ADVERTISEMENT

ದಾವಣಗೆರೆ: ಹರಿಹರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ 

ದೇಶ ಸಮೃದ್ಧಿಯಾಗಲೆಂದು ಶಂಕರಾಚಾರ್ಯರ ಪುತ್ಥಳಿ ಅನಾವರಣ - ಜಿ.ಎಂ.ಸಿದ್ಧೇಶ್ವರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 3:44 IST
Last Updated 6 ನವೆಂಬರ್ 2021, 3:44 IST
ಹರಿಹರದ ಹರಿಹರೇಶ್ವರ ದೇವಾಲಯದಲ್ಲಿ ಶುಕ್ರವಾರ ನಡೆದ ಆದಿ ಶಂಕರಾಚಾರ್ಯರ ಸ್ಮರಣೆ ಕಾರ್ಯಕ್ರಮದಲ್ಲಿ ಶಿವನ ಕುರಿತ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು.
ಹರಿಹರದ ಹರಿಹರೇಶ್ವರ ದೇವಾಲಯದಲ್ಲಿ ಶುಕ್ರವಾರ ನಡೆದ ಆದಿ ಶಂಕರಾಚಾರ್ಯರ ಸ್ಮರಣೆ ಕಾರ್ಯಕ್ರಮದಲ್ಲಿ ಶಿವನ ಕುರಿತ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು.   

ಹರಿಹರ: ದೇಶದಲ್ಲಿ ಸುಖ, ಶಾಂತಿ ನೆಲಸುವುದರೊಂದಿಗೆ ಸಮೃದ್ಧಿಯಾಗಲೆಂದು ಪ್ರಧಾನಿ ನರೇಂದ್ರ ಮೋದಿಯವರು ಕೇದಾರನಾಥ ಪುಣ್ಯ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಪುತ್ಥಳಿ ಅನಾವರಣ ಮಾಡುತ್ತಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ಧೇಶ್ವರ ಹೇಳಿದರು.

ಇಲ್ಲಿನ ಹರಿಹರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಆದಿ ಶಂಕರರ ಪುತ್ಥಳಿ ಅನಾವರಣ ನೇರ ಪ್ರಸಾರ ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಗೋಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

’ದೇಶದಾದ್ಯಂತ ಜ್ಯೋತಿರ್ ಲಿಂಗಗಳಿರುವ ಕಡೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ಯದ 8ರಿಂದ 10 ಕಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಡೆಯೂ ಅಭಿಷೇಕ, ಶಿವಸ್ತುತಿ, ರುದ್ರಪಠಣ ಕಾರ್ಯಕ್ರಮಗಳಿದ್ದು, ಅದರಂತೆ ಹರಿಹರೇಶ್ವರ ಸ್ವಾಮಿಗೆ ಅಭಿಷೇಕ, ವಿಷೇಷ ಅಲಂಕಾರ ಪೂಜೆ ನೆರವೇರಿಸಲಾಗಿದೆ‘ ಎಂದು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ. ‘ಆದಿ ಶಂಕರಾಚಾರ್ಯರು ಭೇಟಿ ನೀಡಿದ್ದ ಸ್ಥಳಗಳಲ್ಲಿ ಹರಿಹರ ಕೂಡ ಒಂದಾಗಿದ್ದು, ಕೇಂದ್ರ ಸರ್ಕಾರ, ರಾಜ್ಯದ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನ ಹಾಗೂ ಕೇಂದ್ರ ಸಂಸ್ಕೃತಿ ಮಂತ್ರಾಲಯ, ಧಾರ್ಮಿಕ ದತ್ತಿ ನಿರ್ದೇಶನಾಲಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸೂಚನೆಯಂತೆ ದೇವಾಲಯದ ಆವರಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದರು.

ಬೆಳಗ್ಗೆ 5 ಗಂಟೆಗೆ ಹರಿಹರೇಶ್ವರ ಸ್ವಾಮಿಗೆ ಹೂವಿನ ಅಲಂಕಾರ, ಅಭಿಷೇಕ, ಮಂತ್ರ ಪಠಣ ಕಾರ್ಯಕ್ರಮಗಳು ನಡೆದವು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಶಿವಸ್ತುತಿ, ಅರ್ಧನಾರೀಶ್ವರ ಹಾಗೂ ಶಿವನ ಕುರಿತ ವಿವಿಧ ನೃತ್ಯ ರೂಪಕಗಳು ವೀಣಾವಾದನ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ರಾಮಪ್ಪ, ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.