ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆ– ಮನೆಯಿಂದ ಕಸ ಸಂಗ್ರಹಿಸುವ ವಾಹನಗಳಿಗೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಉಪಕರಣ ಅಳವಡಿಸಲಾಗಿದ್ದು, ಕಣ್ಗಾವಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿ ಕಸದ ವಾಹನ ಸಂಚರಿಸುವ ನಿಖರ ಮಾಹಿತಿ ಸಾರ್ವಜನಿಕರಿಗೆ ಅಂಗೈಯಲ್ಲಿಯೇ ಲಭ್ಯವಾಗುತ್ತಿದೆ.
‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ಅನುಷ್ಠಾನಗೊಂಡಿರುವ ಈ ವ್ಯವಸ್ಥೆ ಕಸ ಸಂಗ್ರಹದಲ್ಲಿ ಸಾಕಷ್ಟು ಸುಧಾರಣೆ ತರುತ್ತಿದೆ. ‘ತ್ಯಾಜ್ಯ ಸಂಗ್ರಹಿಸುವ ವಾಹನ ಎಲ್ಲಿದೆ?’ ಎಂಬ ಮಾಹಿತಿಯನ್ನು ‘ಡಿವಿಜಿ ಹೆಲ್ಪ್’ ಆ್ಯಪ್ ಎರಡು ತಿಂಗಳಿಂದ ಸಾರ್ವಜನಿಕ ಒದಗಿಸುತ್ತಿದೆ.
ಮಹಾನಗರ ಪಾಲಿಕೆಯ 45 ವಾರ್ಡ್‌ಗಳ ವ್ಯಾಪ್ತಿಯಲ್ಲಿ ನಿತ್ಯ ಸರಾಸರಿ 170 ಟನ್ ಕಸ ಸಂಗ್ರಹವಾಗುತ್ತದೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕಸ ಸಂಗ್ರಹ ಹಾಗೂ ವಿಲೇವಾರಿ ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ 190 ವಾಹನಗಳು ಪಾಲಿಕೆಯಲ್ಲಿದ್ದು, 141 ವಾಹನಗಳು ಜಿಪಿಎಸ್ ಕಣ್ಗಾವಲು ವ್ಯವಸ್ಥೆಯಲ್ಲಿವೆ. ‘ಸ್ಮಾರ್ಟ್‌ಸಿಟಿ’ ಯೋಜನೆಯಿಂದ 120 ವಾಹನ ಹಾಗೂ ಪಾಲಿಕೆಯಿಂದ 21 ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಸಲಾಗಿದೆ.
‘ದಾವಣಗೆರೆ ಸ್ಮಾರ್ಟ್ ಸಿಟಿ’ಯ ಇನ್ಫರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ (ಐಸಿಟಿ) ಯೋಜನೆಯಡಿ ಈ ನೂತನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಪ್ರಯೋಗ ಸ್ಪಷ್ಟ ರೂಪ ಪಡೆದಿದೆ. ಕಸ ಸಂಗ್ರಹ ವ್ಯವಸ್ಥೆಯ ಮೇಲೆ ನಿಗಾ ಇಡುವುದು ಹಾಗೂ ಅದನ್ನು ಜನಸ್ನೇಹಿಯಾಗಿ ರೂಪಿಸುವ ಪ್ರಯತ್ನ ಸಫಲವಾಗಿದೆ. ವಾಹನ ಸಂಚಾರ, ಇಂಧನ ಬಳಕೆ, ಕಸ ಸಂಗ್ರಹ ಮತ್ತು ವಿಲೇವಾರಿಯಲ್ಲಿ ಸುಧಾರಣೆ ಕಂಡುಬರುತ್ತಿದೆ’ ಎಂದು ಮಹಾನಗರ ಪಾಲಿಕೆ ಮೂಲಗಳು ಹೇಳಿವೆ.
ಪ್ರತಿ ವಾರ್ಡ್‌ಗೆ ಒಂದರಿಂದ ಮೂರು ವಾಹನಗಳನ್ನು ಕಸ ಸಂಗ್ರಹಿಸಲು ನಿಯೋಜಿಸಲಾಗಿದೆ. ವಾಹನದ ಜೊತೆಗೆ ಪೌರಕಾರ್ಮಿಕರು ನಿತ್ಯ ಬೆಳಿಗ್ಗೆ 7ರಿಂದ ಈ ಕಾರ್ಯ ಆರಂಭಿಸುತ್ತಾರೆ. ವಾಹನದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಸ್ಪೀಕರ್ ಮೂಲಕ ಹಾಡು ಹಾಕಲಾಗುತ್ತದೆ. ಈ ಧ್ವನಿ ಕೇಳಿದ ಜನರು ಪಾಲಿಕೆಯ ವಾಹನದ ಬಳಿಗೆ ಬಂದು ಕಸ ಸುರಿಯುತ್ತಾರೆ. ಕೆಲವೊಮ್ಮೆ ನಿಗದಿತ ಸಮಯ, ಬೀದಿಗೆ ಪೌರಕಾರ್ಮಿಕರು ಬರುತ್ತಿರಲಿಲ್ಲ. ಕಸದ ವಾಹನಕ್ಕೆ ಕಾದು ಸುಸ್ತಾದ ಜನರು ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದರು.
ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪಾಲಿಕೆಯು ಕಸ ಸಂಗ್ರಹ ವಾಹನಗಳ ಮೇಲೆ ಕಣ್ಗಾವಲು ವ್ಯವಸ್ಥೆ ಅಭಿವೃದ್ಧಿಪಡಿಸಲು ಮುಂದಾಗಿತ್ತು. ‘ಸ್ಮಾರ್ಟ್‌ಸಿಟಿ’ ಇದಕ್ಕೆ ಕೈಜೋಡಿಸಿದ್ದರಿಂದ ಇದನ್ನು ಜನಸ್ನೇಹಿಯಾಗಿ ರೂಪಿಸಲು ಸಾಧ್ಯವಾಗಿದೆ. ಜಿಪಿಎಸ್ ಅಳವಡಿಸಿದ ವಾಹನಗಳನ್ನು ‘ಸ್ಮಾರ್ಟ್‌ಸಿಟಿ’ಯ ನಿಯಂತ್ರಣಾ ಕೇಂದ್ರದಿಂದ ನಿಗಾ ಇಡಲಾಗುತ್ತಿದೆ. ‘ಆ್ಯಪ್’ ಮೂಲಕ ಸಾರ್ವಜನಿಕರು ಕೂಡ ಕಸದ ವಾಹನ ಎಲ್ಲಿದೆ ಎಂಬುದನ್ನು ಅರಿಯುವುದು ಸುಲಭವಾಗಿದೆ.
ದಾವಣಗೆರೆಯ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನದಲ್ಲಿ ಅಳವಡಿಸಿರುವ ಜಿಪಿಎಸ್ ಉಪಕರಣ ತೋರಿಸಿ ಪೌರಕಾರ್ಮಿಕ
ಜಿಪಿಎಸ್ ಮೂಲಕ ವಾರ್ಡ್ ವ್ಯಾಪ್ತಿಯ ವಾಹನ ಸಂಚಾರದ ಮಾರ್ಗದಲ್ಲಿ ಜಿಯೊ ಫೆನ್ಸಿಂಗ್ ನಿರ್ಮಿಸಲಾಗಿದೆ. ಕಸ ಸಂಗ್ರಹಿಸುವ ವಾಹನ ಎಲ್ಲಿದೆ? ಎಷ್ಟು ಕಿ.ಮೀ. ವೇಗದಲ್ಲಿ ಸಾಗುತ್ತಿದೆ? ಯಾವ ಮಾರ್ಗದಲ್ಲಿ ಇದು ಸಂಚರಿಸಿದೆ? ಎಂಬ ಮಾಹಿತಿ ನಿಯಂತ್ರಣಾ ಕೇಂದ್ರಕ್ಕೆ ರವಾನೆಯಾಗುತ್ತದೆ. ಪಾಲಿಕೆಯಿಂದ ನಿಯೋಜಿತಗೊಂಡ ಸಿಬ್ಬಂದಿ ಈ ವಾಹನಗಳ ಚಲನವಲನಗಳನ್ನು ಗಮನಿಸುತ್ತಿದ್ದಾರೆ.
‘ವಾಹನವೊಂದು 30 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲುಗಡೆ ಮಾಡಿದರೆ ನಿಯಂತ್ರಣ ಕೇಂದ್ರಕ್ಕೆ ಸಂದೇಶ ರವಾನೆ ಆಗುತ್ತದೆ. ಸಂಬಂಧಿಸಿದ ವಾರ್ಡ್ ವ್ಯಾಪ್ತಿಯ ಆರೋಗ್ಯ ನಿರೀಕ್ಷಕರ ಮೊಬೈಲ್ ಸಂಖ್ಯೆಗೂ ಈ ಸಂದೇಶ ಹೋಗುತ್ತದೆ. ನಿಗದಿತ ಬೀದಿಯಲ್ಲಿ ಸಂಚರಿಸಿ ಕಸ ಸಂಗ್ರಹ ಮಾಡದಿದ್ದರೂ ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಸಿಬ್ಬಂದಿ ವಿನಾ ಕಾರಣ ಕಾಲಹರಣ ಮಾಡುವುದು ಹಾಗೂ ಕಚೇರಿಗೆ ತಪ್ಪು ಮಾಹಿತಿ ನೀಡಲು ಸಾಧ್ಯವಿಲ್ಲ’ ಎನ್ನುತ್ತಾರೆ ‘ಸ್ಮಾರ್ಟ್ ಸಿಟಿ’ ಲಿಮಿಟೆಡ್‌ನ ಡಿಜಿಎಂ ಮಮತಾ.
ಕಸ ಸಂಗ್ರಹಿಸಲು ವಾಹನ ಬಂದಿಲ್ಲವೆಂದು ಸಹಾಯವಾಣಿಗೆ ಬರುತ್ತಿದ್ದ ದೂರುಗಳ ಸಂಖ್ಯೆ ಕಡಿಮೆಯಾಗಿದೆ. ನಿಗಾ ವ್ಯವಸ್ಥೆ ಅಭಿವೃದ್ಧಿಪಡಿಸಿದ ಬಳಿಕ ಪೌರಕಾರ್ಮಿಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆರೇಣುಕಾ ಪಾಲಿಕೆ ಆಯುಕ್ತೆ ದಾವಣಗೆರೆ
‘ದಾವಣಗೆರೆ ಸ್ಮಾರ್ಟ್ ಸಿಟಿ’ ವತಿಯಿಂದ ಅಭಿವೃದ್ಧಿಪಡಿಸಿದ ‘ಡಿವಿಜಿ ಹೆಲ್ಪ್’ ಆ್ಯಪ್‌ನ್ನು ಸಾರ್ವಜನಿಕರು ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಕೊಂಡರೆ ಕಸ ಸಂಗ್ರಹ ವಾಹನದ ಮಾಹಿತಿಯನ್ನು ಅಂಗೈಯಲ್ಲೇ ಪಡೆಯಬಹುದಾಗಿದೆ. ‘ಆ್ಯಪ್‌ನ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಈ ಸೇವೆ ಪಡೆಯಬಹುದಾಗಿದೆ. ವಾರ್ಡ್ ಸಂಖ್ಯೆಯನ್ನು ನೀಡಿದರೆ ಸಮೀಪದಲ್ಲಿ ಕಸ ಸಂಗ್ರಹಿಸುವ ವಾಹನ ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ವಾಹನದ ದೂರ ಹಾಗೂ ಸಂಭಾವ್ಯ ಸಮಯ ಕೂಡ ಭಿತ್ತರವಾಗುತ್ತದೆ. ಈ ಸಮಯಕ್ಕೆ ಕಸವನ್ನು ಮನೆಯಿಂದ ಹೊರಗೆ ಇಟ್ಟರೆ ಸಾಕು’ ಎನ್ನುತ್ತಾರೆ ಮಹಾನಗರ ಪಾಲಿಕೆಯ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.