ದಾವಣಗೆರೆ: 2024–25ನೇ ಸಾಲಿನ ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ –1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ‘ಪರಿಹಾರ ಬೋಧನೆ’ ಹೆಸರಿನಡಿ ವಿಶೇಷ ತರಗತಿಗಳನ್ನು ಆರಂಭಿಸಿದೆ. ಆ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ –2 ಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ.
ಎಸ್‌ಎಸ್ಎಲ್‌ಸಿ ಪರೀಕ್ಷೆ –1ರಲ್ಲಿ ಜಿಲ್ಲೆಯಲ್ಲಿ 19,970 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 13,196 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 6,774 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. ಫೇಲ್ ಆದ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಸ್ಥೈರ್ಯ ತುಂಬಿ ಪರೀಕ್ಷೆ–2ರಲ್ಲಿ ಉತ್ತೀರ್ಣರಾಗಲು ಪೂರಕವಾದ ವಾತಾವರಣ ಸೃಷ್ಟಿಸಲಾಗುತ್ತಿದೆ.
ಮೇ 26ರಿಂದ ಜೂನ್ 2ರ ವರೆಗೆ ನಡೆಯಲಿರುವ ಪರೀಕ್ಷೆ–2ಗೆ ಈಗಾಗಲೇ 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ನೋಂದಣಿಗೆ ಮೇ 10 ಕೊನೆಯ ದಿನವಾಗಿದ್ದು, ಅನುತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಪರೀಕ್ಷೆ–2ಗೆ ನೋಂದಾಯಿಸಿಕೊಳ್ಳಲು ಶುಲ್ಕ ಪಾವತಿಯಿಂದ ವಿನಾಯಿತಿಯನ್ನೂ ನೀಡಿದೆ. ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ–1 ಫಲಿತಾಂಶ ಪ್ರಕಟಗೊಂಡ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ), ನೋಡಲ್ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪರೀಕ್ಷೆ–2ಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ, ಫಲಿತಾಂಶ ಸುಧಾರಣೆಗೆ ಕ್ರಮ ವಹಿಸುವಂತೆ ಸೂಚಿಸಿದ್ದರು.
ವಿಷಯವಾರು ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ವಿಂಗಡಿಸಿ ಆಯಾ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಬೇರೆ ಬೇರೆ ಶಾಲೆಗಳ ವಿಷಯವಾರು ಪರಿಣತ ಶಿಕ್ಷಕರನ್ನೂ ಬಳಸಿಕೊಳ್ಳಲಾಗುತ್ತಿದೆ.
ಶೂನ್ಯ ಫಲಿತಾಂಶ, ನೋಟಿಸ್ ಜಾರಿ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದ ಜಿಲ್ಲೆಯ 3 ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಡಿಡಿಪಿಐ ಸೂಚನೆಯಂತೆ ಇಲ್ಲಿನ ಭರತ್ ಕಾಲೊನಿಯ ನೇತಾಜಿ ಸುಭಾಷ್‌ಚಂದ್ರ ಬೋಸ್ ಹೈಸ್ಕೂಲ್, ಸರ್ವಮಂಗಳಮ್ಮ ಮಾಗನೂರು ಬಸಪ್ಪ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಹೊಸ ಬೆಳವನೂರಿನ ಹೊಯ್ಸಳ ರೆಷಿಡೆನ್ಷಿಯಲ್ ಹೈಸ್ಕೂಲ್‌ನ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ಆಯಾ ಬಿಇಒಗಳು ನೋಟಿಸ್ ಜಾರಿಗೊಳಿಸಿದ್ದಾರೆ.
ಪರೀಕ್ಷೆ–1ರಲ್ಲಿ ಜಿಲ್ಲೆಯು ಶೇ 66.08 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 21ನೇ ಸ್ಥಾನ ಪಡೆದಿತ್ತು. 2023–24ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಶೇ 74.28 ಫಲಿತಾಂಶ ಪಡೆಯುವ ಮೂಲಕ 23ನೇ ಸ್ಥಾನ ಪಡೆದಿತ್ತು. ಈ ಬಾರಿ 2 ಸ್ಥಾನ ಮೇಲಕ್ಕೆ ಜಿಗಿದು 21ನೇ ಸ್ಥಾನ ಪಡೆದಿದ್ದರೂ, ಶೇಕಡವಾರು ಫಲಿತಾಂಶದಲ್ಲಿ ಶೇ 8.2ರಷ್ಟು ಕುಸಿತ ಕಂಡಿತ್ತು.
ಶೇ 80ರಷ್ಟು ಶಾಲೆಗಳಲ್ಲಿ ‘ಪರಿಹಾರ ಬೋಧನೆ’ ವಿಶೇಷ ತರಗತಿ ನಡೆಸಲಾಗುತ್ತಿದೆ. ಇನ್ನುಳಿದ ಶಾಲೆಗಳಲ್ಲೂ ಆರಂಭಿಸಲು ಸೂಚಿಸಲಾಗಿದೆ. ಸುಲಭವಾಗಿ ಅಂಕ ಪಡೆಯುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ.–ಜಿ.ಎಸ್.ರಾಜಶೇಖರಪ್ಪ, ಪ್ರಭಾರ ಡಿಡಿಪಿಐ
21 ಕೇಂದ್ರಗಳಲ್ಲಿ ಪರೀಕ್ಷೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ –2ಗೆ ಭೌಗೋಳಿಕ ವ್ಯಾಪ್ತಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಜಿಲ್ಲೆಯಲ್ಲಿ 21 ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ 81 ಕೇಂದ್ರಗಳಲ್ಲಿ ವಾರ್ಷಿಕ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆ–1ರಂತೆ ಈ ಬಾರಿಯೂ ಸಿ.ಸಿ. ಟಿ.ವಿ ಕ್ಯಾಮೆರಾ ವೆಬ್ ಕಾಸ್ಟಿಂಗ್ ಇರಲಿದೆ. ಪರೀಕ್ಷೆ–2ರ ಫಲಿತಾಂಶ ಪ್ರಕಟವಾದ ಬಳಿಕ ಪರೀಕ್ಷೆ–3ಗೆ ಸಿದ್ಧತೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.