ADVERTISEMENT

ಆರೋಗ್ಯಯುತ ಆಹಾರ ಉತ್ಪಾದನೆಗೆ ರಸಗೊಬ್ಬರ ದೂರವಿಡಿ

ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಡಾ. ಪೆನ್ನೋಬಳಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 13:12 IST
Last Updated 12 ಅಕ್ಟೋಬರ್ 2019, 13:12 IST
ದಾವಣಗೆರೆಯಲ್ಲಿ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ಪದವಿ ಪ್ರಮಾಣ ಪತ್ರ ಪಡೆದ ಕೃಷಿ ಪರಿಕರ ಮಾರಾಟಗಾರು ಮತ್ತು ಅತಿಥಿಗಳು
ದಾವಣಗೆರೆಯಲ್ಲಿ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ಪದವಿ ಪ್ರಮಾಣ ಪತ್ರ ಪಡೆದ ಕೃಷಿ ಪರಿಕರ ಮಾರಾಟಗಾರು ಮತ್ತು ಅತಿಥಿಗಳು   

ದಾವಣಗೆರೆ: ಆರೋಗ್ಯಯುತ ಆಹಾರ ಉತ್ಪಾದನೆ ಮಾಡಬೇಕಿದ್ದರೆ ರೈತರು ರಸಗೊಬ್ಬರದಿಂದ ದೂರ ಇರಬೇಕು. ಹಸಿರೆಲೆ ಗೊಬ್ಬರದ ಕಡೆ ಗಮನಹರಿಸಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರಾಜ್ಯ ನೋಡಲ್‌ ಅಧಿಕಾರಿ ಡಾ. ಜಿ.ಆರ್‌. ಪೆನ್ನೋಬಳಸ್ವಾಮಿ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಸಮೇತಿ ದಕ್ಷಿಣ ವಲಯ), ಮ್ಯಾನೇಜ್‌ ಹೈದರಾಬಾದ್‌, ಕೃಷಿ ತಂತ್ರಜ್ಞರ ಸಂಸ್ಥೆ, ಪ್ರಾದೇಶಿಕ ಘಟಕ, ಕೃಷಿ ಇಲಾಖೆ ಆತ್ಮಯೋಜನೆ ವಿಭಾಗದಿಂದ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ಪದವಿ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ರಸಗೊಬ್ಬರ ಬಳಸಿದ್ದರಿಂದ ಮಣ್ಣು ಜೀವಸತ್ವವನ್ನೇ ಕಳೆದುಕೊಂಡಿದೆ. ಹಾಗಾಗಿ ಭೂಮಿಯಲ್ಲಿ ಕೃಷಿ ಉತ್ಪಾದನಾ ಶಕ್ತಿ ಕಡಿಮೆಯಾಗಿದೆ. ದನಕರುಗಳು ಕೂಡ ಕಡಿಮೆಯಾಗಿರುವುದರಿಂದ ಭೂಮಿಗೆ ಸಾವಯವ ಗೊಬ್ಬರ ನೀಡುವುದೂ ಕಡಿಮೆಯಾಗಿದೆ ಎಂದು ವಿಷಾದಿಸಿದರು.

ADVERTISEMENT

‘ಜಾನುವಾರು ಮತ್ತು ಕೃಷಿ ಎನ್ನುವುದು ಒಂದು ವೃತ್ತ ಇದ್ದಂತೆ ಗದ್ದೆಯಲ್ಲಿ ಭತ್ತ, ರಾಗಿ ಇನ್ನೇನಾದರೂ ಬೆಳೆದರೆ ಬೆಳೆ ಮನುಷ್ಯರಿಗಾಗುತ್ತದೆ. ಅದರ ಹುಲ್ಲು ಜಾನುವಾರಿಗೆ ಆಹಾರವಾಗುತ್ತದೆ. ಅವು ಹಾಕಿದ ಸೆಗಣಿ ಭೂಮಿಗೆ ಗೊಬ್ಬರವಾಗುತ್ತದೆ. ಆ ಗೊಬ್ಬರದ ಮೂಲಕ ಮತ್ತೆ ಬೆಳೆ ಬೆಳೆಯತ್ತಿದ್ದೆವು. ರಸಗೊಬ್ಬರದಿಂದ ಈ ವೃತ್ತ ಕೊಂಡಿ ತಪ್ಪಿದೆ’ ಎಂದರು.

‘ರಸಗೊಬ್ಬರ ಬಳಸಿ ಬೆಳೆದ ಆಹಾರವನ್ನು ಮಾರಾಟ ಮಾಡುತ್ತೇವೆ. ನಾವು ಬಳಸುವುದಿಲ್ಲ. ಹಾಗಾಗಿ ನಮಗೆ ತೊಂದರೆಯಾಗುವುದಿಲ್ಲ ಎಂದು ಬಹಳ ರೈತರು ತಿಳಿದುಕೊಂಡಿದ್ದಾರೆ. ಆದರೆ ಕೃಷಿಗೆ ರಸಗೊಬ್ಬರ ಬಳಸಿದ ರೈತರ ರಕ್ತದಲ್ಲಿಯೂ ಶೇ 30ರಷ್ಟು ವಿಷ ಇರುವುದು ಪತ್ತೆಯಾಗಿದೆ’ ಎಂದು ಎಚ್ಚರಿಸಿದರು.

ದೇಶದಲ್ಲಿ ಅತಿ ಹೆಚ್ಚು ತರಬೇತಿ ನೀಡಿದ ಜಿಲ್ಲೆ ಎಂದು ದಾವಣಗೆರೆಯನ್ನು ಗುರುತಿಸಲಾಗಿದೆ. ಇಲ್ಲಿ 16 ಬ್ಯಾಚ್‌ಗಳಿಗೆ ತರಬೇತಿ ನೀಡಲಾಗಿದೆ. ಒಂದು ಬ್ಯಾಚ್‌ಗೆ 40 ಮಂದಿಯಂತೆ 640 ಮಂದಿ ತರಬೇತಿ ಪಡೆದಿದ್ದಾರೆ. ದೇಶದಲ್ಲಿ ಒಟ್ಟು 250 ಕಾರ್ಯಕ್ರಮಗಳನ್ನು ಮಾಡಲಾಗಿದೆ. ಅದರಲ್ಲಿ 125 ಕರ್ನಾಟಕದಲ್ಲಿಯೇ ಆಗಿದೆ ಎಂಬುದು ರಾಜ್ಯದ ಹೆಮ್ಮೆ ಎಂದು ತಿಳಿಸಿದರು.

ಹಸಿರೆಲೆ ಗೊಬ್ಬರ ಬೀಜವನ್ನು ಮಾರಾಟ ಮಾಡಬೇಕು ಒಂದು ಎಕರೆಯಲ್ಲಿ ಹಸಿರೆಲೆ ಗೊಬ್ಬರ ತಯಾರಾದರೆ 30 ಟನ್‌ ಸಾವಯವ ಗೊಬ್ಬರ ಭೂಮಿಗೆ ಸೇರಿದಂತಾಗುತ್ತದೆ. ಆರೋಗ್ಯಯುತ ಆಹಾರ ಬೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.

ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ಡಾ. ಜಿ. ಈಶ್ವರಪ್ಪ, ‘ರೈತರಿಗೆ ಅನ್ಯಾಯ ಮಾಡದೇ ಒಳ್ಳೆಯ ಪರಿಕರಗಳನ್ನು ನೀಡಿ, ವಿಷ ರಹಿತ ಬೆಳೆ ಬೆಳೆಯಲು ಸಹಕಾರ ನೀಡುವುದಾಗಿ ಇವತ್ತು ಪ್ರಮಾಣ ಪತ್ರ ಸ್ವೀಕರಿಸಿದವರು ಪ್ರತಿಜ್ಞೆ ಮಾಡಬೇಕು. ಯಾವುದನ್ನೂ ಅತಿಗೆ ಒಯ್ಯಬಾರದು’ ಎಂದು ಎಚ್ಚರಿಕೆ ನೀಡಿದರು.

ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು ರೈತ–ಉತ್ಪದಕರ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ ರಾಜ್ಯದಲ್ಲಿ ಸುಮಾರು 350 ಸಂಸ್ಥೆಗಳಿವೆ. ಜಿಲ್ಲೆಯಲ್ಲಿ 5–6 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಜಿಲ್ಲೆಯಲ್ಲಿ ನೀರಿನ ದುರ್ಬಳಕೆ ಹೆಚ್ಚಾಗಿದೆ. ಭತ್ತ, ಅಡಿಕೆ, ಮೆಕ್ಕೆಜೋಳದ ಕಡೆಗೇ ಗಮನ ಜಾಸ್ತಿಯಾಗಿದೆ. ಉಳಿದ ಕೃಷಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಂತ್ರಜ್ಞರ ಸಂಸ್ಥೆಯ ಸಿರಿಯಣ್ಣ, ರಾಮಪ್ಪ, ಬಿ. ಉಮೇಶ್‌, ಬಿ.ಜಿ. ರುದ್ರಪ್ಪ, ಹುಲ್ಲತ್ತಿ, ಅಜಗಣ್ಣ, ರಾಜಶೇಖರ, ಚಂದ್ರು, ಪ್ರಭಾಶಂಕರ, ಲೋಕಿಕೆರೆ ನಾಗರಾಜ್‌ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಶ್ರೀಧರಮೂರ್ತಿ ಸ್ವಾಗತಿಸಿದರು. ಸುರೇಶ್‌ ಮಾಯಕೊಂಡ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.