ADVERTISEMENT

ದಾವಣಗೆರೆ: ವಿದ್ಯಾರ್ಥಿಗಳ ಪ್ರಯಾಣ ಇನ್ನೂ ಅಸುರಕ್ಷಿತ

ಜಿ.ಬಿ.ನಾಗರಾಜ್
Published 21 ಜುಲೈ 2025, 3:56 IST
Last Updated 21 ಜುಲೈ 2025, 3:56 IST
<div class="paragraphs"><p>ದಾವಣಗೆರೆಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಆಟೊದಲ್ಲಿ ಸಾಗುತ್ತಿರುವ ಪರಿ </p></div>

ದಾವಣಗೆರೆಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಆಟೊದಲ್ಲಿ ಸಾಗುತ್ತಿರುವ ಪರಿ

   

–ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ದಾವಣಗೆರೆ: ಶಾಲೆ ಬಿಡುತ್ತಿದ್ದಂತೆ ರಸ್ತೆಗೆ ನುಗ್ಗುವ ವಿದ್ಯಾರ್ಥಿಗಳು. ಆಟೊದ ಫುಟ್‌ಬೋರ್ಡ್‌ನಲ್ಲಿ ನೇತಾಡುವ ಬಾಲಕರು. ಚಿಕ್ಕ ವಾಹನದಲ್ಲಿ ಉಸಿರುಗಟ್ಟುವ ಸ್ಥಿತಿಯಲ್ಲಿ ಕುಳಿತ ಚಿಣ್ಣರು. ಸ್ಪರ್ಧೆಗೆ ಬಿದ್ದಂತೆ ವೇಗವಾಗಿ ಚಲಿಸುವ ಶಾಲಾ ಬಸ್‌ಗಳು..

ADVERTISEMENT

ವಿದ್ಯಾರ್ಥಿಗಳು ಶಾಲೆ ಮತ್ತು ಮನೆಯ ನಡುವೆ ಸಂಚರಿಸುವಾಗ ಕಂಡ ದೃಶ್ಯಗಳಿವು. ನಿತ್ಯ ಬೆಳಿಗ್ಗೆ ಮತ್ತು ಸಂಜೆ ದಾವಣಗೆರೆ ನಗರದ ಯಾವುದೇ ಮೂಲೆಯಲ್ಲಿದ್ದರೂ ಇಂತಹ ದೃಶ್ಯಗಳು ಕಣ್ಣಿಗೆ ರಾಚುತ್ತವೆ. ಶಾಲಾ ವಾಹನ ಸುರಕ್ಷತೆಗೆ ಸುಪ್ರೀಂ ಕೋರ್ಟ್‌ ರೂಪಿಸಿದ ಮಾರ್ಗಸೂಚಿಗಳು ಜಿಲ್ಲೆಯಲ್ಲಿ ಪಾಲನೆ ಆಗುತ್ತಿರುವಂತೆ ಕಾಣುತ್ತಿಲ್ಲ.

ಶಿಕ್ಷಣ, ಶಾಲೆಯ ಆಯ್ಕೆಯ ವಿಚಾರದಲ್ಲಿ ಎಚ್ಚರಿಕೆ ವಹಿಸುವ ಪಾಲಕರು, ಮಕ್ಕಳ ಪ್ರಯಾಣಕ್ಕೆ ಅಷ್ಟೊಂದು ಕಾಳಜಿ ತೋರುತ್ತಿಲ್ಲ. ಕಟ್ಟಡ, ಕೊಠಡಿ, ಸ್ಮಾರ್ಟ್‌ ಕ್ಲಾಸ್‌ನಂತಹ ಮೂಲಸೌಲಭ್ಯ; ಬೋಧನೆ, ತೋರಿಕೆಯ ಶಿಸ್ತುಗಳಿಗೆ ಒತ್ತು ನೀಡುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಶಾಲಾ ವಾಹನಗಳ ವಿಚಾರದಲ್ಲಿ ನಿರ್ಲಕ್ಷ್ಯ ಮುಂದುವರಿಸಿವೆ. ಶಾಲಾ ವಾಹನ, ಆಟೊ, ಕ್ಯಾಬ್‌ಗಳ ವಿರುದ್ಧ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಸಿಬ್ಬಂದಿ ಆಗಾಗ ಕಾರ್ಯಾಚರಣೆ ನಡೆಸಿದರೂ ಸುಧಾರಣೆ ಮಾತ್ರ ಮರೀಚಿಕೆಯಾಗಿದೆ.

ದಾವಣಗೆರೆಯ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂದ ತುಂಬಿರುವ ವಾಹನ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ಜಿಲ್ಲೆಯಲ್ಲಿ ‌1,999 ಪ್ರಾಥಮಿಕ, ಪ್ರೌಢ ಶಾಲೆಗಳಿವೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2.61 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸಂತೇಬೆನ್ನೂರು ಹೊರತುಪಡಿಸಿ ಜಿಲ್ಲೆಯ ಯಾವುದೇ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ಬಹುತೇಕ ವಿದ್ಯಾರ್ಥಿಗಳು ವಾಹನ ಸೌಲಭ್ಯ ಹೊಂದಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರಿದ 761 ಶಾಲಾ ವಾಹನಗಳು ಜಿಲ್ಲೆಯಲ್ಲಿವೆ. ಆಟೊ, ಓಮ್ನಿ, ಕ್ಯಾಬ್‌ನಂತಹ ವಾಹನಗಳಲ್ಲಿ ಶಾಲೆಗೆ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ದೊಡ್ಡದಿದೆ.

ಶಾಲಾ ವಾಹನಗಳು ಹಳದಿ ಬಣ್ಣ ಹೊಂದಿರಬೇಕು. ವಾಹನದ ಎರಡೂ ಬದಿಯಲ್ಲಿ ಶಾಲೆಯ ಹೆಸರು ನಮೂದಿಸಬೇಕು. ವಾಹನದಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಬೇಕು. ಮಕ್ಕಳನ್ನು ಕರೆತರಲು ಹಾಗೂ ಮನೆಗೆ ತಲುಪಿಸಲು ವಾಹನದಲ್ಲಿ ಮಹಿಳಾ ಸಹಾಯಕಿಯರನ್ನು ನೇಮಕ ಮಾಡಿಕೊಳ್ಳಬೇಕು. ಚಾಲಕರು ಸನ್ನಡತೆಯ ಪ್ರಮಾಣ ಪತ್ರ ಹೊಂದಿರಬೇಕು ಎಂಬುದು ಸೇರಿದಂತೆ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹಲವು ಮಾರ್ಗಸೂಚಿಗಳನ್ನು ರೂಪಿಸಿ ದಶಕ ಕಳೆದಿದೆ. ಇವುಗಳಲ್ಲಿ ಪಾಲನೆಯಾಗುತ್ತಿರುವುದು ತೀರಾ ವಿರಳ.

ದಾವಣಗೆರೆಯ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂದ ತುಂಬಿರುವ ಆಟೊ –

ಶಾಲಾ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್‌ ಗವರ್ನರ್‌) ಅಳವಡಿಸುವುದು ಕೂಡ ಕಡ್ಡಾಯ. ಈ ವಾಹನಗಳು 40 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಸಾಗುವಂತಿಲ್ಲ. ಆಟೊ, ಕ್ಯಾಬ್‌ನಂತಹ ವಾಹನಗಳು ಶಾಲಾ ವಿದ್ಯಾರ್ಥಿಗಳಿಗೆ ಸೇವೆ ಒದಗಿಸುತ್ತಿದ್ದರೆ, ಅದಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ (ಆರ್‌ಟಿಒ) ಅನುಮತಿ ಪಡೆಯಬೇಕು. ಹೀಗೆ ಅನುಮತಿ ಪಡೆದ ವಾಹನಗಳ ಸಂಖ್ಯೆಯೂ ಕಡಿಮೆ ಇದೆ. ಪೊಲೀಸ್‌ ಠಾಣೆಯಿಂದ ಸನ್ನಡತೆಯ ಪ್ರಮಾಣ ಪತ್ರ ಪಡೆಯಲು ಚಾಲಕರು ಆಸಕ್ತಿ ತೋರುತ್ತಿಲ್ಲ.

‘ಶಾಲಾ ವಿದ್ಯಾರ್ಥಿಗಳಿಗೆ ಸೇವೆ ಒದಗಿಸುವ ವಾಹನಗಳ ಮಾಲೀಕರು ಹಾಗೂ ಚಾಲಕರ ಸಭೆ ನಡೆಸಲಾಗಿದೆ. ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಪಾಲಿಸುವಂತೆ ತಾಕೀತು ಮಾಡಲಾಗಿದೆ. ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬುವ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಶಾಲಾ– ಕಾಲೇಜು ಬಳಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.

ಆಟೊಗಳಲ್ಲಿ ಐದಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸುವಂತಿಲ್ಲ. ಬಹುತೇಕ ಎಲ್ಲ ಆಟೊಗಳಲ್ಲಿ ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಲಾಗುತ್ತಿದೆ. ಎಲ್‌ಪಿಜಿ, ಸಿಎನ್‌ಜಿ ಟ್ಯಾಂಕ್‌ ಮೇಲೆ ಕೂಡ ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತದೆ. ಶಾಲಾ ಬಾಲಕಿಯರು ವಾಹನಗಳ ಚಾಲಕರಿಂದಲೇ ದೌರ್ಜನ್ಯಕ್ಕೆ ಒಳಗಾಗಿರುವ ನಿದರ್ಶನಗಳಿವೆ. ಈ ದೌರ್ಜನ್ಯ ತಡೆಯುವ ಉದ್ದೇಶದಿಂದ ‘ಶಾಲಾ ವಾಹನ ಸುರಕ್ಷತಾ’ ಸಮಿತಿ ರಚಿಸಬೇಕು. ಜಿಲ್ಲೆಯ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಇಂತಹ ಸಮಿತಿ ಹೊಂದಿಲ್ಲ. ನೆಪಮಾತ್ರಕ್ಕೆ ಸಮಿತಿ ರಚಿಸಿದ್ದರೂ ನಿಯಮಿತವಾಗಿ ಸಭೆ ನಡೆಸುವುದಿಲ್ಲ. ಮಕ್ಕಳ ಮೇಲಿನ ದೌರ್ಜನ್ಯ ತಡೆಯುತ್ತಿಲ್ಲ.

ದಾವಣಗೆರೆಯ ಖಾಸಗಿ ಶಾಲೆಯ ಬಳಿ ಅಸುರಕ್ಷಿತವಾಗಿ ವಾಹನ ಏರುತ್ತಿರುವ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

‘ಪುತ್ರಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯ ವಾಹನ ಬಡಾವಣೆಗೆ ಬರುವುದಿಲ್ಲ. ಆಟೊದಲ್ಲಿ ಮಗನನ್ನು ಶಾಲೆಗೆ ಕಳುಹಿಸುತ್ತಿದ್ದೇವೆ. ಚಾಲಕರು ನಿಗದಿಗಿಂತ ಹೆಚ್ಚು ಮಕ್ಕಳನ್ನು ಆಟೊಗೆ ತುಂಬುತ್ತಿದ್ದಾರೆ. ಈ ಬಗ್ಗೆ ಆಗಾಗ ಪ್ರಶ್ನಿಸಿದರೂ ಚಾಲಕ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸಿದ್ಧವೀರಪ್ಪ ಬಡಾವಣೆಯ ಪುಷ್ಪ ಮನವಿ ಮಾಡುತ್ತಾರೆ.

ದಾವಣಗೆರೆಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳನ್ನು ವಾಹನಕ್ಕೆ ತುಂಬಿರುವ ಪರಿ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಶಾಲಾ ವಾಹನ ಸಂಚರಿಸುವ ಸಮಯದಲ್ಲಿ ಹೆಚ್ಚು ನಿಗಾ ಇಡಲಾಗಿದೆ. ನಿಯಮ ಪಾಲಿಸದಿರುವ ವಾಹನಗಳಿಗೆ ದಂಡ ವಿಧಿಸಲಾಗಿದೆ. ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ
ಉಮಾ ಪ್ರಶಾಂತ್‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡುವಂತೆ ನಿರ್ದೇಶನ ನೀಡಲಾಗಿದೆ. ತಪ್ಪಿದರೆ ಶಿಸ್ತುಕ್ರಮ ಜರುಗಿಸಲಾಗುವುದು
ಜಿ.ಕೊಟ್ರೇಶ್‌ ಡಿಡಿಪಿಐ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಸುರಕ್ಷತಾ ನಿಯಮ ಪಾಲಿಸದಿರುವ ಶಾಲಾ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆಟೊಗಳ ವಿರುದ್ಧ ಹೆಚ್ಚು ದೂರು ಬಂದಿದ್ದು ನಿತ್ಯ ಸರಾಸರಿ 15 ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ
ಎಚ್‌.ಎಸ್‌. ಭಗವಾನ್‌ ದಾಸ್‌ ಆರ್‌ಟಿಒ

ಖಾಸಗಿ ಶಾಲೆಗಳ ಅಸಹಕಾರ ಶಾಲಾ ವಾಹನಗಳ ಮೇಲೆ ನಿಗಾ ಇಡಲು ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ವತಿಯಿಂದ ‘ಸ್ಕೂಲ್‌ ಬಸ್‌’ ಎಂಬ ವ್ಯವಸ್ಥೆ ರೂಪಿಸಲಾಗಿದೆ. ‘ಡಿವಿಜಿ ಹೆಲ್ಪ್‌’ ಮೊಬೈಲ್‌ ಆ‍್ಯಪ್‌ನಲ್ಲಿ ಇದಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ಶಾಲಾ ವಾಹನಗಳಿಗೆ ಜಿಪಿಎಸ್‌ ಅಳವಡಿಸಿಕೊಂಡು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರಾಸಕ್ತಿ ತೋರಿವೆ.

‘ಡಿವಿಜಿ ಹೆಲ್ಪ್‌’ನಲ್ಲಿ ನೋಂದಣಿ ಮಾಡಿಕೊಂಡು ಜಿಪಿಎಸ್‌ ಅಳವಡಿಸಿದ ವಾಹನದ ಸಂಪೂರ್ಣ ವಿವರ ಅಂಗೈಯಲ್ಲಿ ಲಭ್ಯವಾಗಲಿದೆ. ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ನ ‘ಕಮಾಂಡ್‌ ಕಂಟ್ರೋಲ್‌ ಕೇಂದ್ರ’ವು ಈ ವಾಹನಗಳ ಮೇಲೆ ನಿಗಾ ಇಡುತ್ತದೆ. ಎರಡು ವರ್ಷದಲ್ಲಿ 4 ಖಾಸಗಿ ಶಿಕ್ಷಣ ಸಂಸ್ಥೆಗಳ 8 ಶಾಲಾ ವಾಹನಗಳು ಮಾತ್ರ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಬಹುತೇಕ ಖಾಸಗಿ ಶಾಲೆಗಳು ಅಸಹಕಾರ ತೋರಿವೆ. ‘ಸ್ಕೂಲ್‌ ಬಸ್‌’ ವ್ಯವಸ್ಥೆಗೆ ಸೇರಿದ ಖಾಸಗಿ ಶಿಕ್ಷಣ ಸಂಸ್ಥೆಯ ಹೆಸರು ವಾಹನದ ನೋಂದಣಿ ಸಂಖ್ಯೆ ಸೇರಿ ಇತರ ವಿವರಗಳು ‘ಆ‍್ಯಪ್‌’ನಲ್ಲಿ ಲಭ್ಯವಾಗುತ್ತವೆ.

ವಾಹನ ಸಂಚರಿಸುವ ಮಾರ್ಗ ನಿಲುಗಡೆ ಸ್ಥಳ ಸಮಯದ ನಿಖರ ಮಾಹಿತಿ ಸುಲಭವಾಗಿ ಸಿಗುತ್ತದೆ. ಪಾಲಕರು ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರೂ ಇದನ್ನು ವೀಕ್ಷಿಸಬಹುದಾಗಿದೆ. ‘ಸ್ಮಾರ್ಟ್‌ ಸಿಟಿ ಅಭಿವೃದ್ಧಿಪಡಿಸಿದ ಆ‍್ಯಪ್‌ ಅತ್ಯುತ್ತಮವಾಗಿದೆ. ಶಾಲಾ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಉಪಯುಕ್ತವಾಗಿದೆ. ವಾಹನಗಳಿಗೆ ಜಿಪಿಎಸ್‌ ಅಳವಡಿಸಿಕೊಂಡು ಆ‍್ಯಪ್‌ಗೆ ನೋಂದಣಿ ಮಾಡಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಬಹುತೇಕ ಖಾಸಗಿ ಶಾಲೆಗಳು ಈ ಸೂಚನೆಯನ್ನು ಉಪೇಕ್ಷೆ ಮಾಡಿವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಡಿಡಿಪಿಐ ಜಿ.ಕೊಟ್ರೇಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.