ದಾವಣಗೆರೆ: ಸ್ಮಾರ್ಟ್ ಸಿಟಿ ಮೊದಲ ಹಂತದ ಕಾಮಗಾರಿಗಳಲ್ಲಿ ಶೇ 70ರಷ್ಟು ಮುಗಿದಿವೆ. ಉಳಿದಿರುವ ಕಾಮಗಾರಿಗಳನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.
ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಕೀರ್ಣದಲ್ಲಿ ಸಮಗ್ರ ಆಜ್ಞೆ ಮತ್ತು ನಿಯಂತ್ರಣ ಕೇಂದ್ರವನ್ನು (ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್) ಮಂಗಳವಾರ ಲೋಕಾರ್ಪಣೆ ಮಾಡಿ, ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಒಂದು ವರ್ಷದ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರನ್ನೇ ಹೊಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ ಎಂ.ಡಿ.ಗಳಿಗೆ
ಎಚ್ಚರಿಕೆ ನೀಡಿದ್ದಾರೆ. ನಮ್ಮಲ್ಲಿ ಕೆಲವೇ ಕೆಲವು ಕಾಮಗಾರಿಗಳು ಬಾಕಿ ಉಳಿದಿದ್ದು, ವರ್ಷದೊಳಗೆ ಪೂರ್ಣಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸುರಕ್ಷತೆ, ನಿಯಂತ್ರಣ ಹಾಗೂ ಸಂಚಾರ ವ್ಯವಸ್ಥೆ ಸುಸೂತ್ರಗೊಳಿಸಲು ಐಸಿಟಿ ಯೋಜನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಪಿ.ಎ.ಎಸ್., ಡಿಜಿಟಲ್ ಡಿಸ್‍ಪ್ಲೇ ಬೋರ್ಡ್ ಹಾಗೂ ಕಮಾಂಡ್ ಕಂಟ್ರೋಲ್ ಸೆಂಟರ್‌ಗಳನ್ನು ₹ 85.41 ಕೋಟಿ ವೆಚ್ಚದಲ್ಲಿ ಅನುಷ್ಠಾಗೊಳಿಸಲಾಗುತ್ತಿದೆ. ಇದು ಅಪರಾಧಿ ಕೃತ್ಯಗಳನ್ನು ತಡೆಗಟ್ಟಲು ನೆರವಾಗಲಿದೆ ಎಂದರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ‘ಸಹಕಾರ ಸಂಸ್ಥೆಗಳಿಂದ ಸಾಲ ನೀಡುವ ಕುರಿತಂತೆ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದವಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಒಳಗೊಂಡಂತೆ ಯಾರಿಗೆ ಎಷ್ಟು ಸಾಲ ಒದಗಿಸಬೇಕು ಎಂಬುದರ ಕುರಿತು ನಿರ್ದೇಶನ ನೀಡಲಾಗಿದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಯಶಸ್ವಿನಿಯನ್ನು ಪುನಃ ಜಾರಿ ಮಾಡಲು ಎಲ್ಲ ತಯಾರಿ ನಡೆಸಲಾಗಿದೆ’ ಎಂದು ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಜಯಮ್ಮ ಆರ್. ಗೋಪಿನಾಯ್ಕ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಚನ್ನಪ್ಪ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರೂ ಇದ್ದರು.
ಡಿಸಿಎಂ ಟೌನ್‌ಶಿಪ್‌ನಲ್ಲಿ ₹ 4.92 ಕೋಟಿ ವೆಚ್ಚದಲ್ಲಿ ಅನಿಲ್ ಕುಂಬ್ಳೆ ಆಟದ ಮೈದಾನದಲ್ಲಿ ಸಂಪರ್ಕ ರಸ್ತೆಯೊಂದಿಗೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
₹ 1.50 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿ ಮಾಡಲಾದ ಹೈಸ್ಕೂಲ್ ಮೈದಾನದಲ್ಲಿರುವ ಟೆನಿಸ್ ಕೋರ್ಟ್, ₹ 5.75 ಕೋಟಿಯಲ್ಲಿ ಅಭಿವೃದ್ಧಿ ಮಾಡಲಾದ ಶಾಮನೂರು ರಸ್ತೆಯ ಚೌಡೇಶ್ವರಿ ದೇವಸ್ಥಾನದಿಂದ ಗ್ಲಾಸ್ ಹೌಸ್‌ವರೆಗೆ ಹಾಗೂ ಬೈಪಾಸ್ ರಸ್ತೆಯಿಂದ ಶಾಮನೂರು ರುದ್ರಭೂಮಿವರೆಗಿನ ರಸ್ತೆಗಳು, ಆನೆಕೊಂಡ ಮತ್ತು ಯರಗುಂಟೆ ಸರ್ಕಾರಿ ಶಾಲೆಗಳಿಗೆ ₹ 1.40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕೊಠಡಿಗಳು, ₹ 3.21 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಪಾಲಿಕೆ ಒಡೆತನದ ಖಾಸಗಿ ಬಸ್‌ನಿಲ್ದಾಣ, ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ₹ 4.08 ಕೋಟಿಯಲ್ಲಿ ನಿರ್ಮಿಸಲಾದ ಸಂಶೋಧನೆ ಮತ್ತು ಅಭಿವೃದ್ಧಿ ಕಟ್ಟಡ, ₹ 1.91 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರೌಢಶಾಲಾ ಕಟ್ಟಡಗಳನ್ನು ಉದ್ಘಾಟಿಸಲಾಯಿತು.
72 ಕಾಮಗಾರಿ ಪೂರ್ಣ
ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50–50 ಅನುಪಾತದಲ್ಲಿ ₹ 1,074 ಕೋಟಿ ಯೋಜನಾ ಮೊತ್ತದಲ್ಲಿ 115 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 72 ಕಾಮಗಾರಿಗಳು ಮುಗಿದಿವೆ. 43 ಕಾಮಗಾರಿಗಳು ವಿವಿಧ ಹಂತದಲ್ಲಿವೆ.
ಪ್ಯಾನ್‌ಸಿಟಿ ಐಸಿಟಿ ಯೋಜನೆ
ಪ್ಯಾನ್‌ಸಿಟಿ ಐಸಿಟಿ ಯೋಜನೆಯಡಿ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮತ್ತು ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗಳು ಕೆಲಸ ಮಾಡಲಿವೆ.
ಇ–ಕಲಿಕಾ ಕೇಂದ್ರ, ಮಾಹಿತಿ ಮತ್ತು ಆನ್‌ಲೈನ್ ವಹಿವಾಟಿನ ಕಿಯೋಸ್ಕ್, ಒಂದು ನಗರ ಒಂದು ಸಂಖ್ಯೆ, ಮೊಬೈಲ್ ಅಪ್ಲಿಕೇಶನ್ಸ್, ಪೋರ್ಟಲ್ಸ್, ಕಣ್ಗಾವಲು ತಂತ್ರಜ್ಞಾನ, ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ, ಇಂಟಲಿಜೆಂಟ್ ಸಾರಿಗೆ ವ್ಯವಸ್ಥೆಗಳು ಇದರಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.