ADVERTISEMENT

ಗುಣಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಕಾತರ

ಹರಿಹರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಹಲವು ನ್ಯೂನತೆಗಳು

ಇನಾಯತ್ ಉಲ್ಲಾ ಟಿ.
Published 14 ಜನವರಿ 2023, 3:13 IST
Last Updated 14 ಜನವರಿ 2023, 3:13 IST
 ಹರಿಹರದ ಎಪಿಎಂಸಿ ಆವರಣದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾಲೇಜು.
 ಹರಿಹರದ ಎಪಿಎಂಸಿ ಆವರಣದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾಲೇಜು.   

ಹರಿಹರ: ಭವಿಷ್ಯದ ನಿಪುಣ ತಂತ್ರಜ್ಞರನ್ನು ಸಮಾಜಕ್ಕೆ ನೀಡುವ ಜವಾಬ್ದಾರಿ ಹೊತ್ತಿರುವ ಹರಿಹರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಲವು ನ್ಯೂನತೆಗಳಿಂದ ಬಳಲುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿದೆ.

2014ರಲ್ಲಿ ನಗರದ ಕೈಗಾರಿಕಾ ಪ್ರದೇಶದ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಕಾಲೇಜನ್ನು 2020ರಲ್ಲಿ ಎಪಿಎಂಸಿ ಆವರಣದಲ್ಲಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಆರಂಭದಲ್ಲಿ ಎಲೆಕ್ಟ್ರಿಕಲ್ ಮತ್ತು ಫಿಟ್ಟರ್ ವಿಭಾಗಗಳಿದ್ದವು. ಕಳೆದ ಶೈಕ್ಷಣಿಕ ಸಾಲಿನಿಂದ ಟಾಟಾ ಟೆಕ್ನಾಲಜೀಸ್ ಸಂಸ್ಥೆಯಿಂದ ಪ್ರತ್ಯೇಕ ಪ್ರಯೋಗಾಲಯ ಸ್ಥಾಪಿಸಿ, ಎಲೆಕ್ಟ್ರಿಕ್ ವೆಹಿಕಲ್ ಮೆಕಾನಿಕ್ ಮತ್ತು ಅಡ್ವಾನ್ಸ್ಡ್‌ ಸಿಎನ್‌ಸಿ ಆಪರೇಟರ್ ವಿಭಾಗಗಳನ್ನು ಆರಂಭಿಸಲಾಯಿತು. ಈ ನಾಲ್ಕು ವಿಭಾಗಗಳ ಎರಡು ವರ್ಷದ ವಿದ್ಯಾರ್ಥಿಗಳಿಗೆ 8 ತರಗತಿಗಳ ಅಗತ್ಯವಿದೆ. ಆದರೆ 6 ಕೊಠಡಿಗಳಿದ್ದು, ಇನ್ನೂ ಎರಡು ಕೊಠಡಿಗಳ ಕೊರತೆ ಇದೆ. ಆದಕಾರಣ ಪ್ರಯೋಗಾಲಯದಲ್ಲೇ ಪಾಠ, ಪ್ರವಚನ ನಡೆಯುತ್ತಿದೆ. ಇದರಿಂದಾಗಿ ಶಿಕ್ಷಕರು ಮುಕ್ತವಾಗಿ ಪಾಠ ಮಾಡಲು, ವಿದ್ಯಾರ್ಥಿಗಳು ತದೇಕಚಿತ್ತದಿಂದ ಪಾಠ ಆಲಿಸಲು ಸಾಧ್ಯವಾಗುತ್ತಿಲ್ಲ.

ADVERTISEMENT

ಕಾಲೇಜಿನ ಪ್ರಾಂಶುಪಾಲರು ಜಗಳೂರು, ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಸರ್ಕಾರಿ ಐಟಿಐ ಕಾಲೇಜುಗಳಲ್ಲೂ ನಿಯೋಜನೆ ಮೇರೆಗೆ ಸೇವೆ ಸಲ್ಲಿಸುತ್ತಿದ್ದು,
ವಾರದಲ್ಲಿ ತಲಾ ಎರಡು ದಿನಗಳಂತೆ ಮೂರು ಕಾಲೇಜಿಗಳಿಗೂ ತಡಕಾಡಬೇಕಿದೆ.

ಅತಿಥಿ, ನಿಯೋಜನೆಯ ಶಿಕ್ಷಕರು: ಇಲ್ಲಿ ಐವರು ತಾಂತ್ರಿಕ ಬೋಧಕರ ಹುದ್ದೆಗಳಿವೆ. ಈ ಪೈಕಿ ಇಬ್ಬರು ದಾವಣಗೆರೆ ಸರ್ಕಾರಿ ಐಟಿಐನಿಂದ ನಿಯೋಜನೆ ಮೇಲಿದ್ದಾರೆ. ಮೂವರು ಅತಿಥಿ ಬೋಧಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರಥಮ ದರ್ಜೆ ಸಹಾಯಕರೂ ಬೇರೆಡೆಯಿಂದ ನಿಯೋಜನೆಗೊಂಡಿದ್ದಾರೆ. ಕಾಲೇಜು ಕೊಠಡಿಗಳು, ಶೌಚಾಲಯ ಸ್ವಚ್ಛತೆಗೆ ಜವಾನರಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಕಾವಲುಗಾರನೇ ಸ್ವಚ್ಛತಾ ಕಾರ್ಯ ನಿರ್ವಹಿಸಬೇಕಾಗಿದೆ.

ಮಹಾನಗರಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಹಾಗೂ ಹೊರ ದೇಶಗಳಲ್ಲೂ ಉದ್ಯೋಗ ಕೊಡಿಸುವ ಉತ್ತಮವಾದ ವಿಭಾಗ (ಟ್ರೇಡ್) ಗಳಿದ್ದರೂ ಸಿಬ್ಬಂದಿ, ಕೊಠಡಿ ಕೊರತೆಯಿಂದ ಈ ಸಂಸ್ಥೆ ಬಳಲುತ್ತಿದೆ. ನಾಲ್ಕೂ ವಿಭಾಗಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

***

ಸಂಸ್ಥೆಯಲ್ಲಿನ ಕೊರತೆಗಳನ್ನು ನೀಗಿಸಲು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದ್ಯತೆ ಮೇರೆಗೆ ಎಲ್ಲ ಸೌಲಭ್ಯ ಸಿಗಲಿದೆ.

ಜಯಪ್ಪ ಎಂ., ಪ್ರಾಶುಪಾಲರು, ಐಟಿಐ, ಹರಿಹರ.

ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆ ಸಚಿವ ಡಾ.ಅಶ್ವತ್ಥ್ ನಾರಾಯಣ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಾಲೇಜಿನಲ್ಲಿರುವ ಕೊರತೆಗಳನ್ನು ನೀಗಿಸಲು ತುರ್ತು ಗಮನ ಹರಿಸಬೇಕು.

ಸಿದ್ದು ಉಪ್ಪಾರ್, ಎಬಿವಿಪಿ ಹರಿಹರ ಸಂಘಟನಾ ಕಾರ್ಯದರ್ಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.