ ತೆರೆದಿಟ್ಟಿದ್ದ ಮರೆತು ಹೋದ ಖಾದ್ಯಗಳು ವಿದ್ಯಾರ್ಥಿಗಳು ಹಾಗೂ ನೆರೆದವರನ್ನು ಕುತೂಹಲದಿಂದ ಕರೆದಿತ್ತು.

ADVERTISEMENT

ಮಾಗಿಯ ಚಳಿಗೆ ಸಾಮೆ ಉಪ್ಪಿಟ್ಟು, ಕರಂಕುರಂ ಚಕ್ಕಲಿ, ಕೋಡಬಳೆ, ಸಜ್ಜೆ ರೊಟ್ಟಿ– ಕಾರದ ಚಟ್ನಿ, ಮಾರ್ಡನ್‌ ಸಾಮೆ ಮಶ್ರೂಮ್‌ ಪ್ರೈಡ್‌ರೈಸ್‌ ಬೆಚ್ಚಗೆ ಮಾಡಿದರೆ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಆನೆಕಲ್ಲು ಪಾಯಸ, ಅಪರೂಪರ ತೊಡೆದೇವು, ಸಿರಿದಾನ್ಯಗಳ ಹೊಯ್ ಹಪ್ಪಳ, ಅಂಗು, ಬಾಯಲ್ಲಿ ಕರಗುವ ರಾಗಿ ಪೇಡ, ನವಣೆ ಪೇರಲೆ ಗುಣ್ಣು, ಸಿಹಿಗುಂಬಳ ಕೇಕ್, ರಾಗಿ ಎಗ್‌ ಲೆಸ್‌ ಕೇಕ್, ರಾಗಿ ಕಿಲಾಸ... ನೂರಾರು ಬಗೆಯ ಅಪರೂದ ಪಾಕಗಳು ಬಾಯಲ್ಲಿ ನೀರು ತರಿಸಿದವು. 

ಸದಾ ಸಂಸಾರ, ಅಡುಗೆ, ಮಕ್ಕಳು ಎಂದು ಕೆಲಸದಲ್ಲೇ ಸಮಯ ಕಳೆಯುವ ಮಹಿಳೆಯರು ಮನೆ ಕೆಲಸಕ್ಕೆ ಕೊಂಚ ವಿರಾಮ ನೀಡಿ, ತಮ್ಮ ಕೈರುಚಿಯ ಶಕ್ತಿಯನ್ನ ಪಾಕದ ಮೂಲಕ ಪ್ರದರ್ಶನ ಮಾಡಿದರು. 

ಪಾಕ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. 200ಕ್ಕೂ ಅಧಿಕ ಬಗೆಯ ಖಾದ್ಯಗ ಪಾಕ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದವು. ಒಂದಕ್ಕಿಂತ ಒಂದು ಭಿನ್ನ ರುಚಿಯ ತೀಡಿ–ತಿನಿಸುಗಳು ನಾಲಿಗೆ ಚಪ್ಪರಿಸುವಂತೆ ಮಾಡಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದವು.

ಪ್ರಾದ್ಯಾಪಕಿ ಜೋಸ್ನಾ ಶ್ರೀಕಾಂತ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕಿ ಸುಧಾ, ಹಾಗೂ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸುಪ್ರಿಯಾ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಕೃಷಿ  ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ, ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಡಿ.ಎಂ, ಉಪ ನಿರ್ದೇಶಕರಾದ ಅಶೋಕ್, ರೇವಣಸಿದ್ದನ ಗೌಡ, ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕರಾದ ಮೀನಾಕ್ಷಿ,  ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ನಾನು ಎಲ್ಲಾ ಫೈವ್‌ಸ್ಟಾರ್ ಹೋಟೆಲ್‌ಗಳಲ್ಲೂ ಊಟ ಮಾಡಿದ್ದೇನೆ. ಆದರೆ ಸಿರಿಧಾನ್ಯದಿಂದ ತಯಾರಾದ ಇಷ್ಟೊಂದು ಬಗೆಯ ಆರೋಗ್ಯಕರ ಖಾದ್ಯಗಳನ್ನು ಎಲ್ಲಿಯೂ ಸವಿದಿಲ್ಲ. ಈ ಆಹಾರಕ್ಕೆ ಹೆಚ್ಚು ಪ್ರಚಾರ ಸಿಗಲಿ.
– ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಪಂಚಾಯಿತಿ ಸಿಇಒ

ಪಾಕ ಸ್ಪರ್ಧೆ; ವಿಜೇತರ ವಿವರ

ಸಿರಿಧಾನ್ಯ ಸಿಹಿ ಖಾದ್ಯ ವಿಭಾಗದಲ್ಲಿ ಹೊನ್ನಾಳಿಯ ಮಂಗಳಾ ತಯಾರಿಸಿದ ನವಣೆ ಕುಂಬಳಕಾಯಿ ಕಡುಬು ಪ್ರಥಮ ಬಹುಮಾನ, ಜಗಳೂರಿನ ಸುನಂದಮ್ಮ ತಯಾರಿಸಿದ ಪುರಕ್ಕಿ ಉಂಡೆಗೆ ದ್ವಿತೀಯ ಬಹುಮಾನ, ದಾವಣಗೆರೆಯ ಪೂಜಾ ತಯಾರಿಸಿದ ನವಣೆ ಗೋಲಿ ಖೀರ್ (ಪಾಯಸ)ಕ್ಕೆ ತೃತೀಯ ಬಹುಮಾನ ಲಭಿಸಿತು.

ಖಾರದ ತಿನಿಸು ವಿಭಾಗದಲ್ಲಿ ದಾವಣಗೆರೆಯ ಪೂರ್ಣಿಮಾ ತಯಾರಿಸಿದ ಸಾಮೆ ಮಶ್ರೂಮ್‌ ಪಾಲಕ್ ಫೈಡ್ ರೈಸ್‌ಗೆ ಪ್ರಥಮ ಬಹುಮಾನ ದೊರೆಯಿತು. ದಾವಣರೆಯ ಸಿಂಧುಕುಮಾರಿ ಬಿ.ವಿ ತಯಾರಿಸಿದ ರಾಗಿ ಶ್ಯಾವಗಿ ಉಪ್ಪಿಟ್ಟಿಗೆ ದ್ವಿತೀಯ ಬಹುಮಾನ ಬಂದರೆ ರಾಗಿ ನೂಡಲ್ಸ್ ಮಾಡಿ ಸುನಂದಾ ವರ್ಣೇಕರ್ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು. 

ಮರೆತು ಹೋದ ಖಾದ್ಯ ವಿಭಾಗದಲ್ಲಿ ಜಗಳೂರಿನ ವೀರಮ್ಮ ತಯಾರಿಸಿದ ಹುಳಿಮುದ್ದೆ ಮತ್ತು ಶೇಂಗಾ ಹುಳಿಗೆ ಪ್ರಥಮ ಬಹುಮಾನ ಬಂದರೆ ನ್ಯಾಮತಿಯ ನೇತ್ರಾವತಿ ತಯಾರಿಸಿದ ಗುಗುರಿಗೆ ದ್ವಿತೀಯ ಬಹುಮಾನ ಹಾಗೂ ಚಿರುಕುಳ್ಳಿ ತಯಾರಿಸಿದ ಜಗಳೂರಿನ ಮಂಗಳಮ್ಮ ತೃತೀಯ ಬಹುಮಾನ ಪಡೆದುಕೊಂಡರು.

ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಿಗೆ ಕ್ರಮವಾಗಿ ₹5000 ₹3000 ₹2000 ವಿತರಿಸಲಾಯಿತು. ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.