ಬಸವಾಪಟ್ಟಣ ಸಮೀಪದ ಹೊಸಳ್ಳಿಯಲ್ಲಿರುವ ರಾಜ್ಯ ಉಗ್ರಾಣ ನಿಗಮಕ್ಕೆ ಸೇರಿದ 5,000 ಟನ್ ಸಾಮರ್ಥ್ಯದ ಬೃಹತ್ ಉಗ್ರಾಣ ಖಾಲಿ ಬಿದ್ದಿರುವುದು
ಬಸವಾಪಟ್ಟಣ: ಸಮೀಪದ ಹೊಸಳ್ಳಿ ಮತ್ತು ಸಾಗರಪೇಟೆ ಗ್ರಾಮಗಳಲ್ಲಿರುವ ರಾಜ್ಯ ಉಗ್ರಾಣ ನಿಗಮಕ್ಕೆ ಸೇರಿದ ಉಗ್ರಾಣಗಳಲ್ಲಿ ಈ ವರ್ಷವೂ ಧಾನ್ಯ ಖರೀದಿ ಕೇಂದ್ರ ಆರಂಭವಾಗದೇ ಅವು ಬಿಕೋ ಎನ್ನುತ್ತಿವೆ.
3,500 ಟನ್ ಸಾಮರ್ಥ್ಯದ ಸಾಗರಪೇಟೆ ಉಗ್ರಾಣವು 20 ವರ್ಷಗಳಿಂದ ಧಾನ್ಯ ಖರೀದಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇಲ್ಲಿನ ಪ್ರಮುಖ ಬೆಳೆ ಮೆಕ್ಕೆಜೋಳವನ್ನು ಖರೀದಿಸಿ ಸಂಗ್ರಹಿಸಲಾಗುತ್ತಿತ್ತು. ಉಗ್ರಾಣ ನಿಗಮವು ಆರು ವರ್ಷಗಳ ಹಿಂದೆ ಈ ಉಗ್ರಾಣದ ಹಿಂಭಾಗದಲ್ಲಿ 5,000 ಟನ್ ಸಾಮರ್ಥ್ಯದ ಮತ್ತೊಂದು ಉಗ್ರಾಣವನ್ನು ನಿರ್ಮಿಸಿತ್ತು. ಆದರೆ ಈವರೆಗೆ ಅದರ ಉದ್ಘಾಟನೆಯೂ ಆಗಿಲ್ಲ. ಯಾವುದೇ ಧವಸ ಧಾನ್ಯವನ್ನೂ ಸಂಗ್ರಹ ಮಾಡಿಲ್ಲ. ಎರಡೂ ಕಡೆಗಳಲ್ಲಿ ಖರೀದಿ ಪ್ರಕ್ರಿಯೆಯೂ ನಡೆಯುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಹೊಸ ಉಗ್ರಾಣಕ್ಕೆ ವಾಹನಗಳು ತೆರಳಲು ಸೂಕ್ತ ರಸ್ತೆ ಇಲ್ಲ. ಬಳಕೆಯಾಗದ್ದರಿಂದ ಕಟ್ಟಡ ಗೆದ್ದಲು ಹಿಡಿಯುತ್ತಿದೆ. ಎರಡೂ ಉಗ್ರಾಣಗಳನ್ನು ನೋಡಿಕೊಳ್ಳಲು ನಿಗಮವು ಒಬ್ಬ ಮೇಲ್ವಿಚಾರಕನನ್ನು ನೇಮಿಸಿತ್ತು. ಆದರೆ ಇಲ್ಲಿ ಅವರಿಗೆ ಕೆಲಸವಿಲ್ಲದ ಕಾರಣ, ಅವರು ದಾವಣಗೆರೆಯ ಉಗ್ರಾಣ ನಿಗಮದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಡಿ’ ದರ್ಜೆಯ ಹಂಗಾಮಿ ನೌಕರ ಮಾತ್ರ ಉಗ್ರಾಣಗಳ ನಿರ್ವಹಣೆ ಮಾಡುತ್ತಿದ್ದಾರೆ.
ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅಂದಾಜು 3,500 ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಈ ಉಗ್ರಾಣವನ್ನು ಸುತ್ತಲಿನ ರೈತರು ಬೆಳೆಯುವ ಭತ್ತ ಖರೀದಿಸುವ ಕೇಂದ್ರವಾಗಿ ಮಾಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ಅಧಿಕಾರಿಗಳ ಕಣ್ಣಿಗೆ ಈ ಉಗ್ರಾಣಗಳು ಬೀಳದಿರುವುದು ಅಚ್ಚರಿಯ ಸಂಗತಿ ಎನ್ನುತ್ತಾರೆ ರೈತರಾದ ಹಾಲೇಶಪ್ಪ ಮತ್ತು ನಾಗರಾಜಪ್ಪ.
ಬಸವಾಪಟ್ಟಣ ಹೋಬಳಿಯ ಹೊಸಳ್ಳಿಯಲ್ಲಿ ಕೃಷಿ ಇಲಾಖೆಗೆ ಸೇರಿದ ನಿವೇಶನದಲ್ಲಿ ಮಹಿಮ ಪಟೇಲ್ ಅವರು ಶಾಸಕರಾಗಿದ್ದಾಗ 5,000 ಟನ್ ಮತ್ತು 4,000 ಟನ್ ಸಾಮರ್ಥ್ಯದ ಎರಡು ಉಗ್ರಾಣಗಳನ್ನು ನಿರ್ಮಿಸಿದ್ದರು. ಎರಡು ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲಾಡಳಿತ ಖರೀದಿಸಿದ ರಾಗಿ ಸಂಗ್ರಹಕ್ಕೆ ಇವುಗಳನ್ನು ಒಮ್ಮೆ ಬಳಸಿಕೊಂಡಿರುವುದನ್ನು ಬಿಟ್ಟರೆ, ಮತ್ತೆ ಬಳಕೆಯಾಗಿಲ್ಲ. ನಂತರ ಯಾವ ಧಾನ್ಯಗಳನ್ನೂ ಸಂಗ್ರಹಿಸದೇ ಖಾಲಿ ಬಿಡಲಾಗಿದೆ. ಅವುಗಳನ್ನು ಏಕೆ ಬಳಸಿಕೊಳ್ಳುತ್ತಿಲ್ಲ ಎಂಬುದೇ ಒಂದು ಯಕ್ಷ ಪ್ರಶ್ನೆಯಾಗಿದೆ ಎನ್ನುತ್ತಾರೆ ಹೊಸಳ್ಳಿಯ ಗ್ರಾಮಸ್ಥರು.
ಸರ್ಕಾರ ಇಂತಹ ಬೃಹತ್ ಉಗ್ರಾಣಗಳನ್ನು ಖಾಲಿ ಬಿಡುವುದರ ಬದಲು ಅವುಗಳನ್ನು ಯಾವುದಾದರೂ ಉತ್ಪನ್ನಗಳ ಸಂಗ್ರಹಕ್ಕೆ ಬಳಸಿಕೊಳ್ಳಬಹುದು ಎನ್ನುತ್ತಾರೆ ಕಣಿವೆಬಿಳಚಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಅಣ್ಣೋಜಿರಾವ್.
‘ಜಿಲ್ಲಾಡಳಿತ ನಿರ್ಧರಿಸಲಿದೆ’
ಜಿಲ್ಲೆಯ ಯಾವ ಸ್ಥಳದಲ್ಲಿ ಈ ವರ್ಷ ಖರೀದಿ ಕೇಂದ್ರ ತೆರೆಯಬೇಕು ಯಾವ ಉಗ್ರಾಣಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಬೇಕು ಎಂಬುದನ್ನು ಜಿಲ್ಲಾಡಳಿತ ನಿರ್ಧರಿಸಲಿದೆ ಎಂದು ಉಗ್ರಾಣ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು. ‘ಜಿಲ್ಲಾಧಿಕಾರಿ ಆದೇಶದ ಮೇರೆಗೆ ಖರೀದಿ ಕೇಂದ್ರವನ್ನು ತೆರೆಯಲಾಗುತ್ತದೆ. ಅವರ ಆದೇಶದಂತೆ ನಾವು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಾಗಾಣಿಕೆಗೆ ಅನುಕೂಲವಾದ ಉಗ್ರಾಣಗಳನ್ನು ಮೊದಲು ಭರ್ತಿ ಮಾಡಿ ನಂತರ ಗ್ರಾಮಾಂತರ ಪ್ರದೇಶಗಳಲ್ಲಿರುವ ಉಗ್ರಾಣಗಳನ್ನು ಬಳಸಿಕೊಳ್ಳಲಾಗುತ್ತದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.