ತ್ಯಾವಣಿಗೆ: ಸಮೀಪದ ಸೂಳೆಕೆರೆ ಸಿದ್ದೇಶ್ವರಸ್ವಾಮಿಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮುಂಜಾನೆ ಗಂಗಾಪೂಜೆಯೊಂದಿಗೆ ಸಿದ್ದೇಶ್ವರಸ್ವಾಮಿ ಮತ್ತು ಶಾಂತಮ್ಮ ದೇವಿಗೆ ಅಭಿಷೇಕ, ಪೂಜಾ ಕೈಕಂಕರ್ಯಗಳು ನಡೆದವು.
ವಿವಿಧ ವಾದ್ಯಗಳೊಂದಿಗೆ ಡೊಳ್ಳು ಕುಣಿತದೊಂದಿಗೆ ಸಿದ್ದೇಶ್ವರಸ್ವಾಮಿ, ಬಾತಿ ರೇವಣಸಿದ್ದೇಶ್ವರ ಮತ್ತು ಬೀರಲಿಂಗೇಶ್ವರ ಉತ್ಸವಮೂರ್ತಿಗಳನ್ನು ಮೆರವಣಿಗೆಯಲ್ಲಿ ರಥದ ಸಮೀಪ ಕರೆತರಲಾಯಿತು.
ನಂತರ ರಥದಲ್ಲಿ ಸಿದ್ದೇಶ್ವರಸ್ವಾಮಿ ಹಾಗೂ ಬಾತಿ ರೇವಣಸಿದ್ದೇಶ್ವರಸ್ವಾಮಿ ಉತ್ಸವಮೂರ್ತಿಗಳನ್ನು ಇಟ್ಟು, ರಥದ ನಾಲ್ಕು ಗಾಲಿಗಳಿಗೆ ಬುತ್ತಿ ಉಂಡೆ, ತೆಂಗಿನಕಾಯಿ ಇಟ್ಟು ಪೂಜಿಸಲಾಯಿತು. ನಂತರ ಚನ್ನಗಿರಿ ತಹಶೀಲ್ದಾರ್ ನಾಗರಾಜ್ ಅವರ ಸಮ್ಮುಖದಲ್ಲಿ ತೇರು ಬಾವುಟ, ಹೂವಿನ ಹರಾಜು ಪ್ರಕ್ರಿಯೆ ನಡೆಯಿತು.
ನಂತರ ಭಕ್ತರ ಹರ್ಷೋದ್ಘಾರದೊಂದಿಗೆ ಸಿದ್ದೇಶ್ವರಸ್ವಾಮಿಯ ರಥ ಎಳೆದರು. ಭಕ್ತರು ಮಂಡಕ್ಕಿ, ಮೆಣಸಿನಕಾಳು, ಉತ್ತುತ್ತಿ, ಬಾಳೆಹಣ್ಣು ರಥಕ್ಕೆ ಎರಚಿ ಹರಕೆ ಸಲ್ಲಿಸಿದರು. ಸಿದ್ದೇಶ್ವರಸ್ವಾಮಿಯ ಬಾವುಟ ₹ 1.11 ಲಕ್ಷಕ್ಕೆ ನಲ್ಲೂರು ಹನುಮಂತಪ್ಪ ಶೆಟ್ಟಿ ಹರಾಜು ಪಡೆದರು.
ದೇವಸ್ಥಾನ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಂ. ರೇವಣಸಿದ್ದಪ್ಪ, ಶಶಿಕಲಮೂರ್ತಿ, ಉಮೇಶ್, ನಾಡಿಗರ ಸಿದ್ದೇಶ್, ಅರ್ಚಕರಾದ ಪಿ.ಎಸ್.ಪ್ರಸನ್ನಕುಮಾರ್. ಶಿವಶಂಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.