ADVERTISEMENT

ಕಾರ್ಮಿಕರ ಕೌಶಲ ಹೆಚ್ಚಿಸಲು ಜಿಲ್ಲಾಡಳಿತ ನೆರವು

ರಫ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:54 IST
Last Updated 14 ಅಕ್ಟೋಬರ್ 2025, 2:54 IST
ದಾವಣಗೆರೆಯಲ್ಲಿ ನಡೆದ ಝಡ್.ಇ.ಡಿ/ ಲೀನ್ ಯೋಜನೆ ಹಾಗೂ ರಪ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ದೀಪ ಬೆಳಗಿಸಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ನಡೆದ ಝಡ್.ಇ.ಡಿ/ ಲೀನ್ ಯೋಜನೆ ಹಾಗೂ ರಪ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ದೀಪ ಬೆಳಗಿಸಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಜವಳಿ ಉದ್ಯಮ ಹಾಗೂ ಇನ್ನಿತರ ಕೈಗಾರಿಕೆಗಳ ಬೆಳವಣಿಗೆಗೆ ಜಿಲ್ಲೆಯಲ್ಲಿ ಹೆಚ್ಚಿನ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು ಕಾರ್ಮಿಕರ ಕೌಶಲ ಹೆಚ್ಚಿಸಲು ಏನೆಲ್ಲಾ ಅವಶ್ಯವಾಗಿದೆ ಎಂದು ತಿಳಿಸಿದರೆ, ಅದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ನೆರವು ನೀಡಲಿದೆ. ಕೈಗಾರಿಕೆಗಳನ್ನು ಸ್ಥಾಪಿಸಿ, ಉದ್ಯೋಗವಕಾಶಗಳನ್ನು ಸೃಷ್ಟಿಸಿದರೆ ಆರ್ಥಿಕ ಪ್ರಗತಿಯ ವೇಗ ಹೆಚ್ಚುತ್ತದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. 

ನಗರದ ಖಾಸಗಿ ಹೋಟೆಲ್‌ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಎಂಎಸ್‌ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ (ಆರ್‌ಎಎಂಪಿ) ಯೋಜನೆಯಡಿ ಸೋಮವಾರ ಝಡ್.ಇ.ಡಿ/ ಲೀನ್ ಯೋಜನೆ ಹಾಗೂ ರಫ್ತು ಕುರಿತು ಆಯೋಜಿಸಿದ್ದ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

‘ಮೊದಲ ಹಂತದ ನಗರಗಳಲ್ಲಿ ಕಾಸ್ಟ್ ಆಫ್ ಲಿವಿಂಗ್ (ಜೀವನ ನಿರ್ವಹಣೆ ವೆಚ್ಚ) ಹೆಚ್ಚಾಗಿದೆ. ಆದರೆ, ಕಾರ್ಮಿಕರ ವೇತನ ಮಾಸಿಕ ₹ 25 ಸಾವಿರ ದಷ್ಟಿರುತ್ತದೆ. ಈ ಕಾರಣಕ್ಕೆ ಕಡಿಮೆ ಬಾಡಿಗೆಗೆ ಸಿಗುವ ಮನೆ, ಖಾಲಿ ಜಾಗಗಳಲ್ಲಿ ಟೆಂಟ್ ಹಾಕಿಕೊಳ್ಳುತ್ತಿರುವ ಪರಿಣಾಮ ಸ್ಲಂಗಳ ಸಂಖ್ಯೆ ಹೆಚ್ಚಾಗುತ್ತಿವೆ. ನಗರ ವಲಸೆ ತಡೆಯಲು 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಬೇಕು’ ಎಂದು ಹೇಳಿದರು.  

ADVERTISEMENT

‘ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡುವಂತಹ ಉತ್ಪನ್ನಗಳನ್ನು ಉತ್ಪಾದಿಸಲು ನೂತನ ತಂತ್ರಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಬೇಕು. ಹಳೇ ತಂತ್ರಜ್ಞಾನ ಬಳಕೆಯಿಂದ ಉತ್ಪಾದನಾ ವೆಚ್ಚವೂ ಹೆಚ್ಚಾಗಲಿದೆ. ಕಾಲಕಾಲಕ್ಕೆ ತಂತ್ರಜ್ಞಾನವನ್ನು ಸುಧಾರಿಸಿಕೊಳ್ಳದ ಕೈಗಾರಿಕೆಗಳು ಈಗ ಕಲ್ಯಾಣ ಮಂಟಪಗಳಾಗಿ ಮಾರ್ಪಟ್ಟಿವೆ’ ಎಂದರು. 

‘ಕೃಷಿಯ ನಂತರ ಹೆಚ್ಚು ಉದ್ಯೋಗ ಸೃಷ್ಟಿಸುವಲ್ಲಿ ಎಂಎಸ್‌ಎಂಇಗಳ ಪಾತ್ರ ಮುಖ್ಯ. ನೀವು ತಯಾರಿಸುವ ಉತ್ಪನ್ನಗಳು ಗುಣಮಟ್ಟದಿಂದ ಇರಬೇಕು. ಅವು ಪರಿಸರಕ್ಕೆ ಮಾರಕ ಆಗಬಾರದು’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಹೇಳಿದರು. 

ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಬಸವನಾಳ್, ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದರ್, ಪದಾಧಿಕಾರಿಗಳಾದ ಡಿ.ಸಿ. ಶ್ರೀನಿವಾಸ್, ವಿ.ದಿನೇಶ್ ಕುಮಾರ್ ಮತ್ತಿತರರಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಕಾರ್ಮಿಕರು ಕೌಶಲಗಳನ್ನು ಬೆಳೆಸಿಕೊಳ್ಳಬೇಕು
ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.