ADVERTISEMENT

ಹಾವು ಕಡಿತ; ನಾಟಿ ಚಿಕಿತ್ಸೆಗೆ ಕಡಿವಾಣ

ಹಾವು ಕಚ್ಚಿ 3 ಸಾವು, ಆಸ್ಪತ್ರೆಗೆ ದಾಖಲಾಗುವ ಮುನ್ನ ಸಮಯ ವ್ಯರ್ಥ

ಜಿ.ಬಿ.ನಾಗರಾಜ್
Published 10 ಸೆಪ್ಟೆಂಬರ್ 2025, 7:17 IST
Last Updated 10 ಸೆಪ್ಟೆಂಬರ್ 2025, 7:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದ 13 ವರ್ಷ ವಯಸ್ಸಿನ ಬಾಲಕಿಗೆ ಜಮೀನಿನಲ್ಲಿ ಹಾವೊಂದು ಕಚ್ಚಿದೆ. ಪಾಲಕರು ಸಮೀಪದ ಸೊಕ್ಕೆ ಗ್ರಾಮಕ್ಕೆ ಕರೆದೊಯ್ದು ನಾಟಿ ಔಷಧ ಕೊಡಿಸಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಾಗ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ, ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.

ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಗ್ರಾಮದ 52 ವರ್ಷ ವಯಸ್ಸಿನ ರೈತ ಮೆಕ್ಕೆಜೋಳದಲ್ಲಿ ಕಳೆ ತೆಗೆಯುವಾಗ ಹಾವು ಕಚ್ಚಿದೆ. ಸಮೀಪದ ಆರುಂಡಿ ಗ್ರಾಮಕ್ಕೆ ಕರೆದೊಯ್ದು ನಾಟಿ ಔಷಧ ಕೊಡಿಸಲಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೇ ರೈತ ಮೃತಪಟ್ಟಿದ್ದಾರೆ.

ಹಾವು ಕಚ್ಚಿದಾಗ ನಾಟಿ ಚಿಕಿತ್ಸೆ, ಸಾಂಪ್ರದಾಯಿಕ ಔಷಧ ಪಡೆಯುವ ಬದಲು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೆ ಈ ಎರಡು ಜೀವಗಳು ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು. ಮೂಢನಂಬಿಕೆಗೆ ಕಟ್ಟುಬಿದ್ದು ವೈಜ್ಞಾನಿಕ ಚಿಕಿತ್ಸೆ ನಿರ್ಲಕ್ಷಿಸಿದ್ದೇ ಈ ಸಾವಿಗೆ ಕಾರಣ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರಿಶೀಲನೆಯಲ್ಲಿ ದೃಢಪಟ್ಟಿದೆ.

ADVERTISEMENT

ಜಿಲ್ಲೆಯಲ್ಲಿ ಆಗಸ್ಟ್‌ 31ರವರೆಗೆ ಹಾವು ಕಚ್ಚಿದ 426 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. ಇಬ್ಬರು ನಾಟಿ ಚಿಕಿತ್ಸೆ ಪಡೆದು ಪ್ರಾಣ ಕಳೆದುಕೊಂಡಿರುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಾವು ಕಚ್ಚಿದಾಗ ನಾಟಿ ಚಿಕಿತ್ಸೆ ಹಾಗೂ ಸಾಂಪ್ರದಾಯಿಕ ಔಷಧ ಪಡೆಯದಂತೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ನಾಟಿ ಔಷಧ ನೀಡುವವರಿಗೆ ಎಚ್ಚರಿಕೆ ನೀಡಲಾಗುತ್ತಿದ್ದು, ಪ್ರಕರಣ ದಾಖಲಿಸುವ ಬಗ್ಗೆಯೂ ಆಲೋಚಿಸುತ್ತಿದೆ.

‘ಬೆಳಗುತ್ತಿಯ ರೈತ ಹಾವು ಕಚ್ಚಿದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೆ ಖಂಡಿತ ಗುಣಮುಖರಾಗುತ್ತಿದ್ದರು. ನಾಟಿ ಔಷಧದ ನೆಪದಲ್ಲಿ ಸಾಕಷ್ಟು ಸಮಯ ವ್ಯರ್ಥ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆರುಂಡಿ ಗ್ರಾಮಕ್ಕೆ ಭೇಟಿ ನೀಡಿ ನಾಟಿ ಚಿಕಿತ್ಸಕರಿಗೆ ಎಚ್ಚರಿಕೆ ನೀಡಲಾಗಿದೆ. ಹೀಗೆ ನಾಟಿ ಔಷಧದಿಂದ ಗುಣಮುಖರಾದ ಚಿತ್ರದುರ್ಗ ಹಾಗೂ ಹರಪನಹಳ್ಳಿಯ ಇನ್ನೂ ಇಬ್ಬರು ದಾವಣಗೆರೆಯ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್‌.

ಹಾವು ಕಚ್ಚಿದಾಗ ನಾಟಿ ಚಿಕಿತ್ಸೆ ಪಡೆಯುವ ರೂಢಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಸಾಂಪ್ರದಾಯಿಕ ಔಷಧ ನೀಡುವವರ ಬಳಿಗೆ ಜನರು ಧಾವಿಸುತ್ತಾರೆ. ಈ ಪ್ರಕ್ರಿಯೆಯಿಂದ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ವಿಳಂಬವಾಗುತ್ತಿದೆ. ಹಾವು ಕಚ್ಚಿದ್ದನ್ನು ಘೋಷಿತ ಕಾಯಿಲೆ ಎಂದು ಪರಿಗಣಿಸಿದ ರಾಜ್ಯ ಸರ್ಕಾರ, ನಾಟಿ ಚಿಕಿತ್ಸೆಯಿಂದ ಆಗುತ್ತಿರುವ ತೊಂದರೆಯನ್ನು ಗುರುತಿಸಿದೆ. ಸಾವಿಗೆ ಕಾರಣರಾದ ನಾಟಿ ಚಿಕಿತ್ಸಕರ ವಿರುದ್ಧ ಪ್ರಕರಣ ದಾಖಲಿಸುವ ಸೂಚನೆ ನೀಡಿದೆ.

‘65 ಬಗೆಯ ಹಾವುಗಳಲ್ಲಿ ವಿಷ ಇರುವುದು 4 ಹಾವುಗಳಿಗೆ ಮಾತ್ರ. ನಾಗರ, ಕಟ್ಟು, ಮಂಡಲ ಹಾಗೂ ಕೊಳಕು ಮಂಡಲ ಹಾವುಗಳು ಮಾತ್ರ ವಿಷಪೂರಿತ. ಬಹುತೇಕ ಸಂದರ್ಭಗಳಲ್ಲಿ ವಿಷರಹಿತ ಹಾವು ಕಚ್ಚಿರುತ್ತವೆ. ಆಗ ನಾಟಿ ಚಿಕಿತ್ಸೆ, ಸಾಂಪ್ರದಾಯಿಕ ಔಷಧ ಫಲಕಾರಿ ಎಂಬ ಭಾವನೆ ಜನರಲ್ಲಿ ಮೂಡಿದೆ. ಆದರೆ, ವಿಷಪೂರಿತ ಹಾವು ಕಚ್ಚಿದಾಗ ಈ ಚಿಕಿತ್ಸೆ ಫಲಪ್ರದವಾಗದು’ ಎಂದು ಡಾ.ರಾಘವನ್‌ ಹೇಳುತ್ತಾರೆ.

ಹಾವು ಕಚ್ಚಿದ ವ್ಯಕ್ತಿಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆತರಬೇಕು. ಹಾವು ಕಡಿತಕ್ಕೆ ನೀಡಲಾಗುವ ‘ಆ‍್ಯಂಟಿ ಸ್ನೇಕ್‌ ವೇನಂ’ (ಎಎಸ್‌ವಿ) ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ
- ಡಾ.ಜಿ.ಡಿ. ರಾಘವನ್‌ ಜಿಲ್ಲಾ ಸರ್ವೇಕ್ಷಣಾಧಿಕಾರಿ ಆರೋಗ್ಯ ಇಲಾಖೆ

ಅಂಕಿ–ಅಂಶ ಹಾವು ಕಚ್ಚಿದ ಪ್ರಕರಣಗಳು

* 175 ಪ್ರಕರಣ 2023ರಲ್ಲಿ ವರದಿಯಾಗಿವೆ

* 759 ಹಾವು ಕಚ್ಚಿದ ಪ್ರಕರಣ 2024ರಲ್ಲಿ ದಾಖಲಾಗಿವೆ

* 426 ಹಾವು ಕಚ್ಚಿದ ಪ್ರಕರಣ 2025ರಲ್ಲಿ ದಾಖಲಾಗಿವೆ

* 3 ಹಾವು ಕಚ್ಚಿ ಮೃತಪಟ್ಟವರ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.