
ದಾವಣಗೆರೆ: ವಾಹನ ನಿಲುಗಡೆ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ರೂಪಿಸಿದ ‘ಸ್ಮಾರ್ಟ್ ಪಾರ್ಕಿಂಗ್’ ವ್ಯವಸ್ಥೆ ಅನುಷ್ಠಾನಕ್ಕೆ ಸಜ್ಜಾಗಿದೆ. ಇನ್ನು ಮುಂದೆ ನಗರದ 9 ಸ್ಥಳಗಳಲ್ಲಿ ‘ಹಣ ಪಾವತಿಸಿ ವಾಹನ ನಿಲುಗಡೆ’ ಮಾಡುವ ನೀತಿ ಜಾರಿಗೆ ಬರಲಿದೆ.
ದಾವಣಗೆರೆ ನಗರದ ಸಂಚಾರ ಸಮಸ್ಯೆ, ವಾಹನ ದಟ್ಟಣೆಯನ್ನು ನಿಯಂತ್ರಿಸಲು ‘ಸ್ಮಾರ್ಟ್ ಸಿಟಿ’ ಯೋಜನೆ ಈ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ‘ಡಿವಿಜಿ ಹೆಲ್ಪ್’ ಮೊಬೈಲ್ ಆ್ಯಪ್ ಮೂಲಕವೇ ವಾಹನ ನಿಲುಗಡೆ ಸ್ಥಳವನ್ನು ಗುರುತಿಸಿ ಮುಂಗಡವಾಗಿ ಕಾಯ್ದಿರಿಸುವ ಅವಕಾಶವೂ ಸಿಗಲಿದೆ. ಮಹಾನಗರ ಪಾಲಿಕೆ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಇದು ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ.
ಸ್ಥಳ ಗುರುತಿಸಿರುವ ಅಧಿಕಾರಿಗಳು ವಾಹನ ನಿಲುಗಡೆ ವಿನ್ಯಾಸ ಕೂಡ ನಿಗದಿಪಡಿಸಿದ್ದಾರೆ. ಪಾರ್ಕಿಂಗ್ ಸ್ಥಳದಲ್ಲಿ ಸುಧಾರಿತ ತಂತ್ರಜ್ಞಾನ ಆಧರಿತ ಸ್ಮಾರ್ಟ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ಸ್ಥಳಗಳಲ್ಲಿ 2,288 ವಾಹನಗಳನ್ನು ನಿಲುಗಡೆ ಮಾಡಲು ಸಾಧ್ಯವಿದೆ. 1,950ಕ್ಕೂ ಹೆಚ್ಚು ದ್ವಿಚಕ್ರ ವಾಹನ ಹಾಗೂ 300ಕ್ಕೂ ಅಧಿಕ ಕಾರು ನಿಲುಗಡೆ ಮಾಡಬಹುದಾಗಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಈಗಿರುವ ಪಾರ್ಕಿಂಗ್ ವಿನ್ಯಾಸವನ್ನು ಕೂಡ ಬದಲಿಸಲಾಗಿದೆ.
ವಾಹನಗಳ ಸಂಖ್ಯೆ ಹೆಚ್ಚಾದ ಪರಿಣಾಮ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ವಿಪರೀತವಾಗಿದೆ. ಸಂಚಾರ ಠಾಣೆಯ ಪೊಲೀಸರು ದ್ವಿಚಕ್ರ ವಾಹನ ಮತ್ತು ಕಾರುಗಳ ಪಾರ್ಕಿಂಗ್‌ಗೆ ಕೆಲ ಮಾರ್ಗ, ವೃತ್ತಗಳಲ್ಲಿ ಸ್ಥಳ ನಿಗದಿಪಡಿಸಿದ್ದಾರೆ. ವಾಣಿಜ್ಯ ಚಟುವಟಿಕೆ ಹೆಚ್ಚಾಗಿರುವ ಮಾರುಕಟ್ಟೆ ಪ್ರದೇಶದಲ್ಲಿ ‘ಸಮ ಮತ್ತು ಬೆಸ ಸಂಖ್ಯೆ’ ಆಧಾರಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೂ ಪಾರ್ಕಿಂಗ್‌ಗೆ ಅಗತ್ಯ ಸ್ಥಳವನ್ನು ಹುಡುಕಲು ಶೇ 20ರಷ್ಟು ವಾಹನಗಳು ರಸ್ತೆಯ ಮೇಲೆ ಸಂಚರಿಸುತ್ತವೆ ಎಂಬುದು ‘ಸ್ಮಾರ್ಟ್ ಸಿಟಿ’ ಅಧಿಕಾರಿಗಳ ಲೆಕ್ಕಾಚಾರ.
ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಸಿ.ಸಿ.ಟಿವಿ ಕ್ಯಾಮೆರಾಗಳ ಮೂಲಕ ದಂಡದ ನೋಟಿಸ್ ಕೂಡ ವಾಹನ ಮಾಲೀಕರಿಗೆ ರವಾನೆಯಾಗುತ್ತಿದೆ. ಆದರೂ ವಾಹನ ನಿಲುಗಡೆಯಲ್ಲಿ ಶಿಸ್ತು ತರಲು ಸಾಧ್ಯವಾಗಿಲ್ಲ. ‘ಹಣ ಪಾವತಿಸಿ ವಾಹನ ನಿಲುಗಡೆ’ ಮಾಡಿ ಎಂಬ ವ್ಯವಸ್ಥೆ ಪಾರ್ಕಿಂಗ್‌ನಲ್ಲಿ ಸುಧಾರಣೆ ತರಬಹುದು ಎಂದು ನಿರೀಕ್ಷಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ಗಂಟೆಗೆ ₹ 5 ಹಾಗೂ ಕಾರುಗಳಿಗೆ ಗಂಟೆಗೆ ₹ 10 ಶುಲ್ಕ ನಿಗದಿಪಡಿಸಲಾಗಿದೆ. ಗಂಟೆಗಳ ಆಧಾರದ ಮೇರೆಗೆ ಶುಲ್ಕ ಪಾವತಿಸಬೇಕಾಗುತ್ತದೆ.
ಪಾರ್ಕಿಂಗ್ ಸ್ಥಳದಲ್ಲಿರುವ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ‘ಸ್ಮಾರ್ಟ್ ಸಿಟಿ’ ಕಚೇರಿಯ ‘ಕಮಾಂಡ್ ಕಂಟ್ರೊಲ್ ಕೇಂದ್ರ’ದಿಂದ ನಿಯಂತ್ರಿಸಲಾಗುತ್ತದೆ. ಯಾವ ಸ್ಥಳದಲ್ಲಿ ಪಾರ್ಕಿಂಗ್ ಖಾಲಿ ಇದೆ ಎಂಬುದನ್ನು ಗಮನಿಸಲಾಗುತ್ತದೆ. ಈ ಮಾಹಿತಿ ಸ್ವಯಂ ಚಾಲಿತವಾಗಿ ಆ್ಯಪ್‌ಗೆ ರವಾನೆಯಾಗುತ್ತದೆ. ವಾಹನ ಕಳವು ತಪ್ಪಿಸಲು ಹಾಗೂ ಅಪರಾಧ ಪ್ರಕರಣಗಳನ್ನು ಭೇದಿಸಲು ಕೂಡ ಇದು ನೆರವಾಗಲಿದೆ.
ಆಯ್ದ 9 ಸ್ಥಳಗಳನ್ನು ‘ಸ್ಮಾರ್ಟ್ ಪಾರ್ಕಿಂಗ್’ಗೆ ಗುರುತಿಸಲಾಗಿದೆ. ಅನಗತ್ಯವಾಗಿ ವಾಹನವನ್ನು ರಸ್ತೆಗೆ ತರುವುದಕ್ಕೆ ಕಡಿವಾಣ ಬೀಳಲಿದೆ. ಸಂಚಾರ ಸಮಸ್ಯೆಗೂ ಪರಿಹಾರ ಸಿಗಲಿದೆಮಮತಾ ಡಿಜಿಎಂ ಸ್ಮಾರ್ಟ್ ಸಿಟಿ ಯೋಜನೆ
‘ಸ್ಮಾರ್ಟ್ ಸಿಟಿ ಲಿಮಿಟೆಡ್’ ವತಿಯಿಂದ ಅಭಿವೃದ್ಧಿಪಡಿಸಿದ ‘ಡಿವಿಜಿ ಹೆಲ್ಪ್’ ಮೊಬೈಲ್ ಆ್ಯಪ್ ಮೂಲಕ ಪಾರ್ಕಿಂಗ್ ಸ್ಥಳ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಆ್ಯಪ್ ಅಪ್ಲಿಕೇಷನ್ ಹೊಂದಿದ್ದರೆ ಅಂಗೈಯಲ್ಲಿಯೇ ಮಾಹಿತಿ ಲಭ್ಯವಾಗಲಿದೆ. ಪಾರ್ಕಿಂಗ್ ಸ್ಥಳ ಎಲ್ಲಿ ಖಾಲಿ ಇದೆ? ಎಷ್ಟು ದೂರವಿದೆ? ಎಂಬ ಮಾಹಿತಿ ಕೂಡ ಲಭ್ಯವಾಗುತ್ತದೆ. ಅಗತ್ಯ ಸ್ಥಳವನ್ನು ಮೊದಲೇ ಕಾಯ್ದಿರಿಸಬಹುದು. ಪಾರ್ಕಿಂಗ್ ಸ್ಥಳದಲ್ಲಿರುವ ಸಿಬ್ಬಂದಿ ಇದನ್ನು ನಿರ್ವಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.