ಬಸವಾಪಟ್ಟಣ: ನಿತ್ಯದ ಅಡುಗೆಗೆ ಅವಶ್ಯವಾಗಿ ಬೇಕಾಗುವ ತೆಂಗಿನಕಾಯಿಯ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರು ಕೊಳ್ಳಲು ಹಿಂಜರಿಯುವಂತಾಗಿದೆ.
ಸಾಧಾರಣ ಗಾತ್ರದ ಕಾಯಿಗಳ ದರ ₹ 30ಕ್ಕೆ ಏರಿಕೆಯಾಗಿದ್ದರೆ, ದೊಡ್ಡ ಗಾತ್ರದ ಕಾಯಿಗಳು ₹ 40ರಿಂದ ₹ 45ರವರೆಗೆ ಮಾರಾಟವಾಗುತ್ತಿವೆ. ವಿವಿಧ ಕಾರ್ಯಕ್ರಮಗಳ ನಿಮಿತ್ತ ಅಡುಗೆಗೆ ಸಾಧಾರಣ ಗಾತ್ರದ ಕಾಯಿಗಳಿಗೆ ಭಾರಿ ಬೇಡಿಕೆ ಇದ್ದರೂ ದರ ಏರಿಕೆ ಕಾರಣದಿಂದ ಜನರಿಗೆ ತೆಂಗಿನಕಾಯಿ ಕೊಳ್ಳಲು ಆಗುತ್ತಿಲ್ಲ.
2023-24ನೇ ಸಾಲಿನಲ್ಲಿ ಮಳೆ ಕೊರತೆಯ ಕಾರಣದಿಂದ ತೆಂಗಿನ ಮರಗಳಿಗೆ ನೀರಿಲ್ಲದೇ ತೋಟಗಳು ಒಣಗಿದ್ದರಿಂದ ಫಸಲಿನ ಕೊರತೆ ಉಂಟಾಗಿತ್ತು. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಎಳೆನೀರಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬಹುಪಾಲು ತೆಂಗಿನ ಕಾಯಿಗಳನ್ನು ಎಳೆನೀರಿಗಾಗಿ ಕೀಳಲಾಗುತ್ತಿದೆ. ಪರಿಣಾಮವಾಗಿ ತೆಂಗಿನಕಾಯಿ ದರ ಹೆಚ್ಚಿದೆ ಎನ್ನಲಾಗಿದೆ.
‘ಗೋವಾ, ಮುಂಬೈ ಮತ್ತು ಪೂನಾದಲ್ಲಿ ಎಳನೀರಿಗೆ ಭಾರಿ ಬೇಡಿಕೆ ಇದ್ದು, ಐವರು ವ್ಯಾಪಾರಿಗಳು ಪ್ರತಿದಿನ ತಲಾ ₹ 5,000 ಎಳೆನೀರಿನ ಕಾಯಿಗಳನ್ನು ರಫ್ತು ಮಾಡುತ್ತಾರೆ. ರೈತರಿಂದ ಸಾವಿರ ಎಳನೀರನ್ನು ₹ 25,000ಕ್ಕೆ ಖರೀದಿಸಿ ರವಾನಿಸುತ್ತಿದ್ದೇವೆ. ಎಳೆನೀರಿನ ದರ ಈಗ ₹ 40ಕ್ಕೆ ಏರಿಕೆಯಾಗಿದೆ. ಮರಗಳಲ್ಲಿ ಬಲಿತ ಕಾಯಿಗಳೇ ಇಲ್ಲವಾಗಿವೆ. ಪೂರೈಕೆ ಕಡಿಮೆಯಾಗಿರುವುದರಿಂದ ಸಹಜವಾಗಿ ತೆಂಗಿನಕಾಯಿ ದರ ಏರಿಕೆಯಾಗಿದೆ’ ಎನ್ನುತ್ತಾರೆ ತೆಂಗಿನ ಸಗಟು ವ್ಯಾಪಾರಿ ಪಿ.ಅತಾವುಲ್ಲಾ.
‘ಚನ್ನಗಿರಿ ತಾಲ್ಲೂಕಿನಲ್ಲಿ ಪಸ್ತುತ ಕೇವಲ 85 ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆ ಇದೆ. ಒಂದೆಡೆ ಮಳೆ ಕೊರತೆಯಿಂದ ಫಸಲು ಕಡಿಮೆಯಾಗಿದ್ದರೆ, ಮತ್ತೊಂದೆಡೆ ರೈತರಿಗೆ ಕೈತುಂಬಾ ಹಣ ತರುವ ಅಡಿಕೆ ಬೆಳೆಯ ಮೇಲೆ ವ್ಯಾಮೋಹ ಹೆಚ್ಚಾಗಿದೆ. ತೆಂಗಿನ ತೋಟಗಳು ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿವೆ. ಇದರಿಂದಲೂ ತೆಂಗಿನ ಫಸಲಿನ ಕೊರತೆ ಉಂಟಾಗಿದೆ’ ಎನ್ನುತ್ತಾರೆ ತಾಲ್ಲೂಕು ತೋಟಗಾರಿಕೆ ಅಧಿಕಾರಿ ಸೌರಭ್.
‘ನಾನು ಚಿರಡೋಣಿಯಲ್ಲಿ ಐದು ವರ್ಷಗಳಿಂದ ತೆಂಗಿನಕಾಯಿಯ ಸಗಟು ವ್ಯಾಪಾರ ಮಾಡುತ್ತಿದ್ದೇನೆ. ಮಂಡ್ಯ, ಚನ್ನರಾಯಪಟ್ಟಣ, ಗಂಡಸಿ, ಕಡೂರು,, ಬೀರೂರು, ಅಜ್ಜಂಪುರಗಳಲ್ಲದೇ ತಮಿಳುನಾಡಿನ ಈರೋಡ್, ಮಧುರೈ, ಸತ್ಯಮಂಗಲಗಳಿಂದಲೂ ತೆಂಗಿನಕಾಯಿಗಳನ್ನು ಖರೀದಿಸಿ, ಸಗಟಾಗಿ ಮಹಾರಾಷ್ಟ್ರ ಗೋವಾಗಳಿಗೆ ಮಾರಾಟ ಮಾಡುತ್ತಿದ್ದೇನೆ. ಕಳೆದ ವರ್ಷ ಕ್ವಿಂಟಲ್‌ಗೆ ₹ 4,000 ದರ ಇತ್ತು. ಈಗ ಕ್ವಿಂಟಲ್‌ಗೆ ₹ 6,000ಕ್ಕೆ ಏರಿಕೆಯಾಗಿದೆ. ತೆಂಗಿನ ಪೂರೈಕೆ ಕಡಿಮೆಯಾಗಿರುವುದೇ ದರ ಏರಿಕೆಗೆ ಕಾರಣ’ ಎನ್ನುತ್ತಾರೆ ಚಿರಡೋಣಿಯ ಸಗಟು ತೆಂಗಿನ ವ್ಯಾಪಾರಿ ಕೆ.ಜಿ.ಕುಮಾರಸ್ವಾಮಿ.
ತೆಂಗಿನಕಾಯಿ ದುಬಾರಿಯಾಗಿರುವುದರಿಂದ ಗ್ರಾಹಕರಿಗೆ ಹೊರೆಯಾಗಿದೆ. ದರ ಕೇಳಿ ಬೇಡ ಎಂದು ಮುಂದಕ್ಕೆ ಹೋಗುವವರೇ ಹೆಚ್ಚು. ಇದರಿಂದ ತೆಂಗಿನಕಾಯಿ ಮಾರಾಟವೂ ಕಡಿಮೆಯಾಗಿದೆ. ಸಂಬಂಧಪಟ್ಟವರು ಸಮಸ್ಯೆ ಪರಿಹಾರಕ್ಕೆ ಗಮನಹರಿಸಬೇಕು ಎಂದು ಆಗ್ರಹಿಸುತ್ತಾರೆ ತೆಂಗನ ಚಿಲ್ಲರೆ ವ್ಯಾಪಾರಿ ಎಂ.ಹಾಲೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.