ದಾವಣಗೆರೆ: ಜಿಲ್ಲೆಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಆಟೊ, ಕಾರು ಚಾಲಕರು ಪರದಾಡುವಂತಾಗಿದೆ. ಸಮರ್ಪಕ ಸಿಎನ್‌ಜಿ ಸಿಗದ ಕಾರಣ ಇಲ್ಲಿನ ಅನಿಲ ಪೂರೈಕೆ ಪಂಪ್‌ಗಳ ಎದುರು ವಾಹನಗಳ ಸರತಿ ಸಾಲು ಕಂಡುಬರುತ್ತಿದೆ.
ಹಲವು ದಿನಗಳಿಂದ ಇಲ್ಲಿನ ಐಟಿಐ ಗೇಟ್, ಬೈಪಾಸ್ ರಸ್ತೆ ಹಾಗೂ ಚಿಂದೋಡಿ ಲೀಲಾ ರಂಗಮಂದಿರದ ಬಳಿಯ ಪಂಪ್‌ಗಳ ಎದುರು ಸರತಿ ಸಾಲು ಸಾಮಾನ್ಯ ಎಂಬಂತಾಗಿದೆ.
ಅನಿಲ ತುಂಬಿಸಲು ಪಂಪ್‌ಗಳ ಎದುರು ಗಂಟೆಗಟ್ಟಲೇ ನಿಲ್ಲುವಂತಾಗಿದೆ. ಇದರಿಂದ ದಿನದಲ್ಲಿ ಬಾಡಿಗೆ ಓಡಿಸಲಾಗದೆ ಸಮರ್ಪಕ ದುಡಿಮೆಯೂ ಇಲ್ಲವಾಗಿದೆ ಎಂಬುದು ಆಟೊ ಚಾಲಕರ ಅಳಲು.
ವಾಹನಗಳಿಗೆ ಸಿಎನ್‌ಜಿ ಪೂರೈಕೆ ಆರಂಭವಾದಾಗಿನಿಂದ (ವರ್ಷದಿಂದ) ಈ ಸಮಸ್ಯೆ ಇದೆ. ನಗರದಲ್ಲಿ ಸಿಎನ್‌ಜಿ ಪಂಪ್‌ಗಳನ್ನು ಹೆಚ್ಚಿಸಬೇಕು. ಇಲ್ಲವೇ ಸಮರ್ಪಕ ಪೂರೈಕೆ ಮಾಡಬೇಕು ಎಂಬುದು ಆಟೊ, ಕಾರು ಚಾಲಕರ ಒತ್ತಾಯ.
ನಗರದಲ್ಲಿ ಆಟೊ, ಕಾರು, ಶಾಲಾ ವಾಹನ, ಬಸ್ ಸೇರಿದಂತೆ 5000ಕ್ಕೂ ಹೆಚ್ಚು ಸಿಎನ್‌ಜಿ ವಾಹನಗಳು ಇವೆ. ಇವುಗಳಿಗೆ ದಿನವೊಂದಕ್ಕೆ 4 ರಿಂದ 5 ಲೋಡ್ ಅನಿಲ ಬೇಕು. ಸದ್ಯ ದಿನಕ್ಕೆ 2 ಲೋಡ್ ಇಲ್ಲವೇ 1 ಲೋಡ್ ಬರುತ್ತದೆ. ಸಿಎನ್‌ಜಿಗಾಗಿ ದಿನವೊಂದಕ್ಕೆ ಎರಡು ಬಾರಿಯಂತೆ 6 ತಾಸು ಕಾಯುವ ಅನಿವಾರ್ಯತೆ ಚಾಲಕರದ್ದು.
‘ದಿನದಲ್ಲಿ 2 ಬಾರಿ ಅನಿಲ ಪೂರೈಸಲು ಪಂಪ್‌ಗಳ ಬಳಿ ಕಾಯಬೇಕು. ಬೆಳಿಗ್ಗೆ 8ಕ್ಕೆ ಬಂದಿದ್ದೆ. ಈಗ 11.30 ಆಗಿದೆ. ದಿನದ ಸಮಯ ಕಾಯುವುದರಲ್ಲೇ ಕಳೆದರೆ ದುಡಿಮೆ ಹೇಗೆ ಮಾಡುವುದು?’ ಎಂದು ಸರಸ್ವತಿ ನಗರದ ಆಟೊ ಚಾಲಕ ಜಗದೀಶ್ ಬೇಸರಿಸಿದರು.
‘ಅಸಮರ್ಪಕ ಅನಿಲ ಪೂರೈಕೆ ಸಂಬಂಧ ಹಲವು ಬಾರಿ ಅನಿಲ ಸರಬರಾಜು ಏಜೆನ್ಸಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ. ಏಜೆನ್ಸಿ ಬಂದ್ ಮಾಡಲಿ. ಇಲ್ಲವೇ ಸಿಎನ್‌ಜಿ ಪೂರೈಕೆ ಸ್ಥಗಿತಗೊಳಿಸಲಿ. ನಾವು ಅಡುಗೆ ಅನಿಲ ಬಳಸಿಯಾದರೂ ವಾಹನ ಓಡಿಸುತ್ತೇವೆ. ವಾಹನ ಚಾಲಕರ ಬಗ್ಗೆ ಕಾಳಜಿ ಇದ್ದರೆ ನಗರದಲ್ಲಿನ ಪಂಪ್‌ಗಳನ್ನು ಹೆಚ್ಚಿಸಬೇಕು’ ಎಂದು ಶಾಲಾ ವಾಹನ ಮತ್ತು ಆಟೊ ಚಾಲಕರ ಸಂಘದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ವಿ. ಒತ್ತಾಯಿಸಿದರು.
‘ವಾಹನಗಳಿಗೇ ಸರಿಯಾಗಿ ಸಿಎನ್‌ಜಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಗರದಲ್ಲಿ ಮನೆ ಮನೆಗೆ ಅನಿಲ ಪೂರೈಸುವ ಯೋಜನೆಯನ್ನೂ ಆರಂಭಿಸಲಾಗಿದೆ. ಹೀಗಾದರೆ ಪೂರೈಕೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ಸದ್ಯ ಅನಿಲ ಸರಬರಾಜು ಇಲ್ಲ. ಬೇರೆ ಕಂಪನಿಯಿಂದ ಪಡೆದುಕೊಂಡು ಅನಿಲ ಪೂರೈಸುತ್ತಿದ್ದೇವೆ. ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ದಿಂದ ಎಷ್ಟು ಪೂರೈಕೆಗೆ ಅನುಮತಿ ಇದೆಯೋ ಅಷ್ಟರಲ್ಲಿ ನಮಗೆ ಅಗತ್ಯವಿರುವಷ್ಟನ್ನು ಇತರೆ ಕಂಪನಿಯಿಂದ ಪಡೆಯುತ್ತಿದ್ದೇವೆ. ಹೆಚ್ಚಿನ ಬೇಡಿಕೆಗೂ ಮನವಿ ಸಲ್ಲಿಸಿದ್ದೇವೆ’ ಎಂದು ಮಹಾನಗರ ಸಿಎನ್‌ಜಿ ಗ್ಯಾಸ್ ಕಂಪನಿ (ಗೇಲ್‌ನಿಂದ ಅನುಮೋದಿತ)ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನೀಲ್ ಪೂಜಾರಿ ತಿಳಿಸಿದರು.
‘ಒಂದೊಂದು ಘಟಕಕ್ಕೆ ಗೇಲ್‌ನಿಂದ ಎಷ್ಟು ಪರವಾನಗಿ ಇರುತ್ತದೆಯೋ ಅದರ ಅನ್ವಯ ಪೂರೈಸಲು ಸಾಧ್ಯ. ಹೆಚ್ಚು ಕೊಡಿ ಎಂದು ಕೇಳುವಂತಿಲ್ಲ. ನಮ್ಮಲ್ಲೂ ಘಟಕ ನಿರ್ಮಿಸುವ ಹಾಗೂ ಗೇಲ್‌ನಿಂದ ಹೆಚ್ಚು ಬೇಡಿಕೆಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ’ ಎಂದು ಮಾಹಿತಿ ನೀಡಿದರು.
‘ದಾವಣಗೆರೆಯಲ್ಲಿ ಸದ್ಯ ದಿನಕ್ಕೆ 5000 ಕೆ.ಜಿ. ಮಾರಾಟವಾಗುತ್ತಿದೆ. ಈ ಪ್ರಮಾಣ ಹೆಚ್ಚಾದರೆ ನಾವು ಹೆಚ್ಚು ಪೂರೈಕೆಗೆ ಮನವಿ ಮಾಡಬಹುದು’ ಎಂದರು.
ಸಿಎನ್‌ಜಿ ಸಮರ್ಪಕ ಪೂರೈಕೆಗೆ ಅಧಿಕಾರಿಗಳು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಶುಕ್ರವಾರ ಸಂಸದರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದುಮಂಜುನಾಥ್ ವಿ. ಜಿಲ್ಲಾ ಘಟಕದ ಅಧ್ಯಕ್ಷ ಶಾಲಾ ವಾಹನ ಮತ್ತು ಆಟೊ ಚಾಲಕರ ಸಂಘ
ಸದ್ಯ ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತಿದ್ದೇವೆ. ಆನ್‌ಲೈನ್ ಸೇವೆ ಆರಂಭವಾದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆಸುನೀಲ್ ಪೂಜಾರಿ ಮಹಾನಗರ ಸಿಎನ್‌ಜಿ ಗ್ಯಾಸ್ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.