ADVERTISEMENT

ಎಸ್ಟಿ ಮೀಸಲಾತಿ| ವರದಿ ಬಂದ ತಕ್ಷಣ ಹೆಚ್ಚಳ : ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ವಾಲ್ಮೀಕಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 19:52 IST
Last Updated 9 ಫೆಬ್ರುವರಿ 2020, 19:52 IST
ಹರಿಹರದ ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಭಾನುವಾರ ನಡೆದ ಜನಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೀಡಿದರು. ಸಂಸದರಾದ ಜಿ.ಎಂ. ಸಿದ್ದೇಶ್ವರ, ವೈ. ದೇವೇಂದ್ರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಸತೀಶ ಜಾರಕಿಹೊಳಿ, ಎಸ್‌.ವಿ. ರಾಮಚಂದ್ರ ಇದ್ದರು.
ಹರಿಹರದ ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಭಾನುವಾರ ನಡೆದ ಜನಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೀಡಿದರು. ಸಂಸದರಾದ ಜಿ.ಎಂ. ಸಿದ್ದೇಶ್ವರ, ವೈ. ದೇವೇಂದ್ರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಸತೀಶ ಜಾರಕಿಹೊಳಿ, ಎಸ್‌.ವಿ. ರಾಮಚಂದ್ರ ಇದ್ದರು.   

ಹರಿಹರ: ‘ನ್ಯಾಯಮೂರ್ತಿ ನಾಗಮೋಹನದಾಸ್‌ ಅವರು ಜೂನ್‌ನಲ್ಲಿ ವರದಿ ನೀಡಲಿದ್ದಾರೆ. ವರದಿ ಬಂದ ತಕ್ಷಣ ಪರಿಶಿಷ್ಟ ಪಂಗಡಕ್ಕೆ ಹೆಚ್ಚಿಸಬೇಕಾದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ರಾಜನಹಳ್ಳಿಯಲ್ಲಿ ಎರಡನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಭಾನುವಾರ ನಡೆದ ಜನಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನ ಮೇಲೆ ಈ ಸಮುದಾಯ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಹುಸಿ ಮಾಡುವುದಿಲ್ಲ; ನಿಮಗೆ ದ್ರೋಹ ಬಗೆಯುವುದಿಲ್ಲ. ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ತೆರೆಯಬೇಕು ಎಂಬ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಮುಂಬರುವ ದಿನಗಳಲ್ಲಿ ಈಡೇರಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

ಪರಿವಾರ, ತಳವಾರ ಸಮುದಾಯವನ್ನು ಎಸ್‌.ಟಿ ಪಟ್ಟಿಗೆ ಸೇರ್ಪಡೆ ಮಾಡುವ ಕೆಲಸ 35 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಸೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದೇ ರೀತಿ ಎಸ್‌.ಸಿ, ಎಸ್‌.ಟಿ ಮೀಸಲಾತಿಯನ್ನು ಇನ್ನೂ 10 ವರ್ಷಕ್ಕೆ ಮುಂದುವರಿಸಲು ಪ್ರಧಾನಿ ಒಪ್ಪಿದ್ದಾರೆ ಎಂದು ಹೇಳಿದರು.

ಕಿತ್ತುಕೊಡಬೇಡಿ: ‘ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು. ಈ ಹೋರಾಟಕ್ಕೆ ನನ್ನ ಬೆಂಬಲ ಇದೆ. ಆದರೆ, ಇರುವುದರಲ್ಲಿಯೇ ಕಿತ್ತು ನೀಡುವುದಲ್ಲ. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಹೆಚ್ಚಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಹೋರಾಟದ ಜತೆಗಿರುವೆ: ‘ವಾಲ್ಮೀಕಿ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಲು ದೇವೇಗೌಡರು ಕಾರಣ. ನನ್ನ ಬಗ್ಗೆ ಸ್ವಾಮೀಜಿ ಟೀಕೆ ಮಾಡಿದರೆ ಅದನ್ನು ಆಶೀರ್ವಾದ ಎಂದು ತಿಳಿಯುವೆ. ನಿಮ್ಮ ಬಗ್ಗೆ ಅಭಿಮಾನ ಇದೆ. ನಿಮ್ಮ ಎಲ್ಲ ಹೋರಾಟದ ಜತೆ ನಾನಿರುವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಸಿದ್ದರಾಮಯ್ಯ ಬಂದು ಹೋದ ಮೇಲೆ ಯಡಿಯೂರಪ್ಪ, ಅವರು ನಿರ್ಗಮಿಸಿದ ಮೇಲೆ ಕುಮಾರಸ್ವಾಮಿ... ಹೀಗೆ ಸರತಿಯಂತೆ ಬಂದು ಭಾಷಣ ಮಾಡಿ ಹೋದರು. ಪರಸ್ಪರನ್ನು ಟೀಕಿಸುತ್ತಿರುವ ಈ ನಾಯಕರು ವೇದಿಕೆಯನ್ನು ಹಂಚಿಕೊಂಡಿಲ್ಲ. ಸಂಜೆ ವೇಳೆಗೆ ವಾಲ್ಮೀಕಿ ಸಮುದಾಯದವರಾದ ಚಿತ್ರನಟರಾದ ಸುದೀಪ್‌, ಶಶಿಕುಮಾರ್‌ ಸಹ ಬಂದು ಹೋದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯದ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಸಿಎಂ ಬಂದಾಗ ಕಾಣಿಸಿಕೊಳ್ಳದ ಶ್ರೀರಾಮುಲು

ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವ ಶ್ರೀರಾಮುಲು ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಬಂದಾಗ ವೇದಿಕೆ ಮೇಲೆ ಕಾಣಿಸಿಕೊಳ್ಳಲಿಲ್ಲ. ಡಿಸಿಎಂ ಸ್ಥಾನ ಕೈತಪ್ಪಿರುವುದಕ್ಕೆ ಮುನಿಸಿಕೊಂಡಿರುವ ಶ್ರೀರಾಮುಲು ಮುಖ್ಯಮಂತ್ರಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದವು.

ಸಿದ್ದರಾಮಯ್ಯ ಬಂದಾಗ ವೇದಿಕೆಗೆ ಕರೆ ತಂದಿದ್ದ ಶ್ರೀರಾಮುಲು, ಬಳಿಕ ಮುಖ್ಯಮಂತ್ರಿ ಬಂದಾಗ ನಾಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಯಿತು.

ಯಡಿಯೂರಪ್ಪ ಭಾಷಣ ಆರಂಭಿಸುತ್ತಿದ್ದಂತೆ, ‘ಉಪಮುಖ್ಯಮಂತ್ರಿ’ ಹೆಸರು ಘೋಷಿಸಿ ಜನ ಕೂಗಿದರು. ಆದರೆ, ಅದಕ್ಕೆ ಮುಖ್ಯಮಂತ್ರಿ ಕಿವಿಕೊಡಲಿಲ್ಲ.

ದೂರ ಉಳಿದ ವಚನಾನಂದ ಸ್ವಾಮೀಜಿ

‘ಹರ ಜಾತ್ರೆ’ಯಲ್ಲಿ ಪಂಚಮಸಾಲಿ ಸಮುದಾಯದವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ವಿವಾದಕ್ಕೆ ಒಳಗಾಗಿದ್ದ ವಚನಾನಂದ ಸ್ವಾಮೀಜಿ ಅವರೂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬಂದಾಗ ದೂರ ಉಳಿದರು.

ಬೆಳಿಗ್ಗೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದ ವಚನಾನಂದ ಸ್ವಾಮೀಜಿ, ಇನ್ನೇನು ಮುಖ್ಯಮಂತ್ರಿ ಬರುತ್ತಾರೆ ಎನ್ನುವಾಗ ನಿರ್ಗಮಿಸಿದರು. ಯಡಿಯೂರಪ್ಪ ಹೋದ ಬಳಿಕ ಮತ್ತೆ ವೇದಿಕೆ ಮೇಲೆ ಕಾಣಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.