‘ಚಿನ್ನ’... ಈ ಪದ ಕಿವಿಗೆ ಬೀಳುತ್ತಲೇ ಬಹುತೇಕ ಲಲನೆಯರ ಕಣ್ಣರಳುತ್ತವೆ. ಮೃದು ಲೋಹ, ಹಳದಿ ಲೋಹ, ರಾಜಲೋಹವಾಗಿ ಜನಪ್ರಿಯವಾಗಿರುವ ‘ಕನಕ’ ಕಾಲ, ಗಡಿಗಳ ಮಿತಿಯಿಲ್ಲದೆ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.
‘ಬಂಗಾರ ಭಾರ’, ‘ಬಲು ದುಬಾರಿ’ ಎಂಬಂತಹ ಮಾತುಗಳನ್ನು ಒತ್ತಟ್ಟಿಗೆ ಸರಿಸಿ ಅದರ ಮೋಹಕ್ಕೆ ಒಳಗಾಗದವರಿಲ್ಲವೇನೋ! ಸೌಂದರ್ಯದ ಪ್ರತೀಕದಂತಿರುವ ಚಿನ್ನ ಈಗ ಧರಿಸಲಷ್ಟೇ ಬಳಕೆಯಾ ಗುತ್ತಿಲ್ಲ; ಹೂಡಿಕೆಯ ಉದ್ದೇಶಕ್ಕೆ ಜಗದಗಲ ತನ್ನ ಬಾಹುಗಳನ್ನು ವಿಸ್ತರಿಸಿದೆ. ಬಂಗಾರದ ಬೆಲೆ ಗಗನಕ್ಕೇರಿದರೂ ಅದನ್ನು ಕೊಳ್ಳುವವರ ಸಂಖ್ಯೆಯೇನೂ ಕ್ಷೀಣಗೊಂಡಿಲ್ಲ. ಬಂಗಾರ ಕೊಳ್ಳುವಿಕೆಗೂ ಒಂದು ದಿನ. ಅದೇ ‘ಅಕ್ಷಯ ತೃತೀಯ’ದ ಮುಹೂರ್ತ ಬಂದೇ ಬಿಟ್ಟಿತು. ಇದೇ 30ರಂದು ಬುಧವಾರ ಬಂಗಾರ ಕೊಳ್ಳುವವರಿಗೊಂದು ಹಬ್ಬವೇ. ಅಂದು ಬಂಗಾರ ಖರೀದಿಸಿ ತಂದರೆ ದ್ವಿಗುಣವಾಗುತ್ತದೆಂಬ ನಂಬಿಕೆ. ಈ ಕಾರಣದಿಂದಲೇ ಬಹುತೇಕರು ಅಂದು ಗುಲಗಂಜಿಯಷ್ಟಾದರೂ ‘ಚಿನ್ನ’ವನ್ನು ಆಸ್ಥೆಯಿಂದ ಖರೀದಿಸುತ್ತಾರೆ.
ಅದೃಷ್ಟ, ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ಹಬ್ಬದಂದು ಚಿನ್ನವನ್ನು ಖರೀದಿಸುವು ದಲ್ಲದೇ ಇತರೇ ವಸ್ತುಗಳನ್ನು ಖರೀದಿಸುವ ಪರಿಪಾಠ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಈ ದಿನ ಯಾವುದೇ ವಸ್ತು ಕೊಂಡರೂ ಶುಭವಾಗುತ್ತದೆ ಎನ್ನುವ ಅಚಲ ನಂಬಿಕೆ ಮತ್ತು ಸಂಪ್ರದಾಯ. ಬಹುತೇಕರು ಚಿನ್ನ ಖರೀದಿಸಿದರೆ ಇನ್ನು ಕೆಲವರು ಜಮೀನು, ನಿವೇಶನ ಖರೀದಿಸುವುದು, ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹಣ ಜಮಾ ಮಾಡುವುದು, ಇತರೆ ಕ್ಷೇತ್ರಗಳಲ್ಲಿ ಹಣ ಹೂಡು ವುದು, ಬಡವರಿಗೆ ದಾನದ ರೂಪದಲ್ಲಿ ವಸ್ತುಗಳನ್ನು ನೀಡುವುದು, ಹೊಸ ಕಾರ್ಯ ಆರಂಭಿಸುವುದು... ಹೀಗೆ ಹಲವು ಕಾರ್ಯಗಳಲ್ಲಿ ತೊಡಗುತ್ತಾರೆ.
ಲಕ್ಷ್ಮಿಯ ಪ್ರತೀಕವಾಗಿಯೂ ಅಕ್ಷಯ ತೃತೀಯ ಹಬ್ಬ ಆಚರಿಸುವುದರಿಂದ ಆ ದಿನ ಏನೇ ಕೆಲಸ ಕಾರ್ಯ ಕೈಗೊಂಡರೂ ಶುಭವೇ ಆಗುತ್ತದೆ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಹೂಡಿಕೆ ಮಾಡಿದ ಹಣ ತೊಂದರೆಗೆ ಸಿಲುಕುವುದಿಲ್ಲ. ಅದು ದ್ವಿಗುಣಗೊಳ್ಳುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂಬುದು ಜ್ಯೋತಿಷ ತಜ್ಞರ ಅಭಿಮತ.
‘ಪ್ರತಿ ವರ್ಷ ವೈಶಾಖ ಶುಕ್ಲ ಪಕ್ಷದ ತದಿಗೆ ತಿಥಿಯಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ತದಿಗೆ ತಿಥಿ ಜಯವನ್ನು ತಂದು ಕೊಡುತ್ತದೆ. ಅಲ್ಲದೇ ಈ ವರ್ಷ ಬುಧವಾರ ಈ ಹಬ್ಬ ಬಂದಿರುವುದು ಶುಭದಿನವನ್ನು ಇಮ್ಮಡಿಗೊಳಿಸಿದಂತಾಗಿದೆ. ಬುಧವಾರ ವಿಷ್ಣುವಿನ ದಿನವಾಗಿರುವುದರಿಂದ ಅತ್ಯುತ್ತಮ ದಿನ.
ತಾರೀಖಿನ ಸಂಖ್ಯೆಗಳನ್ನು ಲೆಕ್ಕ ಮಾಡಿದಾಗಲೂ (3+0+ 0+4+2+0+2+5) 16 ಅಂಕೆ ಬರುವುದರಿಂದ ಶುಭಕಾರ್ಯಗಳನ್ನು ಕೈಗೊಳ್ಳಲು ಅತ್ಯಂತ ಉತ್ಕೃಷ್ಟವಾದ ದಿನವಾಗಿದೆ. ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಬಂದಿರುವ ರೂಢಿ. ಈ ದಿನದಂದು ವಿಶೇಷ ಪೂಜೆ, ಪುನಸ್ಕಾರಗಳನ್ನು ಕೈಗೊಳ್ಳುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಜ್ಯೋತಿಷ್ಯ ವಿದ್ವಾಂಸ ಹಾಗೂ ವಾಸ್ತು ತಜ್ಞರಾದ ಸಿ.ಕೆ. ಆನಂದತೀರ್ಥಾಚಾರ್.
‘ಈ ದಿನ ಮನಸ್ಸನ್ನು ಕೇಂದ್ರೀಕೃತಗೊಳಿಸಿ ದೇವರನ್ನು ಧ್ಯಾನಿಸಿದರೆ ಮನಸು ಪ್ರಫುಲ್ಲಗೊ ಳ್ಳುತ್ತದೆ. ಈ ದಿನ ಕೈಗೊಳ್ಳುವ ಶುಭಕಾರ್ಯಗಳು, ದಾನಗಳು ಫಲಪ್ರದವನ್ನು ಕೊಡುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಬಂಗಾರ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಂಡರೂ, ಏನೇ ಕಾರ್ಯ ಕೈಗೊಂಡರೂ ಶುಭವಾಗುತ್ತದೆ’ ಎಂದು ಅವರು ಹೇಳುತ್ತಾರೆ.
ಗ್ರೆಗೋರಿಯನ್ ಕ್ಯಾಂಲೆಂಡರ್ ಪ್ರಕಾರ ಅಕ್ಷಯ ತೃತೀಯ ದಿನ ಸಾಮಾನ್ಯವಾಗಿ ಏಪ್ರಿಲ್– ಮೇ ತಿಂಗಳಲ್ಲಿ ಬರುತ್ತದೆ. ಈ ದಿನ ಸೂರ್ಯ– ಚಂದ್ರರು ಅತ್ಯಂತ ಪ್ರಕಾಶಮಾನವಾಗಿ ಕಾಣುತ್ತಾರೆ. ಇಬ್ಬರೂ ಗ್ರಹ ಸ್ಥಿತಿಯಲ್ಲಿ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುತ್ತಾರೆ. ಅಂದು ಹೆಚ್ಚಿನ ಬೆಳಕನ್ನು ಹೊರಸೂಸುತ್ತಾರೆ. ಶುಕ್ರ ಗ್ರಹವೂ ಪ್ರಕಾಶಮಾನವಾದ ಸ್ಥಾನದಲ್ಲಿರುತ್ತದೆ ಎನ್ನುತ್ತದೆ ಜ್ಯೋತಿಷ ಶಾಸ್ತ್ರ. ಆದ್ದರಿಂದ ಈ ದಿನ ಸಕಾರಾತ್ಮಕ ಹಾಗೂ ಸಮೃದ್ಧಿಯ ಅಲೆಯನ್ನು ಉತ್ತೇಜಿಸುವ ದಿನ ಎಂದು ನಂಬಲಾಗಿದೆ. ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಬೆಳಿಗ್ಗೆ ಸ್ನಾನದ ಮೂಲಕ ಶುಚಿಗೊಂಡು ಹೊಸ ಬಟ್ಟೆ ಧರಿಸಿ ವಿಶೇಷ ಪೂಜೆ ಮಾಡುತ್ತಾರೆ. ಕೆಲವರು ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡು ನದಿಗಳಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಮನೆಯಲ್ಲಿ ವಿಷ್ಣು, ಲಕ್ಷ್ಮಿ, ಗಣೇಶನ ವಿಗ್ರಹಗಳಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುತ್ತಾರೆ. ಕೆಲವರು ಕುಲದೇವರನ್ನು ಪೂಜಿಸಿ ವಿಶೇಷ ಪಾರ್ಥನೆ ಸಲ್ಲಿಸುತ್ತಾರೆ.
ಆಪತ್ಬಾಂಧವ ಬಂಗಾರ: ಹೂಡಿಕೆಯ ಉದ್ದೇಶ ಉಳ್ಳವರ ಮೊದಲ ಆಯ್ಕೆ ಭೂಮಿ ಹಾಗೂ ಬಂಗಾರ. ಇವೆರಡೂ ದಿನದಿನಕ್ಕೆ ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿವೆ. ಹೂಡಿದ ಬಂಡವಾಳವನ್ನು ದ್ವಿಗುಣಗೊಳಿಸುವ ಭೂಮಿ ಮತ್ತು ಬಂಗಾರದತ್ತಲೇ ಬಹುತೇಕರ ಚಿತ್ತ ನೆಟ್ಟಿರುತ್ತದೆ. ಈಗಂತೂ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಂಭವಿಸುವ ಕಾರಣ ಜಾಗತಿಕ ಮಟ್ಟದಲ್ಲಿ ಬಂಗಾರದ ಬೆಲೆ ಮೇಲ್ಮುಖವಾಗೇ ಸಾಗುತ್ತದೆ. ಈ ಕಾರಣಕ್ಕೂ ಬಂಗಾರದ ಮೇಲೆ ಹೂಡಿಕೆ ಮಾಡುವರ ಸಂಖ್ಯೆಯೂ ಹೆಚ್ಚುತ್ತಿದೆ.
‘ಬಂಗಾರ ಯಾವತ್ತಿಗೂ ಆಪತ್ಬಾಂಧವ ಇದ್ದಂತೆ. ಕುಟುಂಬದ ಆರ್ಥಿಕ ಸಂಕಷ್ಟ ಕಾಲದಲ್ಲಿ ಕೈಹಿಡಿಯುವುದು ಚಿನ್ನವೇ. ನಮ್ಮಲ್ಲಿ ಒಂದಷ್ಟು ಬಂಗಾರ ಜತೆಗಿದ್ದರೆ ವ್ಯಾಪಾರ, ವ್ಯವಹಾರ, ಉದ್ದಿಮೆ ನಡೆಸಲು ಧೈರ್ಯ ಮಾಡಬಹುದು. ಈ ಕಾರಣಕ್ಕೆ ಬಹುತೇಕರು ಬಂಗಾರವನ್ನು ಖರೀದಿಸುತ್ತಾರೆ. ಕುಟುಂಬದ ಆರ್ಥಿಕ ವ್ಯವಹಾರಗಳಿಗೆ ರಕ್ಷಣೆ ನೀಡುವ ಕೆಲಸವನ್ನೂ ಬಂಗಾರ ಮಾಡುತ್ತದೆ. ಅದರ ಮೌಲ್ಯವೂ ದ್ವಿಗುಣಗೊಳ್ಳುತ್ತಾ ಹೋಗುತ್ತಿದೆ. ಕಳೆದ ವರ್ಷ ಈ ದಿನಗಳಲ್ಲಿ 10 ಗ್ರಾಂಗೆ ₹ 65,000ದ ಆಸುಪಾಸಿನಲ್ಲಿದ್ದ ಚಿನ್ನದ ದರ ಈ ವರ್ಷ ಒಂದು ಲಕ್ಷದ ಗಡಿ ಸಮೀಪವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಳ್ಳುವವರ ಸಂಖ್ಯೆ ಕಡಿಮೆಯೇ. ಆದರೂ ಅಕ್ಷಯ ತೃತೀಯ ದಿನದಂದು ಗ್ರಾಹಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ದಾವಣಗೆರೆ ಮಂಡಿಪೇಟೆಯ ರವಿ ಜ್ಯುವೆಲ್ಲರ್ಸ್ ಮಾಲೀಕ ಜೆ.ರವಿಕುಮಾರ್.
ಭಾರತೀಯರೆಲ್ಲರಿಗೂ ಹಳದಿ ಲೋಹ ಬಂಗಾರದ ಮೇಲೆ ಮಮಕಾರ ಹೆಚ್ಚು. ಹಾಗಾಗಿ ಅಲ್ಪ ಸ್ವಲ್ಪ ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸಿದರೆ ಅದು ಅಕ್ಷಯವಾಗುವುದು ಅಂದರೆ ಪದೇ ಪದೇ ಕೊಳ್ಳುವ ಸೌಭಾಗ್ಯ ಬರುವುದು ಎಂಬ ನಂಬಿಕೆ ಬಹುತೇಕರದ್ದು. ಅಕ್ಷಯ ತೃತೀಯ ದಿನ ಸೂರ್ಯ ಉದಯದಿಂದ ಸೂರ್ಯಾಸ್ತದವರೆಗೂ ಬಂಗಾರ ಕೊಳ್ಳಲು ಉತ್ತಮ. ಆದರೂ ಬೆಳಗಿನ 7.30ರಿಂದ ರಾತ್ರಿ 9ರವರೆಗೆ ಶುಭ ಮುಹೂರ್ತವಿದೆ. ಈ ದಿನದಲ್ಲಿ ಮಧ್ಯಾಹ್ನ 12.20ರಿಂದ 1.54ರವರೆಗಿನ ಸಮಯ ಬಂಗಾರ ಕೊಳ್ಳಲು ಸೂಕ್ತ ಸಮಯ.
– ಸಿ.ಕೆ.ಆನಂದತೀರ್ಥಾಚಾರ್, ಜ್ಯೋತಿಷ ಕೋವಿದ ಹಾಗೂ ವಾಸ್ತು ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.