ADVERTISEMENT

ದಾವಣಗೆರೆ ಮಾದರಿಯಾಗಿಸುವ ಕನಸು: ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌

ಜನ್ಮದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:44 IST
Last Updated 23 ಸೆಪ್ಟೆಂಬರ್ 2025, 5:44 IST
   

ದಾವಣಗೆರೆ: ಅಭಿವೃದ್ಧಿಯಲ್ಲಿ ದಾವಣಗೆರೆ ಮಾದರಿಯನ್ನು ರೂಪಿಸಬೇಕು ಎಂಬುದು ನನ್ನ ಕನಸು. ಈ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತಿರುವೆ. ಕೃಷಿ, ನೀರಾವರಿ ಹಾಗೂ ಬಡವರ ಏಳಿಗೆಗೆ ಇನ್ನಷ್ಟು ಶ್ರಮಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಭರವಸೆ ನೀಡಿದರು.

ಇಲ್ಲಿನ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಹಾಗೂ ಎಸ್.ಎಸ್.ಎಂ. ಅಭಿಮಾನಿ ಬಳಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ ತಮ್ಮ 58ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘1994ರಲ್ಲಿ ರಾಜಕೀಯಕ್ಕೆ ಬಂದಾಗ ದಾವಣಗೆರೆ ಈಗಿನಂತೆ ಇರಲಿಲ್ಲ. ನಗರದ ಬಹುತೇಕ ಬೀದಿಗಳು ಕಾಂಕ್ರಿಟ್ ರಸ್ತೆಗಳಾಗಿ ಬದಲಾಗಿವೆ. 15 ಸಾವಿರಕ್ಕೂ ಅಧಿಕ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬೇತೂರು ಗ್ರಾಮದ ಮಾದರಿಯಲ್ಲಿ ಜಿಲ್ಲೆಯ ದೊಡ್ಡ ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಕುಡಿಯುವ ನೀರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದರು.

ADVERTISEMENT

‘ಮಲ್ಲಿಕಾರ್ಜುನ್ ಅವರದು ಹಾಲಿನಂತಹ ಮನಸು. ಎಲ್ಲರನ್ನು ಗೆಲ್ಲುವ ಶಕ್ತಿ ಅವರಿಗಿದೆ. ನನ್ನ ಯಶಸ್ಸಿನ ಹಿಂದೆ ಇರುವ ದೊಡ್ಡ ಶಕ್ತಿ ಪತಿಯೇ. ಸಚಿವರಾಗಿ ಜಿಲ್ಲೆಗೆ ಹಲವು ಕೊಡುಗೆ ಕೊಟ್ಟಿದ್ದಾರೆ. ನೀರಿನ ಬವಣೆ ನೀಗಿದ್ದು, ಗಾಜಿನ ಮನೆ, ಕುಂದವಾಡ ಕೆರೆ ಅಭಿವೃದ್ಧಿಪಡಿಸಿದ್ದಾರೆ. ಜಾತಿ–ಧರ್ಮ, ಮೇಲು–ಕೀಳು ಎಂಬ ಭಾವನೆ ಅವರಲ್ಲಿಲ್ಲ. ರಾಜಕೀಯ ಅಧಿಕಾರ ಇಲ್ಲದಿದ್ದಾಗಲೂ ಮಾನವೀಯತೆ ತೋರಿದ್ದಾರೆ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

‘ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಮಧ್ಯ ಕರ್ನಾಟಕಕ್ಕೆ ಬಂದರೆ ಉದ್ಯೋಗ ಸಿಗುತ್ತದೆ ಎಂಬುದು ಜನರ ಅಪೇಕ್ಷೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಲಾಗಿದ್ದು, ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಕೇಂದ್ರ ಶೀಘ್ರ ಕಾರ್ಯಾರಂಭವಾಗಲಿದೆ. ಐಟಿ ಕಂಪನಿಗಳು ದಾವಣಗೆರೆಗೆ ಬರುವ ಕಾಲ ಸನ್ನಿಹಿತವಾಗಿದೆ’ ಎಂದರು.

‘ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಹಲವು ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರ ಕೂಡ ಕಾರ್ಯಾರಂಭವಾಗಿದೆ. ಅಭಿವೃದ್ಧಿ ಹರಿಕಾರ, ಜನಾನುರಾಗಿ ಮಲ್ಲಿಕಾರ್ಜುನ್‌ ಅವರಿಗೆ ಹೆಚ್ಚಿನ ಅಧಿಕಾರ, ಸ್ಥಾನಗಳು ಸಿಗಲಿ’ ಎಂದರು.

‘ಜೈ ಜೈ ಮಲ್ಲಣ್ಣ’ ಹಾಡಿಗೆ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್‌, ಮಾಜಿ ಶಾಸಕ ರಾಮಪ್ಪ, ‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಉಪಾಧ್ಯಕ್ಷ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ಮಾಜಿ ಮೇಯರ್ ಕೆ.ಚಮನ್‌ ಸಾಬ್, ಕಾಂಗ್ರೆಸ್ ಮಹಿಳಾ ಘಟಕದ ಅನಿತಾ ಬಾಯಿ, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಮುದೇಗೌಡರ ಗಿರೀಶ್, ಎಸ್. ಮಲ್ಲಿಕಾರ್ಜುನ್‌, ಎ.ನಾಗರಾಜ್, ಗಡಿಗುಡಾಳ್ ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.