
ದಾವಣಗೆರೆ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪೋಷಕರ ಅನುಮತಿಯೊಂದಿಗೆ ಆಯ್ದ ಶಾಲೆಗಳಲ್ಲಿ ರಾತ್ರಿ ತರಗತಿ (ನೈಟ್ ಕ್ಲಾಸ್) ಆರಂಭಿಸಿದೆ.
ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಸರ್ಕಾರಿ ಉರ್ದು ಪ್ರೌಢಶಾಲೆ, ಕೆರೆಬಿಳಚಿ ಗ್ರಾಮಾಂತರ ಪ್ರೌಢಶಾಲೆ, ಕೆರೆಬಿಳಚಿ ಸಾಬಿರ ಪ್ರೌಢಶಾಲೆ ಸೇರಿದಂತೆ ಇನ್ನಿತರ ಶಾಲೆಗಳಲ್ಲಿ ಈಗಾಗಲೇ ರಾತ್ರಿ 8 ಗಂಟೆವರೆಗೂ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ.
ಚಳಿಯ ತೀವ್ರತೆ ಹೆಚ್ಚಾಗಿರುವ ಕಾರಣ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ರಾತ್ರಿ ತರಗತಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಸಂಕ್ರಾಂತಿ ಬಳಿಕ ಹೆಚ್ಚಿನ ಪ್ರೌಢಶಾಲೆಗಳಲ್ಲಿ ರಾತ್ರಿ ತರಗತಿಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
ಪಠ್ಯಾಧಾರಿತ ಮೌಲ್ಯಮಾಪನ, ಬೆಳಿಗ್ಗೆ 9ರಿಂದ 10ರ ವರೆಗೆ ವಿಶೇಷ ತರಗತಿ, ಸಂಜೆ 5.30ರಿಂದ 6.30ರ ವರೆಗೆ ಗುಂಪು ಅಧ್ಯಯನ, ಪ್ರತೀ ಪಾಠಕ್ಕೂ ಘಟಕ ಪರೀಕ್ಷೆಗಳನ್ನು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಪಠ್ಯ ಬೋಧನೆ (ಸಿಲಬಸ್) ಮುಗಿದಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ವಿಶೇಷ ತರಬೇತಿ (ಕೋಚಿಂಗ್) ನೀಡಲಾಗುತ್ತಿದೆ ಎನ್ನುತ್ತಾರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಜಿ.ಕೊಟ್ರೇಶ್.
‘4 ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಜನವರಿ 5ರಿಂದ 10ರ ವರೆಗೆ ಮೊದಲ ಪೂರ್ವಸಿದ್ಧತಾ ಪರೀಕ್ಷೆ ಮುಗಿದಿವೆ. ಜ.27ರಿಂದ ಫೆ.2ರ ವರೆಗೆ ಹಾಗೂ ಫೆ.23ರಿಂದ 28ರ ವರೆಗೆ ಕ್ರಮವಾಗಿ ಎರಡು ಮತ್ತು ಮೂರನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿವೆ. ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ‘ಶೈಕ್ಷಣಿಕ ದತ್ತು’ ನೀಡಿ ಉತ್ತೀರ್ಣರಾಗುವಂತೆ ಮಾಡುವ ಜವಾಬ್ದಾರಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ವೇಕಪ್ ಕಾಲ್: ಶಿಕ್ಷಕರು ಬೆಳಿಗ್ಗೆ 5 ಗಂಟೆಗೆ ವಿದ್ಯಾರ್ಥಿಗಳಿಗೆ ಕರೆ ಮಾಡಿ ಎಬ್ಬಿಸಿ, ಓದಿಕೊಳ್ಳಲು ಸೂಚಿಸುವಂತಹ ‘ವೇಕಪ್ ಕಾಲ್’ ಕಾರ್ಯಕ್ರಮವನ್ನೂ ಇಲಾಖೆಯಿಂದ ನಡೆಸಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊಬೈಲ್ ನೀಡದಂತೆ ಹಾಗೂ ಓದಿಕೊಳ್ಳುವಾಗ ಟಿ.ವಿ. ನೋಡದಂತೆ ಪೋಷಕರ ಮನವೊಲಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ.
ರಾತ್ರಿ ತರಗತಿ ಮುಗಿದಾಗ ವಿದ್ಯಾರ್ಥಿನಿಯರನ್ನು ಕರೆದೊಯ್ಯಲು ಪೋಷಕರು ಶಾಲೆಗೆ ಬರುತ್ತಾರೆ. ವಿದ್ಯಾರ್ಥಿನಿಯರ ಸುರಕ್ಷತೆ ಕಾಪಾಡಲು ಸಣ್ಣಪುಟ್ಟ ತೊಡಕುಗಳಿರುವ ಕಾರಣಕ್ಕೆ ಎಲ್ಲಾ ಪ್ರೌಢಶಾಲೆಗಳಲ್ಲೂ ರಾತ್ರಿ ತರಗತಿ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪೋಷಕರ ಸಹಕಾರ ಅತೀ ಅಗತ್ಯವಾಗಿದೆ ಎನ್ನುತ್ತಾರೆ ಶಿಕ್ಷಕರು.
‘2023ರಲ್ಲಿ ಜಿಲ್ಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ 90ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 15ನೇ ಸ್ಥಾನ ಗಳಿಸಿತ್ತು. 2024ರಲ್ಲಿ ಶೇ 74ರಷ್ಟು ಫಲಿತಾಂಶ ಪಡೆದು 23ನೇ ಸ್ಥಾನ ಪಡೆದಿತ್ತು. 2025ರಲ್ಲಿ ಶೇ 66ರಷ್ಟು ಫಲಿತಾಂಶ ಪಡೆದು 21ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಶೇ 100ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ’ ಎಂದು ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದರು.
‘ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಶೇ 95 96 97 ರಷ್ಟು ಫಲಿತಾಂಶ ಪಡೆಯುವ ವಿದ್ಯಾರ್ಥಿಗಳನ್ನು ಶೇ 100 ರಷ್ಟು ಫಲಿತಾಂಶ ಪಡೆಯುವಂತೆ ಸಜ್ಜುಗೊಳಿಸುವುದು ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಉತ್ತೀರ್ಣರಾಗುವಂತೆ ಮಾಡುವುದೇ ಇಲಾಖೆಯ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸ್ನೇಹಿ ವಾತಾವರಣ ರೂಪಿಸಲಾಗುತ್ತಿದೆ’ ಎಂದು ಹೇಳಿದರು.
ಚನ್ನಗಿರಿ ತಾಲ್ಲೂಕಿನಲ್ಲಿ 2 ವರ್ಷದ ಹಿಂದೆ ಆರಂಭಿಸಿದ ರಾತ್ರಿ ತರಗತಿಗಳಿಂದಾಗಿ ಫಲಿತಾಂಶ ಸುಧಾರಿಸಿದೆ. 2025ರಲ್ಲಿ ಜಿಲ್ಲೆಯಲ್ಲಿ ತಾಲ್ಲೂಕಿಗೆ 2ನೇ ಸ್ಥಾನ ಲಭಿಸಿತ್ತು. ಮತ್ತಷ್ಟು ಶಾಲೆಗಳಲ್ಲಿ ರಾತ್ರಿ ತರಗತಿ ನಡೆಸಲು ಕ್ರಮ ವಹಿಸಲಾಗುತ್ತಿದೆ–ಜಯಪ್ಪ ಎಲ್. ಬಿಇಒ, ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.