ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ: ‘ವಿಷನ್‌ ಟಾಪ್‌ 5’ನತ್ತ ಹೆಜ್ಜೆ

ವಿನಾಯಕ ಭಟ್ಟ‌
Published 3 ಮೇ 2019, 7:31 IST
Last Updated 3 ಮೇ 2019, 7:31 IST
ಸಿ.ಆರ್‌. ಪರಮೇಶ್ವರಪ್ಪ
ಸಿ.ಆರ್‌. ಪರಮೇಶ್ವರಪ್ಪ   

ದಾವಣಗೆರೆ: ‘ವಿಷನ್‌ ಟಾಪ್‌ 10’ ಯೋಜನೆ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಿಸಿ ರಾಜ್ಯಕ್ಕೆ 9ನೇ ಸ್ಥಾನ (ಶೇ 85.94) ತರುವಲ್ಲಿ ಯಶಸ್ವಿಯಾದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಮುಂದಿನ ಶೈಕ್ಷಣಿಕ ಸಾಲಿಗೆ ‘ಮಿಷನ್‌ ಟಾಪ್‌ 5’ ಯೋಜನೆ ರೂಪಿಸಲು ಸಜ್ಜಾಗುತ್ತಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಚಿತ್ರದುರ್ಗದಿಂದ ಬೇರ್ಪಟ್ಟು ದಾವಣಗೆರೆ ಪ್ರತ್ಯೇಕ ಜಿಲ್ಲೆಯಾದ ಬಳಿಕ ಇದೇ ಮೊದಲ ಬಾರಿಗೆ 10 ಸ್ಥಾನದೊಳಗೆ ಜಿಲ್ಲೆ ಬಂದಿರುವುದಕ್ಕೆ ಅಧಿಕಾರಿಗಳು ಸಂಭ್ರಮದಿಂದ ಬೀಗುತ್ತಿದ್ದಾರೆ. ಮುಂದಿನ ಬಾರಿ ಫಲಿತಾಂಶವನ್ನು ಇನ್ನಷ್ಟು ಹೆಚ್ಚಿಸಲು ಉತ್ಸುಕರಾಗಿದ್ದಾರೆ.

ಶೇ 5 ಹೆಚ್ಚಳದ ಗುರಿ: ‘ಕಳೆದ ಸಾಲಿನಲ್ಲಿ ಜಿಲ್ಲೆಯು ಶೇ 81.56 ಫಲಿತಾಂಶದೊಂದಿಗೆ 15ನೇ ಸ್ಥಾನ ಪಡೆದಿತ್ತು. ಜಿಲ್ಲೆಯನ್ನು ಮೊದಲ ಹತ್ತು ಸ್ಥಾನದ ಒಳಗೆ ತರುವ ನಿಟ್ಟಿನಲ್ಲಿ ಒಟ್ಟಾರೆ ಫಲಿತಾಂಶವನ್ನು ಶೇ 90ರ ಗಡಿ ದಾಟಿಸುವ ಗುರಿ ಹೊಂದಲಾಗಿತ್ತು. ಇದಕ್ಕಾಗಿ ಪ್ರತಿ ಶಾಲೆಗೂ ಕಳೆದ ಸಾಲಿಗಿಂತಲೂ ಕನಿಷ್ಠ ಶೇ 5ರಷ್ಟು ಹೆಚ್ಚು ಫಲಿತಾಂಶ ಪಡೆಯುವ ವೈಯಕ್ತಿಕ ಗುರಿ ನಿಗದಿಪಡಿಸಲಾಗಿತ್ತು. ಬಹುತೇಕ ಶಾಲೆಗಳು ಈ ಸಾಧನೆ ಮಾಡಿವೆ. ಇದರ ಪರಿಣಾಮ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ 4.39 ಹೆಚ್ಚಳವಾಗಿದೆ’ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ ಬಳಿ ಸಂತಸ ಹಂಚಿಕೊಂಡರು.

ADVERTISEMENT

‘ಕಳೆದ ವರ್ಷ ಆಗಸ್ಟ್‌ನಲ್ಲಿ ಕ್ರಿಯಾಯೋಜನೆ ತಯಾರಿಸಿ ‘ಮಿಷನ್‌ ಟಾಪ್‌ 10’ ಗುರಿಯನ್ನು ನೀಡಲಾಗಿತ್ತು. ಈ ಬಾರಿ ಮಿಷನ್‌ ಟಾಪ್‌ 5 ಗುರಿಯೊಂದಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು. ಪ್ರಸಕ್ತ ಸಾಲಿನ ಫಲಿತಾಂಶವನ್ನು ವಿಷಯವಾರು, ಮಾಧ್ಯಮವಾರು; ಸರ್ಕಾರಿ–ಅನುದಾನಿತ–ಖಾಸಗಿ ಶಾಲೆವಾರು; ನಗರ–ಗ್ರಾಮೀಣವಾರು; ಗಂಡು–ಹೆಣ್ಣು ಹಾಗೂ ಎಸ್‌ಸಿ–ಎಸ್‌ಟಿ ಸೇರಿ ಎಲ್ಲಾ ವಿಭಾಗವಾರು ವಿಶ್ಲೇಷಣೆಗೆ ಒಳಪಡಿಸಲಾಗುವುದು. ಯಾವುದರಲ್ಲಿ ಕಡಿಮೆ ಫಲಿತಾಂಶ ಬಂದಿದೆ ಎಂಬುದನ್ನು ನೋಡಿ, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಮೇ ಕೊನೆಯ ವಾರದಲ್ಲಿ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ ಗುರಿ ಸಾಧಿಸಲು ಜೂನ್‌ನಿಂದಲೇ ಕಾರ್ಯತತ್ಪರರಾಗಲು ಸೂಚಿಸಲಾಗುವುದು’ ಎಂದು ಪರಮೇಶ್ವರಪ್ಪ ಮಾಹಿತಿ ನೀಡಿದರು.

ಕೈಹಿಡಿದ ಸರಣಿ ಪರೀಕ್ಷೆ

‘ಫಲಿತಾಂಶ ಹೆಚ್ಚಿಸಲು ನಾವು ನಡೆಸಿದ ಸರಣಿ ಪರೀಕ್ಷೆಗಳು ಫಲ ನೀಡಿವೆ. ಶಾಲಾ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸರಣಿ ಪರೀಕ್ಷೆಗಳನ್ನು ನಡೆಸಿದ್ದೆವು. ಯಾವ ವಿದ್ಯಾರ್ಥಿ ಯಾವ ಯಾವ ವಿಷಯಗಳಲ್ಲಿ ಅನುತ್ತೀರ್ಣಗೊಳ್ಳುತ್ತಿದ್ದಾನೆ ಎಂಬುದನ್ನು ಇದರಲ್ಲಿ ಗುರುತಿಸಿ, ಆ ವಿಷಯದ ಮೇಲೆ ವಿಶೇಷವಾಗಿ ಬೋಧನೆ ಮಾಡಲಾಗುತ್ತಿತ್ತು’ ಎಂದು ಪರಮೇಶ್ವರಪ್ಪ ಮೆಲುಕು ಹಾಕಿದರು.

‘ಸರಣಿ ಪರೀಕ್ಷೆ ನಡೆಸಿದಾಗ ಜಿಲ್ಲೆಯಲ್ಲಿ 4,500 ವಿದ್ಯಾರ್ಥಿಗಳು ಒಂದೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. ಅಂಥ ವಿದ್ಯಾರ್ಥಿಗಳಿಗೆ ಹೋಬಳಿವಾರು ವಿಜ್ಞಾನ, ಗಣಿತ, ಇಂಗ್ಲಿಷ್‌ ವಿಷಯಗಳಲ್ಲಿ ಮೂರು ದಿನಗಳ ಕಾಲ ವಿಶೇಷ ತರಗತಿ ನಡೆಸಲಾಗಿತ್ತು. ಅವರ ಪೈಕಿ ಸುಮಾರು 2,500 ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವುದು ಒಟ್ಟಾರೆ ಫಲಿತಾಂಶ ಹೆಚ್ಚಲು ಪ್ರಮುಖ ಕಾರಣವಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.