ADVERTISEMENT

ಹೋಬಳಿಗೊಂದು ಸರ್ಕಾರಿ ವಸತಿ ಶಾಲೆ

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 8:01 IST
Last Updated 2 ಡಿಸೆಂಬರ್ 2025, 8:01 IST
ಎಚ್.ಸಿ. ಮಹದೇವಪ್ಪ
ಎಚ್.ಸಿ. ಮಹದೇವಪ್ಪ   

ದಾವಣಗೆರೆ: ಸರ್ಕಾರಿ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ಹೋಬಳಿಗೊಂದು ವಸತಿ ಶಾಲೆ ತೆರೆಯಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಬಾಕಿ ಇರುವ 65 ಹೋಬಳಿಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ವಸತಿ ಶಾಲೆ ತೆರೆಯಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.

‘ಸಾಮಾನ್ಯ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ವಸತಿ ಶಾಲೆಗಳಲ್ಲಿ ಫಲಿತಾಂಶ ಉತ್ತಮವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 94ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಸಿಗುತ್ತಿದೆ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಶೇ 50ರಷ್ಟು ಸೀಟು ಹಂಚಿಕೆ ಮಾಡಲಾಗುತ್ತಿದೆ. ಅಲೆಮಾರಿ, ದೇವದಾಸಿ, ಚಿಂದಿ ಆಯುವ ಪಾಲಕರ ಮಕ್ಕಳಿಗೆ ಶೇ 10ರಷ್ಟು ಸೀಟು ಮೀಸಲಿಡಲಾಗುತ್ತದೆ. ಪರೀಕ್ಷೆ ಇಲ್ಲದೇ ಈ ವಿದ್ಯಾರ್ಥಿಗಳಿಗೆ ನೇರ ಪ್ರವೇಶ ಕಲ್ಪಿಸುವ ಆಲೋಚನೆ ಇದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಹಾಸ್ಟೆಲ್‌ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಮೊದಲೇ ನಿರ್ಧರಿಸಿದ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಹಾಜರಾತಿ, ಆಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಕಳಪೆ ಗುಣಮಟ್ಟದ ಆಹಾರ ವಿತರಿಸುವವರ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ’ ಎಂದು ಹೇಳಿದರು.

‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಂದಾಜು 5,000 ಹುದ್ದೆಗಳು ಖಾಲಿ ಇವೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಹೊಸ ಕಾಯಂ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಈ ಹಿಂದೆ ನಡೆದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಮಾತ್ರ ಅವಕಾಶವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Quote - ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಹೊರಗುತ್ತಿಗೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಮಾರ್ಗಸೂಚಿ ಪಾಲಿಸಲಾಗಿದ್ದು ಇಲಾಖೆಯಲ್ಲಿ ಸುಧಾರಣೆ ತರಲಾಗಿದೆ ಎಚ್‌.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

‘ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಭದ್ರ’ ‘ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಭದ್ರವಾಗಿದ್ದಾರೆ. ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದ್ದು ಅವರೇ ಮುಂದುವರಿಯುತ್ತಾರೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ತಿಳಿಸಿದರು. ‘ಸಚಿವ ಸಂಪುಟ ವಿಸ್ತರಣೆ ಅಧಿಕಾರ ಹಂಚಿಕೆಯಂತಹ ವಿಚಾರಗಳು ಕಾಂಗ್ರೆಸ್‌ ಮುಂದೆ ಇಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಒಟ್ಟಿಗೆ ಉಪಾಹಾರ ಸೇವಿಸಿ ಇಂತಹ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಸರ್ಕಾರವನ್ನು ಟೀಕಿಸಲು ವಿರೋಧ ಪಕ್ಷಗಳಿಗೆ ಯಾವುದೇ ವಿಚಾರಗಳಿಲ್ಲ. ರಾಜ್ಯದ ಜನರು ಕಾಂಗ್ರೆಸ್‌ಗೆ ಐದು ವರ್ಷ ಆಶೀರ್ವಾದ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.