ADVERTISEMENT

ಕಂಚುಗಾರನಹಳ್ಳಿ: ಕೆಡವಿದ ಶಾಲೆ ಕಟ್ಟುತ್ತಿಲ್ಲ!

ತೆರವುಗೊಳಿಸಿ ವರ್ಷವಾದರೂ ನಿರ್ಮಾಣಕ್ಕೆ ಮುಂದಾಗದ ಸರ್ಕಾರ; ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

ಎನ್‌.ವಿ ರಮೇಶ್‌
Published 26 ಜೂನ್ 2025, 6:47 IST
Last Updated 26 ಜೂನ್ 2025, 6:47 IST
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯಲ್ಲಿ ತೆರವುಗೊಳಿಸಲಾದ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೇಶನದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಗ್ರಾಮಸ್ಥರು
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯಲ್ಲಿ ತೆರವುಗೊಳಿಸಲಾದ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೇಶನದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಗ್ರಾಮಸ್ಥರು   

ಬಸವಾಪಟ್ಟಣ: ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕಟ್ಟಡವನ್ನು ನೆಲಸಮಗೊಳಿಸಿ ವರ್ಷ ಕಳೆದರೂ ಕಟ್ಟಡ ಪುನರ್‌ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿರುವುದು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

‘2024ರ ಜೂನ್‌ನಲ್ಲಿ 87 ವರ್ಷ ಹಳೆಯದಾಗಿದ್ದ ಈ ಶಾಲೆಯ ಎಲ್ಲ ಕೊಠಡಿಗಳನ್ನು ನೆಲಸಮಗೊಳಿಸಲಾಗಿದೆ. ಪಾಠ ಪ್ರವಚನಕ್ಕೆ ಸ್ಥಳಾವಕಾಶವಿಲ್ಲದೆ ಶಾಲೆಯ ಸಮೀಪದ ಮರದ ಕೆಳಗೆ ಪಾಠ ಮಾಡುವ ಸ್ಥಿತಿ ಇದ್ದುದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಪ್ರೌಢಶಾಲೆಯ ನಾಲ್ಕು ಕೊಠಡಿಗಳಲ್ಲಿ ಪಾಠ ಮಾಡಲು ಸೂಚಿಸಿದ್ದರು. ಇದುವರೆಗೆ ನೂತನ ಕಟ್ಟಡ ನಿರ್ಮಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಹರೀಶ್‌ ದೂರಿದರು.

‘ಶಾಲೆ ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರಿಗೂ, ಇತರ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿದ್ದೇವೆ. ಅವರು ಶಾಲಾ ಕಟ್ಟಡ ನಿರ್ಮಿಸುವ ಭರವಸೆ ನೀಡುತ್ತಿದ್ದಾರೆಯೇ ವಿನಾ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಕೂಡಲೇ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದರು.

ADVERTISEMENT

1ರಿಂದ 7ನೇ ತರಗತಿವರೆಗೆ ಒಟ್ಟು 130 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಶಾಲೆ ಸಮೀಪ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯವಿದ್ದು, ಇಲ್ಲಿ 5ನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಆದರೆ, ಸ್ವಂತ ಕಟ್ಟಡವಿಲ್ಲದೆ ಕಿಷ್ಕಿಂದೆಯಂತಹ ಈ ಶಾಲೆಗೆ ಕಂಚುಗಾರನಹಳ್ಳಿ ಸೇರಿ ಸುತ್ತಲಿನ ಇತರ ಗ್ರಾಮಗಳ ಪಾಲಕರು ತಮ್ಮ ಮಕ್ಕಳನ್ನು ದಾಖಲಿಸಲು ಮುಂದೆ ಬರುತ್ತಿಲ್ಲ.

‘ಪ್ರೌಢಶಾಲೆಯ ಸಮೀಪದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡವನ್ನು ತೆರವುಗೊಳಿಸಿದಾಗ ತಾತ್ಕಾಲಿಕವಾಗಿ ಕೆಲ ಕೊಠಡಿಗಳನ್ನು ಬಳಸಿಕೊಳ್ಳಲು ಅವಕಾಶ ಕೊಡಿ ಎಂದು ಅಧಿಕಾರಿಗಳು ನೀಡಿದ ಮೌಖಿಕ ಆದೇಶದಂತೆ ಅವಕಾಶ ನೀಡಿದೆವು. ಆದರೆ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ನಿರಂತರ ಗಲಾಟೆಯಿಂದ ಪ್ರೌಢಶಾಲೆಯಲ್ಲಿ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ’ ಎಂದು ಸರ್ಕಾರಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಬಿ. ಸೈದೇಶ್‌ ದೂರಿದರು.

‘ಕುಡಿಯುವ ನೀರು, ಶೌಚಾಲಯ ಮತ್ತು ಶಾಲಾ ಆವರಣವನ್ನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಲಿನಗೊಳಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳಿಂದ ಉಂಟಾದ ಕಿರಿಕಿರಿಯಿಂದ ಕಳೆದ ವರ್ಷ ನಮ್ಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೀವ್ರ ಕುಸಿತ ಉಂಟಾಗಿದೆ. ಇದರಿಂದ ಪಾಲಕರು ಪ್ರೌಢಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸುವ ಬದಲಾಗಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈಗ ಮೂರೂ ತರಗತಿಗಳಿಂದ ಕೇವಲ 64 ವಿದ್ಯಾರ್ಥಿಗಳು ಇದ್ದಾರೆ. ಹೀಗಾದರೆ ಮುಂದೆ ನಮ್ಮ ಪ್ರೌಢಶಾಲೆ ಅಸ್ತಿತ್ವದಲ್ಲಿ ಉಳಿಯಲು ಹೇಗೆ ಸಾಧ್ಯ. ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ಈವರೆಗೆ ಯಾವ ಸಾರಿಗೆ ಬಸ್‌ ವ್ಯವಸ್ಥೆಯಾಗಲೀ, ದೂರವಾಣಿ ಸಂಪರ್ಕವಾಗಲೀ ಇಲ್ಲದಿರುವ ನಮ್ಮ ಗ್ರಾಮಕ್ಕೆ ಹಲವಾರು ವರ್ಷಗಳಿಂದ ಹೋರಾಟ ಮಾಡಿ ಇಲ್ಲಿಗೆ ಸರ್ಕಾರಿ ಪ್ರೌಢಶಾಲೆ ಮತ್ತು ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡಿದ್ದೆವು. ದಾವಣಗೆರೆ ಜಿಲ್ಲೆ ಅಲ್ಲದೇ ಇತರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವ್ಯಾಸಂಗ ಮಾಡುತ್ತಿದ್ದರು. ಆದರೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ, ಸಾರಿಗೆ ಸಂಪರ್ಕದ ವ್ಯವಸ್ಥೆಯ ಕೊರತೆ, ಎರಡೂ ಶಾಲೆಗಳಿಗೆ ವಿವಿಧ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿ ನಿಲಯಕ್ಕಾಗಲೀ, ಪ್ರೌಢಶಾಲೆಗಾಗಲೀ ವಿದ್ಯಾರ್ಥಿಗಳ ದಾಖಲಾತಿ ತುಂಬಾ ಕಡಿಮೆಯಾಗಿದೆ. ಸರ್ಕಾರ ಕೂಡಲೇ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಯುವ ಮುಖಂಡರಾದ ಕೆ.ಎಂ.ಸಿದ್ದೇಶ್‌, ಜಿ.ಎಂ.ಸಿದ್ದೇಶ್‌, ಮಾಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಟಿ. ಶಿವಕುಮಾರ್‌, ವೀರೇಶ್‌ ಹಾಗೂ ನಾಗಪ್ಪ ಒತ್ತಾಯಿಸಿದ್ದಾರೆ.

ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯಲ್ಲಿ ತೆರವುಗೊಳಿಸಲಾದ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೇಶನದಲ್ಲಿ ಪ್ರಾರ್ಥನೆಗೆ ನಿಂತ ವಿದ್ಯಾರ್ಥಿಗಳು
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ನಿರಂತರ ಗಲಾಟೆಯಿಂದ ಪ್ರೌಢಶಾಲೆಯಲ್ಲಿ ಪಾಠ– ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರ ಶೀಘ್ರ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು
ಎಚ್‌.ಬಿ. ಸೈದೇಶ್‌, ಅಧ್ಯಕ್ಷ , ಸರ್ಕಾರಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.