ADVERTISEMENT

‘ಸೋಲಾರ್ ಡ್ರಯರ್‌ಗೆ ಹೆಚ್ಚಿದ ಬೇಡಿಕೆ’

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 5:09 IST
Last Updated 2 ನವೆಂಬರ್ 2021, 5:09 IST
ಸಂತೇಬೆನ್ನೂರು ಸಮೀಪದ ಹೊನ್ನೆಮರದಹಳ್ಳಿಯಲ್ಲಿ ಸೋಲಾರ್ ಡ್ರಯರ್ ಸಂಶೋಧಕ ಬಿ.ಆರ್. ರಘು ಅವರು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅಡಿಕೆ ಬೆಳೆಗಾರರಿಗೆ ನೇರ ಪ್ರದರ್ಶನ ನೀಡಿದರು.
ಸಂತೇಬೆನ್ನೂರು ಸಮೀಪದ ಹೊನ್ನೆಮರದಹಳ್ಳಿಯಲ್ಲಿ ಸೋಲಾರ್ ಡ್ರಯರ್ ಸಂಶೋಧಕ ಬಿ.ಆರ್. ರಘು ಅವರು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅಡಿಕೆ ಬೆಳೆಗಾರರಿಗೆ ನೇರ ಪ್ರದರ್ಶನ ನೀಡಿದರು.   

ಸಂತೇಬೆನ್ನೂರು: ಅಡಿಕೆ ಸೋಲಾರ್ ಡ್ರಯರ್‌ಗೆ ರಾಜ್ಯದ ವಿವಿಧ ಭಾಗಗಳ ಬೆಳೆಗಾರರಿಂದ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆಗೆ ಬಿಡುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಸಂಶೋಧಕ ಬಿ.ಆರ್. ರಘು ತಿಳಿಸಿದರು.

ಇಲ್ಲಿಗೆ ಸಮೀಪದ ಹೊನ್ನೆಮರದಹಳ್ಳಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ರೈತರಿಗೆ ಅಡಿಕೆ ಸೋಲಾರ್‌ ಡ್ರಯರ್‌ ಅನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಷ್ಕೃತ ಮಾದರಿಯ ಸೋಲಾರ್‌ ಡ್ರಯರ್‌ನಲ್ಲಿ ಸೂರ್ಯನ ಶಾಖ ಹಾಗೂ ವಿದ್ಯುತ್ ಎರಡರಿಂದಲೂ ಅಡಿಕೆ ಬೇಯಿಸುವ ಹಾಗೂ ಒಣಗಿಸುವ ಸೌಲಭ್ಯ ಕಲ್ಪಿಸಲಾಗಿದೆ. ಒಮ್ಮೆಗೆ ಮೂರೂವರೆ ಕ್ವಿಂಟಲ್ ಅಡಿಕೆ ಬೇಯಿಸುವ ಸಾಮರ್ಥ್ಯ ಕಲ್ಪಿಸಲಾಗಿದೆ. 100ರಿಂದ 130 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಕಾಯ್ದುಕೊಳ್ಳಲು ಸ್ವಯಂಚಾಲಿತ ನಿಯಂತ್ರಣ ಕಲ್ಪಿಸಲಾಗಿದೆ. ಸಾಗರ, ತೀರ್ಥಹಳ್ಳಿ, ಹುಬ್ಬಳ್ಳಿ, ಅರಕಲಗೂಡು ರೈತರು ತಂದಿದ್ದ ಹಸಿ ಅಡಿಕೆಯನ್ನು ಬೇಯಿಸುವ ಪ್ರಾತ್ಯಕ್ಷಿಕೆ ನೀಡಲಾಯಿತು ಎಂದು ಅವರು ವಿವರಿಸಿದರು.

ADVERTISEMENT

ಈಗಾಗಲೇ 250 ಸೋಲಾರ್ ಡ್ರಯರ್‌ಗಳಿಗೆ ಬೇಡಿಕೆ ಬಂದಿದೆ. ನವೆಂಬರ್ ಅಂತ್ಯದೊಳಗೆ ಹಂತ ಹಂತವಾಗಿ ಪೂರೈಕೆಗೆ ಸಿದ್ಧತೆ ನಡೆದಿದೆ. ಮೂರೂವರೆ ಕ್ವಿಂಟಲ್ ಸಾಮರ್ಥ್ಯದ ಸೊಲಾರ್ ಡ್ರಯರ್‌ಗೆ ₹ 75 ಸಾವಿರ ಖರ್ಚು ತಗುಲಿದೆ ಎಂದು ತಿಳಿಸಿದರು.

‘ಸಾಂಪ್ರದಾಯಿಕವಾಗಿ ಬೇಯಿಸಿದ ಹಾಗೂ ಸೋಲಾರ್ ಡ್ರಯರ್‌ನಲ್ಲಿ ಬೇಯಿಸಿದ ಅಡಿಕೆಗೆ ಯಾವುದೇ ವ್ಯತ್ಯಾಸ ಇಲ್ಲ. ರಘು ಅವರು ಸಂಶೋಧಿಸಿರುವ ಸೋಲಾರ್‌ ಡ್ರಯರ್‌ ವರದಾನವಾಗಿದೆ. ದುಬಾರಿ ಕೂಲಿ, ಸಮಯ, ಶ್ರಮದ ಉಳಿತಾಯವಾಗುವುದರಿಂದ ಅನು
ಕೂಲವಾಗಿದೆ’ ಎಂದು ಅರಕಲಗೂಡು ರೈತ ಲೋಕೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.