ADVERTISEMENT

ಎಕರೆ ಭೂಮಿಯಲ್ಲಿ 100 ಟನ್ ಕಬ್ಬು ಬೆಳೆ: ರೈತ ಡಿ.ಎಚ್‌. ವೀರಕುಮಾರ್‌ ಸಾಧನೆ

ಬಸವಾಪಟ್ಟಣ ಹೋಬಳಿಯ ನಾಗರಸನಹಳ್ಳಿಯ ರೈತ ಡಿ.ಎಚ್‌. ವೀರಕುಮಾರ್‌ ಸಾಧನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 4:18 IST
Last Updated 8 ಜೂನ್ 2022, 4:18 IST
ಬಸವಾಪಟ್ಟಣ ಹೋಬಳಿಯ ನಾಗರಸನಹಳ್ಳಿಯ ರೈತ ಡಿ.ಎಚ್. ವೀರಕುಮಾರ್ ಬೆಳೆದಿರುವ ಕಬ್ಬಿನ ಬೆಳೆ.
ಬಸವಾಪಟ್ಟಣ ಹೋಬಳಿಯ ನಾಗರಸನಹಳ್ಳಿಯ ರೈತ ಡಿ.ಎಚ್. ವೀರಕುಮಾರ್ ಬೆಳೆದಿರುವ ಕಬ್ಬಿನ ಬೆಳೆ.   

- ಎನ್‌.ವಿ. ರಮೇಶ್‌

ಬಸವಾಪಟ್ಟಣ: ಚನ್ನಗಿರಿ ತಾಲ್ಲೂಕಿನ ಅಂಚಿನಲ್ಲಿರುವ ನಾಗರಸನಹಳ್ಳಿಯ ರೈತ ಡಿ.ಎಚ್‌. ವೀರಕುಮಾರ್‌ ಅವರು ಎಕರೆ ಭೂಮಿಯಲ್ಲಿ 100 ಟನ್‌ ಕಬ್ಬು ಬೆಳೆಯುವ ಮೂಲಕ ಗಮನಸೆಳೆದಿದ್ದಾರೆ.

ಭಾರತದ ಪುರಾತನ ಬೆಳೆಗಳಲ್ಲಿ ಒಂದಾದ ಕಬ್ಬಿನ ಬೆಳೆ ಸಕ್ಕರೆ, ಕಾಗದ ಮತ್ತು ಮದ್ಯ ತಯಾರಿಕೆಗೆ ಪ್ರಮುಖ ಕಚ್ಚಾವಸ್ತುವಾಗಿದೆ. ಸಕ್ಕರೆ ಕಾರ್ಖಾನೆಗಳ ಸುತ್ತಲಿನ ಪ್ರದೇಶಗಳಲ್ಲಿನ ರೈತರು ಕಬ್ಬನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ವೀರಕುಮಾರ್‌ ಅವರ ತಂದೆ ಹಾಲಪ್ಪನವರೂ ಕಬ್ಬನ್ನು ಬೆಳೆಯುತ್ತಿದ್ದರು. ಅಂದಿನಿಂದ ಇಂದಿನವರೆಗೂ ಎಕರೆ ಭೂಮಿಯಲ್ಲಿ 100 ಟನ್‌ ಇಳುವರಿ ಕಾಯ್ದುಕೊಂಡು ಬಂದಿರುವುದು ವಿಶೇಷ. ಕೆಲವೊಮ್ಮೆ 110 ಟನ್‌ ಇಳುವರಿ ಪಡೆದ ಉದಾಹರಣೆಗಳೂ ಇವೆ.

ADVERTISEMENT

‘ಕಬ್ಬು ವರ್ಷದ ಬೆಳೆ. ಗಂಗಾವತಿ, ಮಂಡ್ಯ, ಯುಶೇಡ್‌, 419 ಮುಂತಾದ ತಳಿಗಳನ್ನು ಇಲ್ಲಿ ಬೆಳೆಯತ್ತಿದ್ದೇವೆ. ಎಕರೆ ಭೂಮಿಗೆ ಒಂದೂವರೆ ಅಡಿ ಉದ್ದದ 12,000 ಕಬ್ಬಿನ ಜಲ್ಲೆಗಳನ್ನು ಮೂರೂವರೆ ಅಡಿ ಅಂತರದಲ್ಲಿ ನಾಟಿ ಮಾಡುತ್ತೇವೆ. ತಿಂಗಳಲ್ಲಿ ಕಬ್ಬು ಮೊಳಕೆಯೊಡೆಯುತ್ತದೆ. ಆ ಸಂದರ್ಭದಲ್ಲಿ ಎಕರೆಗೆ 50 ಕೆ.ಜಿ. ಯೂರಿಯ ಗೊಬ್ಬರ ನೀಡುತ್ತೇವೆ. ಒಮ್ಮೆ ಮಾತ್ರ ವೀಡರ್‌ನಿಂದ ಕಳೆ ತೆಗೆದು ಎಕರೆಗೆ ತಲಾ 50 ಕೆ.ಜಿ. ಪೊಟ್ಯಾಷ್‌, ಯೂರಿಯ ತಿಂಗಳ ನಂತರ 2.1/2 ಕ್ವಿಂಟಲ್‌ ಸಂಯುಕ್ತ ಗೊಬ್ಬರ ನೀಡುತ್ತೇವೆ. ಕೆಂಪು ಮತ್ತು ಮರಳು ಮಿಶ್ರಿತ ಭೂಮಿಯಲ್ಲಿ ಕಬ್ಬು ಚೆನ್ನಾಗಿ ಬೆಳೆಯುತ್ತದೆ’ ಎಂದು ಮಾಹಿತಿ ನೀಡುತ್ತಾರೆ ವೀರಕುಮಾರ್‌.

‘ಒಮ್ಮೆ ನಾಟಿ ಮಾಡಿದ ಕಬ್ಬನ್ನು ಮೊದಲ ಬಾರಿ ಕಟಾವು ಮಾಡಿದ ನಂತರ ಎರಡು ಬೆಳೆಯನ್ನು ಕೂಳೆ ಬೆಳೆಯನ್ನಾಗಿ ಬೆಳೆಯಬಹುದು. ಒಟ್ಟು ಮೂರು ಬೆಳೆಗಳಲ್ಲಿ ಒಂದನೇ ಮತ್ತು ಮೂರನೇ ಬೆಳೆಗಿಂತ ಎರಡನೇ ಬಾರಿಯ ಬೆಳೆ ಉತ್ತಮ ಇಳುವರಿ ನೀಡುತ್ತದೆ. ಕೆಲವರು ಹತ್ತಾರು ಬಾರಿ ಕೂಳೆ ಕಬ್ಬು ಬೆಳೆದ ಉದಾಹರಣೆ ಇದ್ದರೂ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ನಾವು ಮೂರನೇ ಬೆಳೆಯನ್ನು ಕಟಾವು ಮಾಡಿದ ನಂತರ ಸಂಪೂರ್ಣ ತೆಗೆದು ಮತ್ತೆ ಹೊಸದಾಗಿ ನಾಟಿ ಮಾಡುತ್ತೇವೆ’ ಎಂದು ವಿವರಿಸುತ್ತಾರೆ ಅವರು.

‘ಒಂದು ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲು ₹ 30 ಸಾವಿರ ವೆಚ್ಚವಾಗುತ್ತದೆ. ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುವುದಕ್ಕೆ ಎಕರೆಗೆ ₹ 55 ಸಾವಿರ ಖರ್ಚಾಗುತ್ತದೆ. ಈಗ ಕಾರ್ಖಾನೆಯವರು ಟನ್‌ ಕಬ್ಬಿಗೆ ₹ 2,800 ನೀಡುತ್ತಿದ್ದಾರೆ. ಕಟಾವು ಸೇರಿ ಎಕರೆಗೆ ಒಟ್ಟು ₹ 80 ಸಾವಿರ ಖರ್ಚು ಬಂದರೆ ಕನಿಷ್ಠ ₹ 2 ಲಕ್ಷ ನಿವ್ವಳ ಲಾಭವಿದೆ. ನಾವು ಸಮೀಪದ ಕುಕ್ಕುವಾಡದಲ್ಲಿರುವ ದಾವಣಗೆರೆ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಮಾರುತ್ತಿದ್ದೇವೆ. 12 ತಿಂಗಳಿಗೆ ಸರಿಯಾಗಿ ಕಾರ್ಖಾನೆಯವರು ಕಬ್ಬು ಕಡಿಯಲು ಅನುಮತಿ ನೀಡುತ್ತಿರುವುದರಿಂದ ಕಟಾವಿನ ಸಮಸ್ಯೆ ಆಗುತ್ತಿಲ್ಲ. ನಾನು ಮೂರು ಎಕರೆಯಲ್ಲಿ ಕಬ್ಬು, ಎರಡು ಎಕರೆಯಲ್ಲಿ ಅಡಿಕೆ ಹಾಗೂ ಎರಡು ಎಕರೆಯಲ್ಲಿ ಅರಿಶಿನ ಬೆಳೆಯುತ್ತಿದ್ದೇನೆ. ಕಾರಿಗನೂರಿನ ನೇಗಿಲಯೋಗಿ ಸಂಘವು ನಮಗೆ ಸಲಹೆ, ಸಹಕಾರ ನೀಡಿ ಕೃಷಿಗೆ ನೆರವಾಗುತ್ತಿದೆ’ ಎನ್ನುತ್ತಾರೆ ರೈತ ವೀರಕುಮಾರ್‌.

ಆಧುನಿಕ ಪದ್ಧತಿ ಅನುಸರಿಸುತ್ತಿರುವ ರೈತರು

ಚನ್ನಗಿರಿ ತಾಲ್ಲೂಕಿನ ಭೂಮಿಯಲ್ಲಿ ಎಕರೆಗೆ ಸರಾಸರಿ 70ರಿಂದ 80 ಟನ್‌ ಇಳುವರಿ ಬರುತ್ತಿದೆ. ಕುಕ್ಕುವಾಡದ ಸುತ್ತಲಿನ ರೈತರು ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇವರು ಆಧುನಿಕ ಕೃಷಿಗೆ ಹೊಂದಿಕೊಂಡಿದ್ದು, ಈಗ ಬಹುಪಾಲು ರೈತರು ಅಡಿಕೆ ಬೆಳೆಯ ಕಡೆಗೆ ವಾಲುತ್ತಿರುವುದರಿಂದ ಕಬ್ಬಿನ ಬೆಳೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ತ್ಯಾವಣಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಡಿ.ಎಂ. ರಂಗಸ್ವಾಮಿ

******

ಟನ್‌ ಕಬ್ಬಿಗೆ ₹ 3,500 ನೀಡಿದರೆ ರೈತರು ಇನ್ನೂ ಉತ್ಸಾಹದಿಂದ ಕಬ್ಬು ಬೆಳೆಯಲು ಮುಂದಾಗುತ್ತಾರೆ. ಈ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೂ ನೆರವಾಗುತ್ತದೆ.

ವೀರಕುಮಾರ್‌, ನಾಗರಸನಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.