ADVERTISEMENT

ಬಸವಾಪಟ್ಟಣ: ಅಡಿಕೆಯೊಂದಿಗೆ ನಳನಳಿಸಿದ ಸಾಂಬಾರ ಪದಾರ್ಥ

ಕಾರಿಗನೂರಿನ ರೈತ ಟಿ.ವಿ. ರುದ್ರೇಶ್‌ 30 ವರ್ಷಗಳಿಂದ ಕೃಷಿ

ಎನ್.ವಿ.ರಮೇಶ್
Published 17 ನವೆಂಬರ್ 2021, 2:52 IST
Last Updated 17 ನವೆಂಬರ್ 2021, 2:52 IST
ಬಸವಾಪಟ್ಟಣ ಸಮೀಪದ ಕಾರಿಗನೂರಿನ ರೈತ ಟಿ.ವಿ. ರುದ್ರೇಶ್‌ ಅವರ ತಮ್ಮ ಅಡಿಕೆ ತೋಟದಲ್ಲಿ ಬೆಳೆದಿರುವ ಕಪ್ಪು ಅರಿಸಿಣದ ಬೆಳೆ.
ಬಸವಾಪಟ್ಟಣ ಸಮೀಪದ ಕಾರಿಗನೂರಿನ ರೈತ ಟಿ.ವಿ. ರುದ್ರೇಶ್‌ ಅವರ ತಮ್ಮ ಅಡಿಕೆ ತೋಟದಲ್ಲಿ ಬೆಳೆದಿರುವ ಕಪ್ಪು ಅರಿಸಿಣದ ಬೆಳೆ.   

ಬಸವಾಪಟ್ಟಣ: ಸಮೀಪದ ಕಾರಿಗನೂರಿನ ರೈತ ಟಿ.ವಿ. ರುದ್ರೇಶ್‌ ಹಲವು ವರ್ಷಗಳಿಂದ ಅಡಿಕೆ ಬೆಳೆಯುತ್ತಿದ್ದಾರೆ. ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಅಡಿಕೆ ಫಸಲಿನಲ್ಲಿ ಬಹು ಬೆಳೆ ಪದ್ಧತಿ ಅನುಸರಿಸಿ ಮಾಡುತ್ತಿರುವ ಕೃಷಿ ಎಲ್ಲ ರೈತರಿಗೆ ಮಾದರಿಯಾಗಿದೆ.

‘ನಮ್ಮ ತಂದೆಯವರ ಕಾಲದಿಂದ ಎರಡು ಎಕರೆ ಭೂಮಿಯಲ್ಲಿ 30 ವರ್ಷಗಳ ಹಿಂದೆ ಅಡಿಕೆ ಬೆಳೆಯಲು ಆರಂಭಿಸಿದ್ದು, ಈಚೆಗೆ ಈ ಫಸಲಿನ ಮಧ್ಯದಲ್ಲಿ ಮೊದಲು ಕೋಕೋ, ಶುಂಠಿ, ಕಪ್ಪು ಅರಿಸಿಣ, ಹಳದಿ ಅರಿಸಿಣ, ಶತಾವರಿ ಸಸಿಗಳನ್ನು ಹಾಕತೊಡಗಿದೆ. ಕ್ರಮೇಣ ಲಾಭದಾಯಕ ಸಾಂಬಾರ ಬೆಳೆಗಳಾದ ಲವಂಗ, ಚಕ್ಕೆ, ಕಾಳುಮೆಣಸು, ಏಲಕ್ಕಿ ಗಿಡಗಳನ್ನು ಬೆಳೆಸಿದ್ದೇನೆ. ತೋಟದ ಅಂಚಿನಲ್ಲಿ ತೆಂಗು, ಮಾವು, ನಿಂಬೆ, ಪೇರಲ, ಹಲಸು, ಬೇಲದ ಹಣ್ಣು, ಬೆಣ್ಣೆ ಹಣ್ಣು ಬೆಳೆಯಲಾರಂಭಿಸಿದೆ. ಕೋಕೋ ಬೆಳೆ ಈಗ ಎರಡು ವರ್ಷಗಳಿಂದ ಕಟಾವಿಗೆ ಬಂದಿದೆ. ಪ್ರತಿ ವರ್ಷ ಎರಡು ಕ್ವಿಂಟಲ್‌ ಕೋಕೋ ಬೀಜ ಉತ್ಪಾದನೆಯಾಗುತ್ತಿದೆ. ಕ್ವಿಂಟಲ್‌ಗೆ ₹ 18 ಸಾವಿರದಿಂದ ₹ 20 ಸಾವಿರಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ತೆಂಗು, ಮಾವು ನಿಂಬೆಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರುತ್ತಿದ್ದೇನೆ. ಮಲೆನಾಡಿಗೆ ಸೀಮಿತವಾಗಿದ್ದ ಸಾಂಬಾರದ ಬೆಳೆಗಳನ್ನು ನಮ್ಮಲ್ಲಿಯೂ ಬೆಳೆಯಬಹುದು ಎಂಬುದು ಇಲ್ಲಿ ಸಾಬೀತಾಗಿದೆ’ ಎಂದು ರುದ್ರೇಶ್‌ ತಿಳಿಸಿದರು.

‘ಸಾವಯವ ಗೊಬ್ಬರವನ್ನು ಬಳಸುತ್ತಿರುವೆ. ‘ಮತ್ಸ್ಯ ಜನ್ಯ’ ಎಂಬ ಮೀನು ಗೊಬ್ಬರ ಮತ್ತು ಜೀವಾಮೃತಗಳನ್ನು ನಾನೇ ತಯಾರು ಮಾಡಿ ಉಪಯೋಗಿಸುತ್ತಿದ್ದೇನೆ. ಅಡಿಕೆ ಎಕರೆಗೆ 12 ರಿಂದ 14 ಕ್ವಿಂಟಲ್‌ ಇಳುವರಿ ಬರುತ್ತಿದೆ. ಕೃಷಿ ತಜ್ಞರು ಮತ್ತು ಕೃಷಿ ಅಧಿಕಾರಿಗಳ ಸಲಹೆ ಪಡೆಯುತ್ತಿದ್ದೇನೆ. ಶಿವಮೊಗ್ಗ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಕೃಷಿ ಮೇಳಗಳಿಗೆ ಭೇಟಿ ನೀಡಿ, ನಮ್ಮ ನೆಲದಲ್ಲಿ ಬೆಳೆಯಬಹುದಾದ ಲಾಭದಾಯಕ ಬೆಳೆಗಳ ಬಗ್ಗೆ ತಿಳಿಯುವುದು ನನ್ನ ಹವ್ಯಾಸ. ಇದರ ಫಲವಾಗಿ ನಾನು ಇಷ್ಟೆಲ್ಲ ಬೆಳೆಯಲು ಕಾರಣವಾಗಿದೆ. ನಮ್ಮ ಕಾರಿಗನೂರಿನಲ್ಲಿ ರೈತರೆಲ್ಲ ಸೇರಿ ಸ್ಥಾಪಿಸಿರುವ ‘ನೇಗಿಲಯೋಗಿ ಸಂಘ’ವು ಸೂಕ್ತ ಮಾರ್ಗದರ್ಶನ ನೀಡುತ್ತಿದೆ’ ಎನ್ನುತ್ತಾರೆ ರೈತ ರುದ್ರೇಶ್‌.

ADVERTISEMENT

‘ರುದ್ರೇಶ್‌ ಅವರು ಸಾವಯವ ಗೊಬ್ಬರವನ್ನು ಬಳಸಿರುವುದರೊಂದಿಗೆ ಅಡಿಕೆ ಬೆಳೆಯೊಂದಿಗೆ ಬಹು ಬೆಳೆ ಪದ್ಧತಿಯನ್ನು ಅನುಸರಿಸಿ ವಿವಿಧ ಬೆಳೆಗಳನ್ನು ಬೆಳೆದು ಉತ್ತಮ ಪ್ರತಿಫಲ ಪಡೆಯುತ್ತಿದ್ದಾರೆ. ತಾವು ಬೆಳೆದ ಭತ್ತವನ್ನು ಸಂಸ್ಕರಣೆ ಮಾಡಿ, ಸಾವಯವ ಅಕ್ಕಿಯನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ರೈತ ಸಮುದಾಯಕ್ಕೆ ಆದರ್ಶಪ್ರಾಯರಾಗಿದ್ದಾರೆ’ ಎಂದು ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಮಾರುತೇಶ್‌ ತಿಳಿಸಿದ್ದಾರೆ.

ಕಾರಿಗನೂರಿನ ಪ್ರಗತಿಪರ ರೈತ ಬಿ.ಟಿ. ರುದ್ರೇಶ್‌ ಅವರ ಕೃಷಿ ಸಾಧನೆಯನ್ನು ಮೆಚ್ಚಿ, ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಈಚೆಗೆ ಶಿವಮೊಗ್ಗದಲ್ಲಿ ನಡೆದ ಸಮಾರಂಭದಲ್ಲಿ ಈ ವರ್ಷದ ‘ಶ್ರೇಷ್ಠ ಪ್ರಗತಿಪರ ರೈತ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ದಾವಣಗೆರೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.